ನಿತೀಶ್ ಕುಮಾರ್
–ಪಿಟಿಐ ಚಿತ್ರ
ಪಟ್ನಾ: ಬಿಹಾರ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಬುಧವಾರ ಆಶಾ ಕಾರ್ಯಕರ್ತೆಯರ ಮಾಸಿಕ ಗೌರವಧನವನ್ನು ₹1000ದಿಂದ ₹3000ಕ್ಕೆ ಹೆಚ್ಚಿಸಿದ್ದಾರೆ. ಅಲ್ಲದೇ ಹೆರಿಗೆ ಮಾಡಿಸುವ ‘ಮಮತಾ’ ಕಾರ್ಯಕರ್ತೆಯರಿಗೆ ಪ್ರತಿ ಹೆರಿಗೆಗೆ ನೀಡುತ್ತಿದ್ದ ಗೌರವಧನವನ್ನು ದುಪ್ಪಟ್ಟು ಮಾಡಿ ₹600ಕ್ಕೆ ಏರಿಸಿದ್ದಾರೆ.
ಈ ಬಗ್ಗೆ ‘ಎಕ್ಸ್’ನಲ್ಲಿ ಮಾಹಿತಿ ನೀಡಿರುವ ಅವರು, ‘2005ರಿಂದ ನಮ್ಮ ಸರ್ಕಾರ ಆರೋಗ್ಯ ಸೇವೆಯನ್ನು ಸುಧಾರಿಸಿದೆ. ಆಶಾ ಮತ್ತು ಮಮತಾ ಕಾರ್ಯಕರ್ತೆಯರು ಗ್ರಾಮೀಣ ಆರೋಗ್ಯ ಸುಧಾರಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ’ ಎಂದಿದ್ದಾರೆ.
ಸರ್ಕಾರದ ನಿರ್ಧಾರಕ್ಕೆ ಪ್ರತಿಕ್ರಿಯಿಸಿದ ವಿಪಕ್ಷ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, ‘ನಾನು ಆರೋಗ್ಯ ಸಚಿವನಾಗಿದ್ದಾಗಲೇ ಗೌರವಧನ ಹೆಚ್ಚಳದ ನಿರ್ಧಾರ ಆಗಿತ್ತು. ನಿತೀಶ್ ಆಗ ಮೈತ್ರಿ ಬದಲಿಸಿ ಬಿಜೆಪಿ ಜೊತೆ ಹೋದರು. ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಗೌರವಧನವನ್ನೂ ಹೆಚ್ಚಿಸಬೇಕು’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.