
ಸಾಂದರ್ಭಿಕ ಚಿತ್ರ
ಪಟ್ನಾ: ಬಿಹಾರ ಮತ ಎಣಿಕೆ ಆರಂಭವಾಗಿದ್ದು, ಆರಂಭಿಕ ಹಂತದಲ್ಲಿ ಮಹಾಘಟಬಂಧನಗಿಂತ ಎನ್‌ಡಿಎ ಭಾರೀ ಮುನ್ನಡೆ ಸಾಧಿಸಿದೆ. ಈ ಹಿನ್ನೆಲೆಯಲ್ಲಿ ಬಿಹಾರದ ಕಾಂಗ್ರೆಸ್ ಮುಖ್ಯಸ್ಥ ರಾಜೇಶ್ ರಾಮ್ ಅವರು ಒಟ್ಟಾರೆ ಮತ ಎಣಿಕೆ ಪ್ರಕ್ರಿಯೆಯ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ.
ಚುನಾವಣಾ ಆಯೋಗದ ಮಾಹಿತಿ ಪ್ರಕಾರ, ಆಢಳಿತಾರೂಢ ಎನ್‌ಡಿಎ ಮೈತ್ರಿಕೂಟ ಆರಂಭಿಕ ಹಂತದಲ್ಲಿ ಭಾರೀ ಮುನ್ನಡೆ ಸಾಧಿಸಿದೆ. ಆರಂಭದಲ್ಲಿ ಎನ್‌ಡಿಎ 166 ಸ್ಥಾನಗಳ ಗಡಿ ದಾಟಿದ್ದು, ಮಹಾಘಟಬಂಧನ 56 ಸ್ಥಾನಗಳಿಗೆ ಕುಸಿದಿದೆ.
‘ಆರಂಭಿಕ ಮತ ಎಣಿಕೆ ಪ್ರಕ್ರಿಯೆ ದಿಢೀರನೆ ನಿಧಾನವಾಗಿದೆ. ಮತ ಎಣಿಕೆ ಪ್ರಕ್ರಿಯೆಯಲ್ಲಿ ಗಂಭೀರ ವ್ಯತ್ಯಾಸಗಳು ಕಂಡುಬಂದಿವೆ’ ಎಂದು ರಾಜೇಶ್ ರಾಮ್ ಆರೋಪಿಸಿದ್ದಾರೆ. ಆಡಳಿತಾರೂಢ ಸರ್ಕಾರ ‘ಮತ ಕಳ್ಳತನ’ ಮಾಡಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ಅವರು, ಎಣಿಕೆ ಕೇಂದ್ರಗಳ ಸುತ್ತಲೂ ‘ಸರ್ವರ್ ವ್ಯಾನ್’ಗಳು ಬಂದು ಹೋಗುತ್ತಿವೆ ಮತ್ತು ‘ಬೂತ್‌ಗಳಲ್ಲಿ ಅಕ್ರಮಗಳು’ ನಡೆಯುತ್ತಿವೆ ಎಂಬ ವರದಿಗಳಿವೆ ಎಂದು ಆರೋಪಿಸಿದರು.
‘ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ಮತ ಕಳ್ಳತನ ನಡೆದಿದೆ. ಹಾಗಿರುವಾಗ ಇಲ್ಲಿಯೂ ವಿಪಕ್ಷಗಳ ಮತ ಕಳ್ಳತನವಾಗಿರುವ ಅನುಮಾನಗಳಿವೆ’ ಎಂದು ಪಿಟಿಐ ವಿಡಿಯೋ ಸಂದೇಶದ ಮೂಲಕ ತಿಳಿಸಿದ್ದಾರೆ.
ಇನ್ನೂ ಬಿಹಾರ ಕಾಂಗ್ರೆಸ್ ಉಸ್ತುವಾರಿ ಕೃಷ್ಣ ಅಲ್ಲಾವರು ಮಾತನಾಡಿ, ‘ಸಂಖ್ಯೆಗಳ ಬಗ್ಗೆ ಈಗ ಪ್ರತಿಕ್ರಿಯಿಸುವುದಿಲ್ಲ. ನಾವು ದಿನದ ಕೊನೆಯವರೆಗೂ ಕಾಯುತ್ತೇವೆ. ಈಗ ಆಗಿರುವುದು ಕೇವಲ ಆರಂಭಿಕ ಮತ ಎಣಿಕೆ ಮಾತ್ರ. ದಿನದ ಅಂತ್ಯದಲ್ಲಿ ಅಂತಿಮ ಸಂಖ್ಯೆಗಳು ಬಂದ ಬಳಿಕ ಮಾತನಾಡುತ್ತವೆ’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.