
ಪಟ್ನಾ: ಬಿಹಾರದ ರಾಜಕೀಯ ಕಣದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್– ಪ್ರಧಾನಿ ನರೇಂದ್ರ ಮೋದಿ (ನಿ–ಮೋ) ಜೋಡಿಯ ಸುನಾಮಿಯ ಅಲೆಗೆ ಎನ್‌ಡಿಎ ಮೈತ್ರಿಕೂಟವು ಪ್ರಚಂಡ ದಿಗ್ವಿಜಯ ಸಾಧಿಸಿದೆ.
24 ಕ್ಷೇತ್ರಗಳಿರುವ ಸೀಮಾಂಚಲ ಪ್ರದೇಶದಲ್ಲಿ ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಪಕ್ಷವು ಐದು ಕ್ಷೇತ್ರಗಳಲ್ಲಿ ಜಯ ಸಾಧಿಸಿತು. ಒಂದು ಡಜನ್ ಕ್ಷೇತ್ರಗಳಲ್ಲಿ ಮಹಾಮೈತ್ರಿ ಅಭ್ಯರ್ಥಿಗಳ ಸೋಲಿಗೆ ಕಾರಣವಾಯಿತು.
ಆರ್‌ಜೆಡಿ ನೇತೃತ್ವದ ಮಹಾಮೈತ್ರಿಗೆ ಪಾರಂಪರಿಕವಾಗಿ ಸೀಮಾಂಚಲ ಪ್ರದೇಶ ಭದ್ರ ಕೋಟೆ. 2020ರ ಚುನಾವಣೆಯಲ್ಲಿ ಓವೈಸಿ ಅವರ ಪಕ್ಷವು ಮಹಾಮೈತ್ರಿಯ ಕೋಟೆಗೆ ಪ್ರವೇಶಿಸಿ ವಿಪಕ್ಷಗಳ ಕೂಟಕ್ಕೆ ಹೊಡೆತ ನೀಡಿತ್ತು. ಈ ಸಲ ಅದಕ್ಕಿಂತ ತೀವ್ರ ಹಾನಿ ಮಾಡಿದೆ. ರಾಜ್ಯದಲ್ಲಿ 28 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಪಕ್ಷವು ಹಲವು ಕಡೆಗಳಲ್ಲಿ ಮಹಾಮೈತ್ರಿಯ ಮತಗಳಿಗೆ ಕನ್ನ ಹಾಕಿತು.
ಬಿಹಾರದಲ್ಲಿ ಅತೀ ಹೆಚ್ಚು ಮುಸ್ಲಿಂ ಜನಸಂಖ್ಯೆ ಇರುವುದು ನೇಪಾಳ ಹಾಗೂ ಪಶ್ಚಿಮ ಬಂಗಾಳ ಗಡಿಯಲ್ಲಿರುವ ಸೀಮಾಂಚಲ ಸೀಮೆಯಲ್ಲಿ. ಕಿಶನ್‌ಗುಂಜ್, ಅರಾರಿಯಾ, ಕತಿಹಾರ್ ಮತ್ತು ಪೂರ್ಣಿಯಾ ಒಳಗೊಂಡ ನಾಲ್ಕು ಜಿಲ್ಲೆಗಳಲ್ಲಿ ಈ ಸಲ ಮಹಾಮೈತ್ರಿಗೆ ಸಿಕ್ಕಿದ್ದು ಮೂರು ಸೀಟುಗಳಷ್ಟೇ. ಓವೈಸಿ ಪಕ್ಷವು ತ್ರಿಕೋನ ಸ್ಪರ್ಧೆಯನ್ನು ಹುಟ್ಟು ಹಾಕಿದ್ದರಿಂದ ಎನ್‌ಡಿಎ ಮೈತ್ರಿಕೂಟಕ್ಕೆ ಅನುಕೂಲವಾಯಿತು. ಆರ್‌ಜೆಡಿ ಹಾಗೂ ಕಾಂಗ್ರೆಸ್‌ನ ಉನ್ನತ ನಾಯಕರು ಸೋಲು ಕಂಡರು. ಇದೀಗ ಓವೈಸಿ ಅವರು 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಕಡೆಗೆ ದೃಷ್ಟಿ ನೆಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.