ADVERTISEMENT

ಬಿಹಾರ ಚುನಾವಣೆ ಫಲಿತಾಂಶ: 10 ಮುಖ್ಯಾಂಶಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ನವೆಂಬರ್ 2020, 9:21 IST
Last Updated 10 ನವೆಂಬರ್ 2020, 9:21 IST
ಬಿಹಾರದ ಬೆಗುಸರಾಯ್‌ನಲ್ಲಿ ಮತ ಎಣಿಕೆ ಪ್ರಗತಿಯಲ್ಲಿದೆ – ಪಿಟಿಐ ಚಿತ್ರ
ಬಿಹಾರದ ಬೆಗುಸರಾಯ್‌ನಲ್ಲಿ ಮತ ಎಣಿಕೆ ಪ್ರಗತಿಯಲ್ಲಿದೆ – ಪಿಟಿಐ ಚಿತ್ರ   

ಪಟ್ನಾ: ಬಿಹಾರ ವಿಧಾನಸಭಾ ಚುನಾವಣೆ ಮತ ಎಣಿಕೆ ಪ್ರಗತಿಯಲ್ಲಿದ್ದು, ಆರ್‌ಜೆಡಿಯ ತೇಜಸ್ವಿ ಯಾದವ್ ನೇತೃತ್ವದ ಮಹಾಘಟಬಂಧನ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ನಡುವೆ ಪೈಪೋಟಿ ಏರ್ಪಟ್ಟಿದೆ. ಮತಗಟ್ಟೆ ಸಮೀಕ್ಷೆಗಳ ಭವಿಷ್ಯವನ್ನು ಮೀರಿ ಎನ್‌ಡಿಎಯು ಬಹುಮತದತ್ತ ಸಾಗುತ್ತಿದೆ. ಹೆಚ್ಚಿನ ಮತಗಟ್ಟೆ ಸಮೀಕ್ಷೆಗಳು ಮಹಾಘಟಬಂಧನ ಜಯಗಳಿಸಲಿದೆ ಎಂದು ಹೇಳಿದ್ದವು. ಮತ ಎಣಿಕೆ ಪ್ರಗತಿಯಲ್ಲಿದ್ದು, 10 ಮುಖ್ಯಾಂಶಗಳು ಇಲ್ಲಿವೆ.

1. ಮಧ್ಯಾಹ್ನದ ವೇಳೆಗೆ ಎನ್‌ಡಿಎ ಬಹುಮತದತ್ತ ಸಾಗಿದೆ. 124 ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಮಹಾಘಟಬಂಧನವು 103 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

2. ರಾಘೋಪುರ ಕ್ಷೇತ್ರದಲ್ಲಿ ಆರ್‌ಜೆಡಿಯ ತೇಜಸ್ವಿ ಯಾದವ್ ಬಿಜೆಪಿಯ ಸತೀಶ್ ಕುಮಾರ್ ವಿರುದ್ಧ 2,500ಕ್ಕೂ ಹೆಚ್ಚು ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.

ADVERTISEMENT

3. ಜೆಡಿಯು 49 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ ಮಿತ್ರಪಕ್ಷ ಬಿಜೆಪಿಯು 75 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

4. ತೇಜಸ್ವಿ ಯಾದವ್ ಅವರ ಆರ್‌ಜೆಡಿಯು 64 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಕಾಂಗ್ರೆಸ್ 20 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ.

5. ಹಸನಾಪುರದಲ್ಲಿ ಆರ್‌ಜೆಡಿಯ ತೇಜ್ ಪ್ರತಾಪ್ ಯಾದವ್ ಜೆಡಿಯುನ ರಾಜ್‌ಕುಮಾರ್ ರೇ ಅವರಿಗಿಂತ ಮುನ್ನಡೆಯಲ್ಲಿದ್ದಾರೆ.

6. ಬಿಜೆಪಿಯು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವತ್ತ ಸಾಗುತ್ತಿದೆ. 2015ರ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ ಈ ಬಾರಿ ಬಿಜೆಪಿ ಉತ್ತಮ ಸಾಧನೆ ಮಾಡಿದೆ. 2015ರಲ್ಲಿ ಬಿಜೆಪಿಯು 53 ಕ್ಷೇತ್ರಗಳಲ್ಲಷ್ಟೇ ಜಯ ಸಾಧಿಸಿತ್ತು.

7. 2015ರ ಚುನಾವಣೆಗೆ ಹೋಲಿಸಿದರೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಭಾರಿ ಹಿನ್ನಡೆಯಾಗಿದೆ. 2015ರ ಚುನಾವಣೆಯಲ್ಲಿ 71 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದ ಜೆಡಿಯು ಆ ಪೈಕಿ 24 ಕ್ಷೇತ್ರಗಳಲ್ಲಿ ಈ ಬಾರಿ ಹಿನ್ನಡೆ ಅನುಭವಿಸಿದೆ.

8. ಲೋಕ ಜನಶಕ್ತಿ ಪಕ್ಷದ ಅಭ್ಯರ್ಥಿಗಳು ಐದು ಕ್ಷೇತ್ರಗಳಲ್ಲಿ ಆರಂಭಿಕ ಮುನ್ನಡೆ ಕಾಯ್ದುಕೊಂಡಿದ್ದರು. ಸದ್ಯ (ಮಧ್ಯಾಹ್ನ 2.30ರ ವೇಳೆಗೆ) ಎರಡು ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಅಸಾದುದ್ದೀನ್ ಒವೈಸಿ ಅವರ ಎಐಎಂಐಎಂ ಹಾಗೂ ಬಹುಜನ ಸಮಾಜ ಪಕ್ಷದ ಅಭ್ಯರ್ಥಿಗಳು ತಲಾ ಒಂದು ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರೆ, 5 ಕ್ಷೇತ್ರಗಳಲ್ಲಿ ಪಕ್ಷೇತರರು ಮುನ್ನಡೆಯಲ್ಲಿದ್ದಾರೆ.

9. ಮಾಜಿ ಮುಖ್ಯಮಂತ್ರಿ, ಎನ್‌ಡಿಎ ಮಿತ್ರಪಕ್ಷದ ಜೀತನ್ ರಾಂ ಮಾಂಝಿ ಇಮಾಮ್‌ಗಂಜ್ ಕ್ಷೇತ್ರದಲ್ಲಿ ಆರ್‌ಜೆಡಿ ಅಭ್ಯರ್ಥಿ ಉದಯ್ ನರೈನ್ ಚೌಧರಿ ವಿರುದ್ಧ ಹಿನ್ನಡೆ ಅನುಭವಿಸುತ್ತಿದ್ದಾರೆ.

10. ಶರದ್ ಯಾದವ್ ಅವರ ಪುತ್ರಿ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸುಭಾಷಿಣಿ ಬಿಹಾರ್‌ಗಂಜ್ ಕ್ಷೇತ್ರದಲ್ಲಿ ಹಿನ್ನಡೆ ಅನುಭವಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.