
ಪಟ್ನಾ: ಅಸಾದುದ್ದೀನ್ ಓವೈಸಿ ನೇತೃತ್ವವ ಎಐಎಐಎಂ ಪಕ್ಷವು ಬಿಹಾರ ಚುನಾವಣೆಯಲ್ಲಿ ಐದು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.
ಮುಸ್ಲಿಂ ಬಾಹುಳ್ಯದ ಸೀಮಾಂಚಲ ವಲಯದಲ್ಲಿ ಪಕ್ಷ ಪ್ರಾಬಲ್ಯ ಮೆರೆದಿದೆ. 243 ಕ್ಷೇತ್ರಗಳಲ್ಲಿ 29 ಕ್ಷೇತ್ರಗಳಲ್ಲಿ ಎಐಎಐಎಂ ಸ್ಪರ್ಧಿಸಿತ್ತು. ಈ ಪೈಕಿ 24 ಕ್ಷೇತ್ರಗಳು ಸೀಮಾಂಚಲ ವಲಯದಲ್ಲಿ ಇದ್ದವು.
ಎಐಎಂಐಎಂನ ಅಖ್ತರುಲ್ ಇಮಾಮ್ ಅವರು ಅಮೌರ್ ಕ್ಷೇತ್ರದಿಂದ 38,928 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. 1,00,836 ಮತಗಳು ಅವರ ಪರವಾಗಿ ಬಿದ್ದಿದ್ದವು. ಕೋಚಧಾಮನ್ ಕ್ಷೇತ್ರದಿಂದ ಎಐಎಂಐಎಂನ ಮಹಮ್ಮದ್ ಆಲಂ 23,021 ಮತಗಳ ಅಂತರದಿಂದ ಗೆದ್ದಿದ್ದಾರೆ. ಅವರ ಪರವಾಗಿ 81,860 ಮತಗಳು ಚಲಾವಣೆಯಾಗಿದ್ದವು.
ಬೈಸಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಗುಲಾಂ ಸರ್ವರ್ 27,251 ಮತಗಳಿಂದ ಜಯ ಸಾಧಿಸಿದ್ದಾರೆ. ಅವರಿಗೆ ಬಿದ್ದ ಒಟ್ಟು ಮತ 92,766. ಜೊಕಿಹಟ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮುಹಮ್ಮದ್ ಮುರ್ಷಿದ್ ಆಲಂ 28,803 ಮತಗಳ ಅಂತರದಿಂದ ಜಯಭೇರಿಯಾಗಿದ್ದಾರೆ. ಅವರು ಒಟ್ಟು 83,737 ಮತ ಗಳಿಸಿದ್ದಾರೆ.
ಬಹದ್ದೂರ್‌ಗಂಜ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮುಹಮ್ಮದ್ ತೌಸಿಫ್ ಆಲಂ 28,726 ಮತಗಳ ಗೆಲುವು ಸಾಧಿಸಿದ್ದಾರೆ. ಅವರಿಗೆ 87,315 ಮತಗಳು ಬಿದ್ದವು.
ಯಾವುದೇ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳದೆ, ಎಐಎಐಎಂ ಸ್ವತಂತ್ರವಾಗಿ ಸ್ಪರ್ಧಿಸಿತ್ತು.
‘ಬಿಹಾರದ ಜನರು ಸ್ಪಷ್ಟ ತೀರ್ಪು ನೀಡಿದ್ದಾರೆ’ ಎಂದು ಓವೈಸಿ ಫಲಿತಾಂಶದ ಬಳಿಕ ಹೈದರಾಬಾದ್‌ನಲ್ಲಿ ಹೇಳಿದ್ದಾರೆ.
ಸೀಮಾಂಚಲ ಪ್ರದೇಶದಲ್ಲಿ ಅಭಿವೃದ್ಧಿ ಮಾಡುವುದು, ಶಿಶು ಮರಣ ಕಡಿಮೆ ಮಾಡುವುದು, ಶಾಲೆ, ಆಸ್ಪತ್ರೆ, ಸೇತುವೆ ಹಾಗೂ ಕಾರ್ಖಾನೆಗಳನ್ನು ನಿರ್ಮಿಸುವುದರ ಬಗ್ಗೆ ನಾವು ಗಮನ ಹರಿಸುತ್ತೇವೆ’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.