ಎನ್‌ಡಿಎ, ಇಂಡಿಯಾ ಮೈತ್ರಿಕೂಟಕ್ಕೆ ಸೀಟು ಹಂಚಿಕೆ ಸವಾಲು
ಪಟ್ನಾ: ಬಿಹಾರ ವಿಧಾನಸಭೆಗೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೆ ಆಡಳಿತರೂಢ ಎನ್‌ಡಿಎ ಹಾಗೂ ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟಕ್ಕೆ ಸೀಟು ಹಂಚಿಕೆ ಸವಾಲು ಎದುರಾಗಿದೆ.
ಈಗಾಗಲೇ ಉಭಯ ಮೈತ್ರಿಕೂಟಗಳಲ್ಲಿ ಸೀಟು ಹಂಚಿಕೆ ಮಾತುಕತೆಗಳು ಚುರುಕುಗೊಂಡಿವೆ. ಈ ನಡುವೆ ಇಂಡಿಯಾ ಕೂಟಕ್ಕೆ ಜೆಎಂಎಂ ಹಾಗೂ ಎಲ್‌ಜೆಪಿ ಪಕ್ಷಗಳು ಸೇರ್ಪಡೆಗೊಳ್ಳುವ ಮೂಲಕ ಈ ಕೂಟದಲ್ಲಿ 8 ಪಕ್ಷಗಳಿವೆ.
ಇಂಡಿಯಾ ಕೂಟದಲ್ಲಿ ಲಾಲು ಪ್ರಸಾದ್ ನೇತೃತ್ವದ ಆರ್‌ಜೆಡಿ, ಕಾಂಗ್ರೆಸ್, ವಿಐಪಿ, ಸಿಪಿಐ–ಎಂಎಲ್, ಸಿಪಿಐ, ಸಿಪಿಐ(ಎಂ) ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೂರೇನ್ ನೇತೃತ್ವದ ಜೆಎಂಎಂ ಹಾಗೂ ಪಾಸ್ವಾನ್ ಕುಟುಂಬದ ಎಲ್‌ಜೆಪಿ ಪಕ್ಷಗಳಿವೆ.
ಬಲ್ಲ ಮೂಲಗಳ ಪ್ರಕಾರ, 243 ಸ್ಥಾನಗಳಲ್ಲಿ ಆರ್‌ಜೆಡಿ 130 ಸ್ಥಾನಗಳಲ್ಲಿ ಸ್ಪರ್ಧೆ ಮಾಡುವುದು ಖಚಿತವಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 70 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿ ಕೇವಲ 19 ಸ್ಥಾನಗಳಲ್ಲಿ ಗೆಲುವು ದಾಖಲಿಸಿತ್ತು. ಆದರೆ ಎಡ ಪಕ್ಷಗಳು 29 ಸ್ಥಾನಗಳಲ್ಲಿ ಸರ್ಧೆ ಮಾಡಿ 16 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿದ್ದವು. ಈ ಹಿನ್ನೆಯಲ್ಲಿ ಎಡ ಪಕ್ಷಗಳು 50 ಸ್ಥಾನಗಳನ್ನು ನೀಡುವಂತೆ ಪಟ್ಟು ಹಿಡಿದಿವೆ. ಆದ್ದರಿಂದ ಕಾಂಗ್ರೆಸ್‌ಗೆ ಸ್ಪರ್ಧೆ ಮಾಡಲು 40 ರಿಂದ 50 ಸ್ಥಾನಗಳು ಸಿಗಬಹುದು ಎನ್ನಲಾಗಿದೆ. ಉಳಿದ ಕ್ಷೇತ್ರಗಳನ್ನು ಇತರೆ ಪಕ್ಷಗಳಿಗೆ ಬಿಟ್ಟುಕೊಡಲಾಗುವುದು ಎಂದು ವರದಿಗಳು ಹೇಳಿವೆ.
ಎನ್‌ಡಿಎ ಮೈತ್ರಿಕೂಟದಲ್ಲಿ ಜೆಡಿ(ಯು), ಬಿಜೆಪಿ, ಎಲ್‌ಜೆಪಿ (ಚಿರಾಗ್), ಜಿತನ್ ರಾಮ್ ಮಾಂಝಿ ನೇತೃತ್ವದ ಎಚ್‌ಎಎಂ ಹಾಗೂ ಉಪೇಂದ್ರ ಕುಶ್ವಾಹ ಅವರ ಆರ್‌ಎಲ್‌ಎಂ ಪಕ್ಷಗಳಿವೆ. ಇಲ್ಲಿ ಬಿಜೆಪಿ ಹಾಗೂ ಜೆಡಿ(ಯು) ಪಕ್ಷಗಳು 230 ಸ್ಥಾನಗಳಲ್ಲಿ ಸ್ಪರ್ಧೆ ಮಾಡಲಿದ್ದು . ಉಳಿದ ಕ್ಷೇತ್ರಗಳನ್ನು ಇತರೆ ಪಕ್ಷಗಳಿಗೆ ಬಿಟ್ಟುಕೊಡಲಿವೆ ಎನ್ನಲಾಗಿದೆ.
ಸದ್ಯ ಇಂಡಿಯಾ ಮೈತ್ರಿಕೂಟಕ್ಕೆ ಸೀಟು ಹಂಚಿಕೆ ಸವಾಲು ಎದುರಾಗಿದೆ. ವಿಐಪಿ ಹಾಗೂ ಎಡ ಪಕ್ಷಗಳು ಹೆಚ್ಚಿನ ಸ್ಥಾನಗಳನ್ನು ನೀಡುವಂತೆ ಪಟ್ಟು ಹಿಡಿದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.