ADVERTISEMENT

Bihar Exit Poll: ಎನ್‌ಡಿಎಗೆ ಬಹುಮತ ಎಂದ ಹಲವು ಮತಗಟ್ಟೆ ಸಮೀಕ್ಷೆಗಳು

ಹಲವು ಸಂಸ್ಥೆಗಳು ಬಿಹಾರ ವಿಧಾನಸಭೆ ಚುನಾವಣೆಯ ಚುನಾವಣೋತ್ತರ ಮತಗಟ್ಟೆ ಸಮೀಕ್ಷೆಗಳು ಬಹಿರಂಗವಾಗಿದ್ದು ಹಲವು ಸಮೀಕ್ಷೆಗಳು ಎನ್‌ಡಿಎಗೆ ಬಹುಮತ ಸಿಗಲಿವೆ ಎಂದು ಅಂದಾಜಿಸಿವೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ನವೆಂಬರ್ 2025, 13:27 IST
Last Updated 11 ನವೆಂಬರ್ 2025, 13:27 IST
<div class="paragraphs"><p>ರಾಹುಲ್ ಗಾಂಧಿ, ನಿತೀಶ್ ಕುಮಾರ್ ಹಾಗೂ ತೇಜಸ್ವಿ ಯಾದವ್</p></div>

ರಾಹುಲ್ ಗಾಂಧಿ, ನಿತೀಶ್ ಕುಮಾರ್ ಹಾಗೂ ತೇಜಸ್ವಿ ಯಾದವ್

   

ಬೆಂಗಳೂರು: ಇಂದು ಸಂಜೆ 7ಕ್ಕೆ ಎರಡನೇ ಹಂತದ ಮತದಾನ ಅಂತ್ಯಗೊಳ್ಳುವ ಮೂಲಕ ಬಿಹಾರ ವಿಧಾನಸಭಾ ಚುನಾವಣೆ ಅಂತ್ಯವಾಗಿದ್ದು ಎಲ್ಲರ ಚಿತ್ತ ಮತ ಎಣಿಕೆಯತ್ತ ನೆಟ್ಟಿದೆ.

ಇದಕ್ಕೂ ಮುನ್ನ ಹಲವು ಸಂಸ್ಥೆಗಳು ಬಿಹಾರ ವಿಧಾನಸಭೆ ಚುನಾವಣೆಯ ಚುನಾವಣೋತ್ತರ ಮತಗಟ್ಟೆ ಸಮೀಕ್ಷೆಗಳು ಬಹಿರಂಗವಾಗಿದ್ದು ಹಲವು ಸಮೀಕ್ಷೆಗಳು ಎನ್‌ಡಿಎಗೆ ಬಹುಮತ ಸಿಗಲಿವೆ ಎಂದು ಅಂದಾಜಿಸಿವೆ.

ADVERTISEMENT

243 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಬಹುಮತಕ್ಕೆ 122 ಸ್ಥಾನಗಳನ್ನು ಗೆಲ್ಲುವುದು ಅನಿವಾರ್ಯ.

ಒಟ್ಟು 243 ಸ್ಥಾನಗಳಿಗೆ ಎರಡು ಹಂತದಲ್ಲಿ ಯಶಸ್ವಿ ಮತದಾನ ನಡೆಯಿತು. ನವೆಂಬರ್ 14 ಕ್ಕೆ ಮತ ಎಣಿಕೆ ನಡೆದು ಅಂದೇ ಫಲಿತಾಂಶ ಪ್ರಕಟವಾಗಲಿದೆ.

10 ಕ್ಕೂ ಹೆಚ್ಚು ಸಂಸ್ಥೆಗಳು ಬಿಹಾರ ಚುನಾವಣೆಯ ಮತಗಟ್ಟೆ ಸಮೀಕ್ಷೆಗಳನ್ನು ಪ್ರಕಟಿಸಿವೆ. ಅದರಲ್ಲಿ ಬರೋಬ್ಬರಿ 9 ಸಮೀಕ್ಷೆಗಳು ಎನ್‌ಡಿಎಗೆ ಬಹುಮತ ಎಂದು ಹೇಳಿವೆ. ಎಲ್ಲವೂ ಎನ್‌ಡಿಎಗೆ 130 ಕ್ಕೂ ಹೆಚ್ಚು ಸ್ಥಾನಗಳನ್ನು ತೋರಿಸಿವೆ. ಎನ್‌ಡಿಎನಲ್ಲಿ ಬಿಜೆಪಿ, ಜೆಡಿಯು, ಎಲ್‌ಜೆಪಿ ಹಾಗೂ ಎಚ್‌ಎಎಂ ಪಕ್ಷಗಳು ಸೇರಿವೆ. ಇವರಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ನಂತರ ಜೆಡಿಯು ಎಲ್‌ಜೆಪಿ ಇರಲಿವೆ ಎಂದು ಅಂದಾಜಿಸಿವೆ.

ಚುನಾವಣೆಗೂ ಮುನ್ನ ಎನ್‌ಡಿಎದಿಂದ ಬಿಜೆಪಿ–ಜೆಡಿಯು ತಲಾ 100 ಸ್ಥಾನಗಳಲ್ಲಿ ಸ್ಪರ್ಧಿಸಿದ್ದವು. ಉಳಿದವಲ್ಲಿ ಎಲ್‌ಜೆಪಿ ಹಾಗೂ ಎಚ್‌ಎಎಂ ಪಕ್ಷಗಳಿಗೆ ನೀಡಿದ್ದರು.

ಇನ್ನು, ‍ಪ್ರಾಥಮಿಕ ಮಾಹಿತಿಗಳ ಪ್ರಕಾರ ಜರ್ನೊ ಮಿರರ್ ಎಂಬ ಒಂದು ಸಂಸ್ಥೆ ಮಾತ್ರ ಮಹಾಘಟಬಂಧನ್‌ಗೆ ಬಹುಮತ ತೋರಿಸಿದೆ. ಅವರ ಪ್ರಕಾರ ಮಹಾಘಟಬಂಧನ್‌ಗೆ 130 ರಿಂದ 140 ಸ್ಥಾನ ಹಾಗೂ ಎನ್‌ಡಿಎಗೆ 100 ರಿಂದ 110 ಸ್ಥಾನಗಳು ಸಿಗಲಿವೆ. ಒವೈಸಿಯ ಎಂಎಎಂಐಎಂ ಪಕ್ಷ ಗರಿಷ್ಠ 4 ಸ್ಥಾನ ಗೆಲ್ಲಬಹುದು ಎಂದು ಹೇಳಿದೆ.

ಬಿಹಾರ ಮಹಾಘಟಬಂಧನ್‌ ಕೂಟದಲ್ಲಿ ಲಾಲು ಪ್ರಸಾದ್ ಅವರ ಆರ್‌ಜೆಡಿ (143), ಕಾಂಗ್ರೆಸ್ 61, ಎಡಪಕ್ಷಗಳು 31, ಉಳಿದ ಸೀಟುಗಳನ್ನು ವಿಐಪಿ ಪಾರ್ಟಿ ಹಾಗೂ ಇತರರಿಗೆ ಬಿಟ್ಟು ಕೊಡಲಾಗಿತ್ತು.

ಈ ಮತಗಟ್ಟೆ ಸಮೀಕ್ಷೆಗಳಲ್ಲಿ ರಾಜಕೀಯ ತಂತ್ರಗಾರ ಪ್ರಶಾಂತ್ ಕಿಶೋರ್ ಅವರ ಜನ ಸುರಾಜ್ ಪಾರ್ಟಿ ಗರಿಷ್ಠ 4 ರಿಂದ 5 ಸ್ಥಾನಗಳನ್ನು ಗೆಲ್ಲಬಹುದು ಹಾಗೂ ಪಕ್ಷೇತರರು ಗರಿಷ್ಠ 5 ರಿಂದ ಆರು ಸ್ಥಾನಗಳನ್ನು ಗೆಲ್ಲಬಹುದು ಎಂದು ಅಂದಾಜಿಸಲಾಗಿದೆ.

ಬಹುತೇಕ ಮತಗಟ್ಟೆ ಸಮೀಕ್ಷೆಗಳನ್ನು ಪರಿಶೀಲಿಸಿದಾಗ ಬಿಹಾರದಲ್ಲಿ ಮತ್ತೆ ಎನ್‌ಡಿಎ ಅಧಿಕಾರ ಹಿಡಿಯುವುದು ನಿಚ್ಚಳ ಎಂದು ಹೇಳಲಾಗುತ್ತಿದೆ. ಸೀಟು ಹಂಚಿಕೆಯಲ್ಲಿ ಗೊಂದಲ ಮಾಡಿಕೊಳ್ಳದೇ ಹಾಗೂ ಸಿಎಂ ಅಭ್ಯರ್ಥಿಯನ್ನು ಘೋಷಿಸದೇ ಮತ್ತು ಮೋದಿ–ಅಮಿತ್ ಶಾ ರಣತಂತ್ರದ ಜೊತೆ ರಾಮಮಂದಿರ, ಕುಂಭಮೇಳ, ಬಿಹಾರ ಮಹಿಳೆಯರಿಗೆ, ಮಧ್ಯಮ ವರ್ಗದವರಿಗೆ ಕೆಲ ಆಕರ್ಷಣೆಯ ಭರವಸೆಗಳನ್ನು ನೀಡಿ ಎನ್‌ಡಿಎ ಗೆಲುವಿನ ಕೇಕೆ ಹಾಕಲು ಯೋಜನೆ ರೂಪಿಸಿತ್ತು ಎಂದು ವಿಶ್ಲೇಷಿಸಲಾಗುತ್ತಿದೆ.

ಆರ್‌ಜೆಡಿಯ ತೇಜಸ್ವಿ ಯಾದವ್ ಅವರ ಉಚಿತ ಭರವಸೆಗಳು ಹಾಗೂ ಕಾಂಗ್ರೆಸ್‌ನ ರಾಹುಲ್ ಗಾಂಧಿ ಅವರ ಮತಗಳ್ಳತನ ವಿರುದ್ಧದ ಅಭಿಯಾನಗಳು ಎಷ್ಟರ ಮಟ್ಟಿಗೆ ಅವರ ಕೈ ಹಿಡಿದವು ಎನ್ನುವುದು ಅಂತಿಮ ಫಲಿತಾಂಶದ ಬಳಿಕವೇ ಗೊತ್ತಾಗಲಿದೆ.

ಒಟ್ಟು 243 ಕ್ಷೇತ್ರಗಳಿಗೆ ಎರಡು ಹಂತದಲ್ಲಿ ಮತದಾನ ನಡೆದಿತ್ತು. ಈ ಬಾರಿ ದಾಖಲೆಯ ಮತದಾನ ನಡೆದಿದ್ದು ಶೇ 65ಕ್ಕೂ ಹೆಚ್ಚು ಮತದಾನ ಆಗಿದೆ ಎನ್ನಲಾಗಿದೆ. 2020ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮತದಾನದ ಒಟ್ಟು ಪ್ರಮಾಣ ಶೇ 57.29 ಆಗಿತ್ತು. 

2020 ರ ಬಿಹಾರ ಚುನಾವಣೆಯ ಫಲಿತಾಂಶದಲ್ಲಿ ಎನ್‌ಡಿಎ 125 ಸ್ಥಾನಗಳನ್ನು (ಶೇ 37.26 ಮತ ಪ್ರಮಾಣ), ಮಹಾಘಟಬಂಧನ್ 110 ಸ್ಥಾನ (ಶೇ 37.23 ಮತ ಪ್ರಮಾಣ) ಹಾಗೂ ಇತರರು 8 ಸ್ಥಾನಗಳನ್ನು ಪಡೆದಿದ್ದರು. ಆಗಲೂ ಅನೇಕ ಸಮೀಕ್ಷೆ ಎನ್‌ಡಿಎಗೆ ಬಹುಮತ ಎಂದು ಹೇಳಿದ್ದವು. ಕೆಲವು ಎಂಜಿಬಿಗೆ ಬಹುಮತ ಎಂದು ಹೇಳಿದ್ದವು. ಆದರೆ ಈ ಸಾರಿ ಕಳೆದ ಬಾರಿಗಿಂತೂ ಎನ್‌ಡಿಎಗೆ ಬಹುತೇಕ ಸಮೀಕ್ಷೆಗಳು ಹೆಚ್ಚಿನ ಸೀಟುಗಳನ್ನು ತೋರಿಸಿರುವುದು ಎದ್ದು ಕಾಣುತ್ತದೆ.

IANS-Matrize ಸಂಸ್ಥೆಯ ಮತಗಟ್ಟೆಯ ಸಮೀಕ್ಷೆಯೂ ಸಹ ಎನ್‌ಡಿಎಗೆ ಬಹುಮತ ಎಂದು ಹೇಳಿದೆ. ಅವರ ಪ್ರಕಾರ ಎನ್‌ಡಿಎಗೆ 147 ರಿಂದ 167 ಸ್ಥಾನಗಳು ಹಾಗೂ ಮಹಾಘಟಬಂಧನ್‌ಗೆ 70 ರಿಂದ 90 ಸ್ಥಾನಗಳು ಸಿಗಲಿವೆ ಎಂದು ಅಂದಾಜಿಸಿವೆ.

ಟೈಮ್ಸ್ ನೌ ಹಾಗೂ ಜೆವಿಸಿ ಸಂಸ್ಥೆಯ ಸಮೀಕ್ಷೆಯೂ ಸಹ ಎನ್‌ಡಿಎಗೇ ಬಹುಮತ ಎಂದಿದೆ. ಅವರ ಪ್ರಕಾರ ಎನ್‌ಡಿಎಗೆ 135ರಿಂದ 150 ಹಾಗೂ ಮಹಾಘಟಬಂಧನ್ ಅವರಿಗೆ 88 ರಿಂದ 103 ಸೀಟುಗಳು ಸಿಗಲಿವೆ ಎಂದು ಅಂದಾಜಿಸಿದೆ.

ಪೀಪಲ್ ಪಲ್ಸ್ ಸಂಸ್ಥೆಯೂ ಸಹ ಎನ್‌ಡಿಎಗೆ ಬಹುಮತ ಬರಬಹುದು ಎಂದು ಅಂದಾಜಿಸಿದೆ. ಅದರ ಪ್ರಕಾರ ಎನ್‌ಡಿಎಗೆ 133 ರಿಂದ 159 ಸ್ಥಾನ ಮತ್ತು ಮಹಾಘಟಬಂಧನ್‌ಗೆ 75 ರಿಂದ 101 ಸ್ಥಾನಗಳು ಸಿಗಲಿವೆ ಎನ್ನಲಾಗಿದೆ.

ಪೋಲ್‌ ಡೈರಿ ಸಂಸ್ಥೆ ಎನ್‌ಡಿಎ ಅತಿಹೆಚ್ಚು ಸ್ಥಾನಗಳನ್ನು ಗೆಲ್ಲಬಹುದು ಎಂದು ಅಂದಾಜಿಸಿ, ಎಂಜಿಬಿಗೆ ಅಂದರೆ ಮಹಾಘಟಬಂದನ್‌ಗೆ ಅತೀ ಕಡಿಮೆ ಸ್ಥಾನಗಳನ್ನು ತೋರಿಸಿದೆ. ಅವರ ಪ್ರಕಾರ ಎನ್‌ಡಿಎ 184 ರಿಂದ 209, ಎಂಜಿಬಿ ಕೇವಲ 32 ರಿಂದ 49.

ಜೆವಿಸಿ ಎಕ್ಸಿಟ್ ಪೋಲ್ ಎಂಬುದು ಸಹ ಎನ್‌ಡಿಎಗೆ ಬಹುಮತ ಎಂದಿದೆ. ಅದರ ಪ್ರಕಾರ ಎನ್‌ಡಿಎ 135 ರಿಂದ 150. ಎಂಜಿಬಿ 88 ರಿಂದ 103.

ಪೀಪಲ್ ಇನ್‌ಸೈಟ್ಸ್‌ ಮತ್ತು ಟಿವಿ9 ಸಂಸ್ಥೆಗಳ ಜಂಟಿ ಸಮೀಕ್ಷೆಯೂ ಸಹ ಎನ್‌ಡಿಎಗೆ ಬಹುಮತ ಎಂದು ಹೇಳಿವೆ. ಅವರ ಪ್ರಕಾರ ಎನ್‌ಡಿಎಗೆ 133ರಿಂದ 148 ಹಾಗೂ ಎಂಜಿಬಿಗೆ 87 ರಿಂದ 102 ಎಂದು ಅಂದಾಜಿಸಿವೆ.

P-MarQ ಸಂಸ್ಥೆಯ ಮತಗಟ್ಟೆ ಸಮೀಕ್ಷೆಯೂ ಎನ್‌ಡಿಎಗೆ ಬಹುಮತ ಸಿಗಲಿದೆ ಎಂದು ಅಂದಾಜಿಸಿದೆ. ಅವರ ಪ್ರಕಾರ ಎನ್‌ಡಿಎಗೆ 142 ರಿಂದ 162, ಎಂಜಿಬಿಗೆ 80 ರಿಂದ 98 ಸ್ಥಾನಗಳು ಲಭಿಸಲಿವೆ.

chanakya strategies ಎನ್ನುವ ಸಂಸ್ಥೆಯೂ ಎನ್‌ಡಿಎಗೆ 130 ರಿಂದ 138 ಸ್ಥಾನಗಳು ಸಿಗಲಿವೆ ಹಾಗೂ ಎಂಜಿಬಿಗೆ 100 ರಿಂದ 1008 ಸ್ಥಾನಗಳು ಸಿಗಲಿವೆ ಎಂದು ಹೇಳಿದೆ. ಇದು ಪಕ್ಷೇತರರಿಗೂ 5 ಸ್ಥಾನಗಳನ್ನು ತೋರಿಸಿದೆ.

ಜರ್ನೊ ಮಿರರ್ ಎಂಬ ಒಂದು ಸಂಸ್ಥೆ ಮಾತ್ರ ಮಹಾಘಟಬಂಧನ್‌ಗೆ ಬಹುಮತ ತೋರಿಸಿದೆ. ಅವರ ಪ್ರಕಾರ ಮಹಾಘಟಬಂಧನ್‌ಗೆ 130 ರಿಂದ 140 ಸ್ಥಾನ ಹಾಗೂ ಎನ್‌ಡಿಎಗೆ 100 ರಿಂದ 110 ಸ್ಥಾನಗಳು ಸಿಗಲಿವೆ. ಒವೈಸಿಯ ಎಂಎಎಂಐಎಂ ಪಕ್ಷ ಗರಿಷ್ಠ 4 ಸ್ಥಾನ ಗೆಲ್ಲಬಹುದು ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.