ADVERTISEMENT

ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ದೇಶದ ಅತ್ಯಂತ ಬಡ ರಾಜ್ಯಗಳು

ಪಿಟಿಐ
Published 26 ನವೆಂಬರ್ 2021, 15:46 IST
Last Updated 26 ನವೆಂಬರ್ 2021, 15:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಬಿಹಾರ, ಜಾರ್ಖಂಡ್ ಮತ್ತುಉತ್ತರ ಪ್ರದೇಶ, ದೇಶದಲ್ಲಿಯೇ ಅತ್ಯಂತ ಬಡ ರಾಜ್ಯಗಳು. ಹೆಚ್ಚಿನ ಸಂಖ್ಯೆಯಲ್ಲಿ ಬಡಜನರಿರುವ ರಾಜ್ಯಗಳ ಪಟ್ಟಿಯಲ್ಲಿ ಈ ರಾಜ್ಯಗಳು ಕ್ರಮವಾಗಿ ಮೊದಲ ಮೂರು ಸ್ಥಾನದಲ್ಲಿವೆ.‌

ನೀತಿ ಆಯೋಗ ಬಿಡುಗಡೆ ಮಾಡಿರುವ ಬಹು ಆಯಾಮದ ಬಡತನ ಸೂಚ್ಯಂಕದಲ್ಲಿ (ಎಂಪಿಐ) ಈ ಅಂಶ ವ್ಯಕ್ತವಾಗಿದೆ. ಕುಟುಂಬಗಳು ಎದುರಿಸುತ್ತಿರುವ ಬಹುಆಯಾಮದ ಸಮಸ್ಯೆಗಳನ್ನು ಆಧರಿಸಿ ಸೂಚ್ಯಂಕವನ್ನು ರೂಪಿಸಲಾಗಿದೆ ಎಂದೂ ನೀತಿ ಆಯೋಗ ತಿಳಿಸಿದೆ.

ವರದಿಯ ಅನುಸಾರ, ಭಾರತದ ರಾಷ್ಟ್ರೀಯ ಎಂಪಿಐ ಅನ್ನು ಜಾಗತಿಕವಾಗಿ ಒಪ್ಪಿಕೊಂಡಿರುವ, ಆಕ್ಸ್‌ಫರ್ಡ್‌ ಬಡತನ ಮತ್ತು ಮಾನವ ಅಭಿವೃದ್ಧಿ ಕ್ರಮ (ಒಪಿಎಚ್ಐ) ಮತ್ತು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (ಯುಎನ್‌ಡಿಪಿ) ಆಧರಿಸಿ ರೂಪಿಸಲಾಗಿದೆ.

ADVERTISEMENT

ಆರೋಗ್ಯ, ಶಿಕ್ಷಣ ಮತ್ತು ಜೀವನ ಗುಣಮಟ್ಟವನ್ನು ಮುಖ್ಯ ಮಾನದಂಡವಾಗಿ ಪರಿಗಣಿಸಲಾಗಿದೆ. ಪೌಷ್ಟಿಕತೆ, ನವಜಾತ ಮತ್ತು ಶಿಶು ಮರಣಪ್ರಮಾಣ, ಪ್ರಸವಪೂರ್ವ ಆರೈಕೆ, ಶಾಲೆಗೆ ಹಾಜರು, ಶಿಕ್ಷಣ, ತರಗತಿಗೆ ಹಾಜರಾತಿ, ಅಡುಗೆ ಇಂಧನ, ಶೌಚಾಲಯ, ಕುಡಿಯುವ ನೀರು ಸೌಲಭ್ಯ, ವಿದ್ಯುತ್‌ ಸಂಪರ್ಕ, ವಸತಿ, ಆಸ್ತಿ ಮತ್ತು ಬ್ಯಾಂಕ್‌ ಖಾತೆ ಅಂಶಗಳನ್ನು ಆಧರಿಸಿ ಇದನ್ನು ರೂಪಿಸಲಾಗಿದೆ.

ಸುಸ್ಥಿರಾಭಿವೃದ್ಧಿ ಗುರಿ (ಎಸ್‌ಡಿಜಿ) ಕಾರ್ಯಸೂಚಿಯನ್ನು ಜಗತ್ತಿನ 193 ದೇಶಗಳು 2015ರಲ್ಲಿ ಅಳವಡಿಸಿಕೊಂಡಿದ್ದು ಅಭಿವೃದ್ಧಿ ಸಂಬಂಧ ನೀತಿಗಳು, ಸರ್ಕಾರದ ಆದ್ಯತೆ, ಅಭಿವೃದ್ಧಿಯನ್ನು ಗುರುತಿಸಲು ಇರುವ ಮಾನದಂಡಗಳಿಗೆ ಹೊಸ ವ್ಯಾಖ್ಯಾನ ನೀಡಿದೆ. ಎಸ್‌ಡಿಜಿ ಕಾರ್ಯಸೂಚಿಯು ಒಟ್ಟಾರೆ ಜಾಗತಿಕವಾಗಿ 17 ಗುರಿ ಹಾಗೂ 169 ಉದ್ದೇಶಗಳನ್ನು ಆಧರಿಸಿದೆ.

ನೀತಿ ಆಯೋಗದ ಅಧ್ಯಕ್ಷ ರಾಜೀವ್‌ ಕುಮಾರ್ ಅವರು ವರದಿಯ ಮುನ್ನುಡಿಯಲ್ಲಿ, ಬಹುಆಯಾಮದ ಬಡತನದ ಸೂಚ್ಯಂಕವು ದೇಶದಲ್ಲಿ ಸಾರ್ವಜನಿಕ ನೀತಿಯನ್ನು ರೂಪಿಸುವ ಪ್ರಕ್ರಿಯೆಯಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸಲಿದೆ ಎಂದು ಹೇಳಿದ್ದಾರೆ.

ಭಾರತದ ಪ್ರಪ್ರಥಮ ರಾಷ್ಟ್ರೀಯ ಎಂಪಿಐ ಸೂಚ್ಯಂಕವು 2015–16ನೇ ಅವಧಿಯ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ (ಎನ್‌ಎಫ್‌ಎಚ್‌ಎಸ್‌) ಅಂಕಿ ಅಂಶಗಳನ್ನು ಆಧರಿಸಿದ್ದಾಗಿದೆ ಎಂದು ತಿಳಿಸಿದ್ದಾರೆ.

ಬಡವರು ಹೆಚ್ಚಿರುವ ರಾಜ್ಯಗಳು

ಸಂಖ್ಯೆ;ವಿವರ;ಪ್ರಮಾಣ

1;ಬಿಹಾರ;ಶೇ 51.91

2;ಜಾರ್ಖಂಡ್‌;ಶೇ 42.16

3;ಉತ್ತರಪ್ರದೇಶ;ಶೇ 37.79

4;ಮಧ್ಯಪ್ರದೇಶ;ಶೇ 36.65

5;ಮೇಘಾಲಯ;ಶೇ 32.67

ಬಡವರು ಕಡಿಮೆ ಇರುವ ರಾಜ್ಯಗಳು

ಸಂಖ್ಯೆ;ವಿವರ;ಪ್ರಮಾಣ

1;ಕೇರಳ;ಶೇ 0.71

2;ಗೋವಾ;ಶೇ 3.76

3;ಸಿಕ್ಕಿಂ;ಶೇ 3.82

4;ತಮಿಳುನಾಡು;ಶೇ4.89

5;ಪಂಜಾಬ್‌;ಶೇ 5.59

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.