
ಬೇಗುಸರಾಯ್: 25 ವರ್ಷದ ಮಹಿಳೆ, ಆಕೆಯ ತಂದೆ ಹಾಗೂ ಸಹೋದರನನ್ನು ಮಾವನೇ ಗುಂಡಿಟ್ಟು ಕೊಲೆ ಮಾಡಿದ ಘಟನೆ ಬಿಹಾರದ ಬೇಗುಸರಾಯ್ ಜಿಲ್ಲೆಯಲ್ಲಿ ಶನಿವಾರ ನಡೆದಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಶೆಬ್‌ಪುರ ಕಮಲ್ ಪೊಲೀಸ್ ಠಾಣೆ ವ್ಯಾಪ್ತಿಯ ಬಿಷ್ಣುಪುರ ಅಹುಕ್ ಎನ್ನುವ ಗ್ರಾಮದಲ್ಲಿ ಘಟನೆ ನಡೆದಿದೆ. ನೀಲು ಕುಮಾರಿ, ಆಕೆಯ ತಂದೆ ಉಮೇಶ್ ಯಾದವ್ ಹಾಗೂ ಸಹೋದರ ರಾಜೇಶ್ ಯಾದವ್ ಮೃತರು.
ಇವರೆಲ್ಲರೂ ಬೇಗುಸರಾಯ್‌ನ ಶ್ರೀನಗರದ ನಿವಾಸಿಗಳು.
‘ಶನಿವಾರ ಸಂಜೆ ಈ ಘಟನೆ ನಡೆದಿದ್ದು, ಉಮೇಶ್ ಯಾದವ್ ತನ್ನ ಪುತ್ರನೊಂದಿಗೆ ಪುತ್ರಿಯ ಮಾವನ ಮನೆಯಲ್ಲಿ ಇದ್ದರು. ಇವರನ್ನು ಕಂಡಕೂಡಲೇ ಕೋಪಗೊಂಡಿದ್ದಲ್ಲದೇ ಗಲಾಟೆಯೂ ಆರಂಭವಾಯಿತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ’ ಎಂದು ಶೆಬ್‌ಪುರ ಕಮಲ್ ಪೊಲೀಸ್ ಠಾಣೆಯ ಎಸ್.ಎಸ್.ಒ. ದೀಪಕ್ ಕುಮಾರ್ ಹೇಳಿದ್ದಾರೆ.
ಈ ವೇಳೆ ನೀಲು ಕುಮಾರಿಯ ಮಾವ ಬಂದೂಕು ತೆಗೆದು ಗುಂಡು ಹಾರಿಸಿದ್ದಾರೆ. ಸ್ಥಳದಲ್ಲೇ ಮೂವರೂ ಮೃತಪಟ್ಟಿದ್ದಾರೆ. ಆರೋಪಿ ಸ್ಥಳದಿಂದ ಪರಾರಿಯಾಗಿದ್ದು, ಆತನ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
‘ಇದೊಂದು ಬಲವಂತದ ಮದುವೆ ಪ್ರಕರಣವಾಗಿದ್ದು, ಮಹಿಳೆಯನ್ನು ಅಪಹರಿಸಿ ಮದುವೆ ಮಾಡಲಾಗಿತ್ತು. ಹೀಗಾಗಿ ಮಹಿಳೆಯ ಮಾವನ ಮನೆಯಲ್ಲಿ ಎಲ್ಲವೂ ಸರಿ ಇರಲಿಲ್ಲ’ ಎಂದು ಗ್ರಾಮದ ಮುಖ್ಯಸ್ಥ ಸುಬೋಧ್ ಕುಮಾರ್ ಯಾದವ್ ಹೇಳಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.