ADVERTISEMENT

ಬಿರ್‌ಭೂಮ್‌ ಪ್ರಕರಣ: ಗಾಯಗೊಂಡಿದ್ದ ಮಹಿಳೆ ಸಾವು, ಮೃತರ ಸಂಖ್ಯೆ 10ಕ್ಕೆ ಏರಿಕೆ

ಪಿಟಿಐ
Published 1 ಮೇ 2022, 7:31 IST
Last Updated 1 ಮೇ 2022, 7:31 IST
ಬೋಗ್‌ತುಇ ಗ್ರಾಮದಲ್ಲಿ ಬೆಂಕಿಗೆ ಆಹುತಿಯಾಗಿರುವ ಮನೆ
ಬೋಗ್‌ತುಇ ಗ್ರಾಮದಲ್ಲಿ ಬೆಂಕಿಗೆ ಆಹುತಿಯಾಗಿರುವ ಮನೆ   

ರಾಮ್‌ಪುರಹಾಟ್‌: ಬಿರ್‌ಭೂಮ್‌ ಜಿಲ್ಲೆಯ ಬೋಗ್‌ತುಇ ಗ್ರಾಮದಲ್ಲಿ ಮಾರ್ಚ್‌ನಲ್ಲಿ ನಡೆದ ಹಿಂಸಾಚಾರದಲ್ಲಿ ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಚಿಕಿತ್ಸೆಗೆ ಸ್ಪಂದಿಸದೆ ಇಂದು ಬೆಳಗ್ಗೆ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದರೊಂದಿಗೆ, ಸ್ಥಳೀಯ ಟಿಎಂಸಿ ನಾಯಕನ ಹತ್ಯೆಯ ನಂತರ ಬೋಗ್‌ತುಇ ಗ್ರಾಮದಲ್ಲಿ ಮನೆಗಳಿಗೆ ಬೆಂಕಿ ಹಚ್ಚಿದ ಘಟನೆಯಲ್ಲಿ ಮೃತಪಟ್ಟವರ ಒಟ್ಟು ಸಂಖ್ಯೆ 10ಕ್ಕೆ ಏರಿಕೆಯಾಗಿದೆ.

ಶೇ 27ರಷ್ಟು ಸುಟ್ಟ ಗಾಯಗಳೊಂದಿಗೆ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ADVERTISEMENT

'ಆಕೆಯ ಸ್ಥಿತಿ ಸುಧಾರಿಸಿದ ನಂತರ ಆಕೆಯನ್ನು ಡಿಸ್ಚಾರ್ಜ್ ಮಾಡಲಾಗಿತ್ತು. ಆದರೆ, ಮತ್ತೆ ಆಕೆಯ ಆರೋಗ್ಯ ಸ್ಥಿತಿ ಹದಗೆಟ್ಟ ನಂತರ ಮತ್ತೊಮ್ಮೆ ರಾಮ್‌ಪುರಹಾಟ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಅವರು ಭಾನುವಾರ ಮುಂಜಾನೆ ಸಾವಿಗೀಡಾಗಿದ್ದಾರೆ' ಎಂದು ಅವರು ಹೇಳಿದರು.

ರಾಮ್‌ಪುರಹಾಟ್‌ನ ಪಂಚಾಯಿತಿಯ ಟಿಎಂಸಿ ಸದಸ್ಯನ ಹತ್ಯೆಯ ನಂತರ ಮಾರ್ಚ್ 21ರಂದು ಬೋಗ್‌ತುಇ ಗ್ರಾಮದ ಹತ್ತಕ್ಕೂ ಹೆಚ್ಚು ಮನೆಗಳಿಗೆ ಬೆಂಕಿ ಹಚ್ಚಲಾಗಿತ್ತು. ಈ ಕೃತ್ಯದಲ್ಲಿ ಇಬ್ಬರು ಮಕ್ಕಳು, ಐವರು ಮಹಿಳೆಯರು ಸೇರಿ ಎಂಟು ಜನರನ್ನು ಸಜೀವವಾಗಿ ಸುಡಲಾಗಿತ್ತು. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಬಿರ್‌ಭೂಮ್‌ನಲ್ಲಿನ ಸಜೀವ ದಹನ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿ ಕಲ್ಕತ್ತ ಹೈಕೋರ್ಟ್‌ ಶುಕ್ರವಾರ(ಮಾ.25) ಆದೇಶ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.