
ಭುವನೇಶ್ವರ: ಮುಂಬರುವ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಬೆಂಬಲ ನೀಡುವುದಾಗಿ ಬಿಜೆಡಿ ಹೇಳಿದೆ.
ಒಡಿಶಾದಿಂದ ಅಶ್ವಿನಿ ವೈಷ್ಣವ್ ಅವರು ಸ್ಪರ್ಧಿಸಲಿದ್ದಾರೆ ಎಂದು ಘೋಷಣೆಯಾದ ಬೆನ್ನಲ್ಲೇ, ಬಿಜೆಡಿ ಅವರಿಗೆ ಬೆಂಬಲ ಪ್ರಕಟಿಸಿದೆ.
‘ರಾಜ್ಯದ ರೈಲ್ವೆ ಹಾಗೂ ದೂರಸಂಪರ್ಕ ಅಭಿವೃದ್ಧಿಗಾಗಿ ಅಶ್ವಿನಿ ವೈಷ್ಣವ್ ಅವರನ್ನು ಬಿಜೆಡಿ ಬೆಂಬಲಿಸುತ್ತದೆ’ ಎಂದು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2019ರಲ್ಲೂ ಬಿಜೆಡಿ ಬೆಂಬಲದಿಂದ ಅಶ್ವಿನಿ ವೈಷ್ಣವ್ ರಾಜ್ಯಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು.
ಬಿಜೆಡಿಯಿಂದ ನಾವು ಬೆಂಬಲ ಕೋರಿಲ್ಲ ಎಂದು ಬಿಜೆಪಿ ಹೇಳಿದೆ. ‘ರಾಜಕೀಯದಲ್ಲಿ ಕೆಲವರು ಬೆಂಬಲ ವ್ಯಕ್ತಪಡಿಸುತ್ತಾರೆ. ಅದನ್ನು ನಾವು ಯಾಕೆ ನಿರಾಕರಿಸಬೇಕು? ಬಿಜೆಪಿ ಹೋರಾಟ ಮಾಡುತ್ತದೆ’ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಮನಮೋಹನ ಸಮಲ್ ಹೇಳಿದ್ದಾರೆ.
ಮುಂದಿನ ವಿಧಾನಸಭೆ ಅಥವಾ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಬಿಜೆಡಿ ನಡುವೆ ಯಾವುದೇ ಮೈತ್ರಿ ಇಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಬಿಜೆಡಿಯ ಈ ನಿಲುವನ್ನು ಕಾಂಗ್ರೆಸ್ ಟೀಕಿಸಿದ್ದು, ಒಡಿಶಾದ ಜನರಿಗೆ ಮೋಸ ಮಾಡಿದೆ ಎಂದು ಕಿಡಿ ಕಾರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.