ರಾಜೀವ್ ಚಂದ್ರಶೇಖರ್ ನೇತೃತ್ವದಲ್ಲಿ ಬಿಜೆಪಿ ಸೇರಿದ ಕೇರಳದ ಮುನಂಬಮ್‌ನ ಗ್ರಾಮಸ್ಥರು ಬಿಜೆಪಿ ನಾಯಕರ ಭಾವಚಿತ್ರ ಹಾಗೂ ಧ್ವಜ ಹಿಡಿದು ಸಾಗಿದರು
ಪಿಟಿಐ ಚಿತ್ರ
ತಿರುವನಂತಪುರ: ‘ಕೇರಳದ ಎರ್ನಾಕುಲಂ ಜಿಲ್ಲೆಯ ಮುನಂಬಮ್‌ನಲ್ಲಿ ಕ್ರೈಸ್ತರು ಮತ್ತು ಮುಸ್ಲಿಮರ ನಡುವೆ ದ್ವೇಷದ ವಿಷ ಬೀಜ ಬಿತ್ತುವ ಮೂಲಕ, ಬಿಜೆಪಿಯು ಒಡಕು ಮೂಡಿಸುವ ತಂತ್ರವನ್ನು ಹೂಡಿದ್ದು, ಇದನ್ನು ಜನರು ಅರಿಯಬೇಕು’ ಎಂದು ಕೇರಳದ ಅಲ್ಪಸಂಖ್ಯಾತ ಹಾಗೂ ವಕ್ಫ್ ಸಚಿವ ವಿ.ಅಬ್ದುರಹಿಮನ್ ಶನಿವಾರ ಹೇಳಿದ್ದಾರೆ.
ವಕ್ಫ್ ತಿದ್ದುಪಡಿ ಮಸೂದೆ ಸಂಸತ್ತಿನಲ್ಲಿ ಅಂಗೀಕಾರವಾದ ಕೆಲ ಗಂಟೆಗಳ ಬೆನ್ನಲ್ಲೇ ಕೇರಳದ ಮುನಂಬಮ್‌ನಲ್ಲಿ ವಕ್ಫ್ ಮಂಡಳಿ ಜೊತೆ ಭೂ ವಿವಾದದಲ್ಲಿ ಸಿಲುಕಿರುವ 50 ಮಂದಿ ಬಿಜೆಪಿಗೆ ಸೇರ್ಪಡೆಯಾಗಿ ಸುದ್ದಿಯಾಗಿತ್ತು. ತಮ್ಮ ಭೂಮಿ ಮೇಲಿನ ಹಕ್ಕು ಪಡೆಯುವವರೆಗೂ ಬಿಜೆಪಿ ನೇತೃತ್ವದ ಎನ್‌ಡಿಎ ನೆರವು ನೀಡಲಿದೆ ಎಂದು ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದವರಿಗೆ ಮುಖಂಡರು ಭರವಸೆ ನೀಡಿದ್ದರು.
ಕ್ಯಾಥೋಲಿಕ್ ಚರ್ಚ್‌ನ ಬೆಂಬಲದೊಂದಿಗೆ ಇಲ್ಲಿನ ನಿವಾಸಿಗಳು ಕಳೆದ 174 ದಿನಗಳಿಂದ ತಮ್ಮ ಆಸ್ತಿಗಳ ಮೇಲಿನ ಕಂದಾಯ ಹಕ್ಕುಗಳಿಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಭೂಮಿ ಮೇಲೆ ವಕ್ಫ್ ಮಂಡಳಿಯು ಹಕ್ಕು ಸಾಧಿಸಿದೆ ಎನ್ನಲಾಗುತ್ತಿದೆ. ಇದರ ಬೆನ್ನಲ್ಲೇ ಅಬ್ದುರಹಿಮನ್ ಈ ಹೇಳಿಕೆ ನೀಡಿದ್ದಾರೆ.
ತಾವು ಹೊಂದಿರುವ ಜಮೀನಿನ ಕ್ರಯಪತ್ರ, ನೋಂದಣಿ ಪತ್ರ ಮತ್ತು ತೆರಿಗೆ ರಶೀದಿಗಳಿದ್ದರೂ ವಕ್ಫ್ ಮಂಡಳಿಯು ಅಕ್ರಮವಾಗಿ ಮಾಲೀಕತ್ವದ ಹಕ್ಕು ಸಾಧಿಸುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ವಕ್ಫ್ ಮಸೂದಗೆ ಸಂಬಂಧಿಸಿದಂತೆ ಕೇಂದ್ರದಿಂದ ಯಾವುದೇ ನಿರ್ಣಯ ಹೊರಬಿದ್ದರೂ, ರಾಜ್ಯ ವಕ್ಫ್ ಮಂಗಳಿಗೆ ಯಾವುದೇ ಹಾನಿಯಾಗಲ್ಲ. ಆದರೆ ಕೇಸರಿ ಪಕ್ಷವು ಕ್ರೈಸ್ತರು ಮತ್ತು ಮುಸ್ಲಿಮರ ನಡುವೆ ಜಗಳ ತಂದಿಟ್ಟು, ಅವರನ್ನು ಶತ್ರುಗಳಾಗುವಂತೆ ಮಾಡುತ್ತಿದ್ದಾರೆ ಎಂದು ಸಚಿವರು ಭರವಸೆ ನೀಡಿದ್ದಾರೆ.
ಮುನಂಬಮ್ ಪ್ರಕರಣದಲ್ಲಿ ಬಿಜೆಪಿ ಮಧ್ಯಪ್ರವೇಶಿಸಿರುವುದನ್ನು ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಖಂಡಿಸಿದ್ದು, ‘ತನ್ನ ರಾಜಕೀಯ ಲಾಭಕ್ಕಾಗಿ ಕ್ರೈಸ್ತ ಸಮುದಾಯದ ಓಲೈಕೆಗೆ ಬಿಜೆಪಿ ಯತ್ನಿಸುತ್ತಿದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.