ಆತಿಶಿ
(ಪಿಟಿಐ ಚಿತ್ರ)
ನವದೆಹಲಿ: ಬಿಜೆಪಿ ಗೂಂಡಾಗಿರಿಯಲ್ಲಿ ತೊಡಗಿದ್ದು, ಚುನಾವಣಾ ಆಯೋಗ ಮತ್ತು ದೆಹಲಿ ಪೊಲೀಸ್ ಪಕ್ಷಪಾತಿ ಧೋರಣೆ ತಳೆದಿದೆ ಎಂದು ದೆಹಲಿಯ ಮುಖ್ಯಮಂತ್ರಿ ಆತಿಶಿ ಇಂದು (ಮಂಗಳವಾರ) ಆರೋಪಿಸಿದ್ದಾರೆ.
ಮಾದರಿ ನೀತಿ ಸಂಹಿತೆ (ಎಂಸಿಸಿ) ಉಲ್ಲಂಘನೆಯ ಆರೋಪದ ಮೇಲೆ ತಮ್ಮ ವಿರುದ್ಧ ಎಫ್‌ಐಆರ್ ದಾಖಲಾದ ಕೆಲವೇ ಗಂಟೆಗಳಲ್ಲಿ ಆತಿಶಿ ಪ್ರತಿಕ್ರಿಯೆ ನೀಡಿದ್ದಾರೆ.
'ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿ ಬಹಿರಂಗವಾಗಿ ಗೂಂಡಾಗಿರಿ ನಡೆಸುತ್ತಿದೆ. ಆದರೆ ಕೇಸರಿ ಪಕ್ಷದವರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ದೆಹಲಿ ಪೊಲೀಸ್ ರಕ್ಷಣೆ ನೀಡುತ್ತಿದೆ. ಚುನಾವಣಾ ಆಯೋಗವು ದೂರು ನೀಡುವವರ ವಿರುದ್ಧವೇ ಪ್ರಕರಣಗಳನ್ನು ದಾಖಲಿಸುತ್ತಿದೆ' ಎಂದು ಅವರು ಆರೋಪಿಸಿದ್ದಾರೆ.
'ಬಿಜೆಪಿ ಅಭ್ಯರ್ಥಿ ರಮೇಶ್ ಬಿಧುರಿ ಗೂಂಡಾಗಿರಿ ನಡೆಸುತ್ತಿದ್ದಾರೆ. ಆದರೆ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ' ಎಂದು ಆತಿಶಿ ವಾಗ್ದಾಳಿ ನಡೆಸಿದ್ದಾರೆ.
'ದೆಹಲಿಯ ಜನತೆ ಇವೆಲ್ಲವನ್ನು ಗಮನಿಸುತ್ತಿದ್ದಾರೆ. ಚುನಾವಣೆಯಲ್ಲಿ ತಕ್ಕ ಉತ್ತರವನ್ನೇ ನೀಡಲಿದ್ದಾರೆ' ಎಂದು ಹೇಳಿದ್ದಾರೆ.
70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ ನಾಳೆ (ಫೆ. 5) ಮತದಾನ ನಡೆಯಲಿದ್ದು,ಫೆ.8ರಂದು ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.