
ಸಂಗೀತ್ ಸೋಮ್, ಶಾರೂಕ್ ಖಾನ್
(ಪಿಟಿಐ ಚಿತ್ರ)
ಕೋಲ್ಕತ್ತ: ಬಾಲಿವುಡ್ ಬಾದ್‌ಶಾ ಖ್ಯಾತಿಯ ಶಾರೂಕ್ ಖಾನ್ ದೇಶದ್ರೋಹಿ ಆಗಿದ್ದು, ಅವರಿಗೆ ದೇಶದಲ್ಲಿ ನೆಲೆಸುವ ಹಕ್ಕು ಇಲ್ಲ ಎಂದು ಬಿಜೆಪಿಯ ನಾಯಕ ಸಂಗೀತ್ ಸೋಮ್ ಆರೋಪಿಸಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಶಾರೂಕ್ ಅವರ ಮಾಲೀಕತ್ವದ ಕೋಲ್ಕತ್ತ ನೈಟ್ ರೈಡರ್ಸ್ ಫ್ರಾಂಚೈಸಿಯಲ್ಲಿ ಬಾಂಗ್ಲಾದೇಶದ ಕ್ರಿಕೆಟಿಗ ಮುಸ್ತಫಿಜುರ್ ರೆಹಮಾನ್ ಅವರಿಗೆ ಆಡಲು ಅವಕಾಶ ನೀಡಿರುವುದು ಬಿಜೆಪಿ ನಾಯಕನ ಕೋಪಕ್ಕೆ ಕಾರಣವಾಗಿದೆ.
ಮುಸ್ತಫಿಜುರ್ ಅವರನ್ನು ವಿಮಾನ ನಿಲ್ದಾಣದಿಂದ ಹೊರಗೆ ಹೋಗಲು ಬಿಡುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ನಮ್ಮ ಸೋದರಿಯರ ಮೇಲೆ ಅತ್ಯಾಚಾರ ನಡೆಯುತ್ತಿದೆ. ಹಿಂದೂಗಳ ಹತ್ಯೆ ಮಾಡಲಾಗುತ್ತಿದೆ. ಆದರೂ ಶಾರೂಕ್, ಬಾಂಗ್ಲಾ ಆಟಗಾರರನ್ನು ತಮ್ಮ ತಂಡದಲ್ಲಿ ಸೇರಿಸಿದ್ದಾರೆ. ದೇಶದ ಜನರಿಂದಾಗಿಯೇ ಸ್ಟಾರ್ ಆಗಿದ್ದಾರೆ ಎಂಬುದನ್ನು ಶಾರೂಕ್ ಅವರಂತಹ ದೇಶದ್ರೋಹಿಗಳು ಮರೆಯಬಾರದು ಎಂದಿದ್ದಾರೆ.
ಬಾಂಗ್ಲಾದೇಶದ ಆಟಗಾರರಿಗೆ ಭಾರತದಲ್ಲಿ ಆಡಲು ಅವಕಾಶ ನೀಡಲಾಗುವುದಿಲ್ಲ. ಶಾರೂಕ್ ಖಾನ್‌ಗೆ ದೇಶದಲ್ಲಿ ವಾಸಿಸುವ ಹಕ್ಕು ಇಲ್ಲ. ದೇಶ ಬಿಟ್ಟು ತೊಲಗಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.