ADVERTISEMENT

ಕಮಲ್‌ ನಾಥ್‌ ವರ್ತನೆಯಿಂದ ನನಗೆ ಆಶ್ಚರ್ಯವಾಗಿದೆ: ಜ್ಯೋತಿರಾದಿತ್ಯ ಸಿಂಧಿಯಾ

ಏಜೆನ್ಸೀಸ್
Published 31 ಅಕ್ಟೋಬರ್ 2020, 6:59 IST
Last Updated 31 ಅಕ್ಟೋಬರ್ 2020, 6:59 IST
ಜ್ಯೋತಿರಾದಿತ್ಯ ಸಿಂಧಿಯಾ
ಜ್ಯೋತಿರಾದಿತ್ಯ ಸಿಂಧಿಯಾ   

ಭೋಪಾಲ್‌: ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರ ವರ್ತನೆಯಿಂದ ನನಗೆ ಆಶ್ಚರ್ಯವಾಗಿದೆ ಎಂದು ಬಿಜೆಪಿ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ಮಹಿಳಾ ಅಭ್ಯರ್ಥಿಯ ವಿರುದ್ಧದ ‘ಐಟಂ’ ಹೇಳಿಕೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಈಗಾಗಲೇ ಸೂಚನೆ ನೀಡಿದ್ದು, ಮಾದರಿ ನೀತಿ ಸಂಹಿತೆಯ ಅವಧಿಯಲ್ಲಿ ಸಾರ್ವಜನಿಕವಾಗಿ ಇಂತಹ ಪದಗಳನ್ನು ಬಳಸದಂತೆ ಸಲಹೆ ನೀಡಿದೆ. ಆದರೆ, ಕಮಲ್‌ ನಾಥ್‌ ಸಾರ್ವಜನಿಕವಾಗಿ ಕ್ಷಮೆ ಕೋರಲು ನಿರಾಕರಿಸಿದ್ದಾರೆ’ ಎಂದು ಸಿಂಧಿಯಾ ಟೀಕಿಸಿದರು.

‘ಕಮಲ್‌ ನಾಥ್‌ ಅವರ ಅಹಂಕಾರಕ್ಕೆ ಉಪ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ವಾಗ್ದಾಳಿ ನಡೆಸಿದ್ದಾರೆ.

ADVERTISEMENT

ಏನಿದು ಘಟನೆ?: ಗ್ವಾಲಿಯರ್‌ ದಬ್ರಾ ಪಟ್ಟಣದಲ್ಲಿ ಭಾನುವಾರ ನಡೆದ ಚುನಾವಣಾ ಸಭೆಯಲ್ಲಿ, ಕಮಲ್‌ನಾಥ್ ಅವರು ‘ಎದುರಾಳಿ ‘ಐಟಂ’ ಅಭ್ಯರ್ಥಿಗೆ (ಬಿಜೆಪಿಯ ಇಮಾರ್ತಿ ದೇವಿ) ಹೋಲಿಸಿದರೆ ಕಾಂಗ್ರೆಸ್ ಅಭ್ಯರ್ಥಿಯು ಸರಳ ವ್ಯಕ್ತಿ’ ಎಂದು ಹೇಳಿದ್ದರು.

ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ನಿಷ್ಠರಾಗಿರುವ ಇಮಾರ್ತಿ ದೇವಿ ಸೇರಿದಂತೆ 21 ಶಾಸಕರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಈ ಪ್ರಕ್ರಿಯೆಯಲ್ಲಿ ಕಮಲ್‌ನಾಥ್ ಸರ್ಕಾರವು ಉರುಳಿಬಿದ್ದಿತ್ತು.

ಮಧ್ಯಪ್ರದೇಶದಲ್ಲಿ ಒಟ್ಟು 28 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 3ರಂದು ಚುನಾವಣೆ ನಡೆಯಲಿದೆ. ನ. 10ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.