ADVERTISEMENT

ಶುದ್ಧವಾಗದ ಯಮುನಾ ನದಿ: ಕೇಜ್ರಿವಾಲ್‌ ಪ್ರತಿಕೃತಿ ಮುಳುಗಿಸಿದ BJP ಮುಖಂಡ ಪರ್ವೇಶ್

ಪಿಟಿಐ
Published 25 ಜನವರಿ 2025, 10:29 IST
Last Updated 25 ಜನವರಿ 2025, 10:29 IST
<div class="paragraphs"><p>ದೆಹಲಿಯ ಯಮುನಾ ನದಿಯಲ್ಲಿ ಅರವಿಂದ ಕೇಜ್ರಿವಾಲ್ ಅವರ ಪ್ರತಿಕೃತಿಯನ್ನು ಪರ್ವೇಶ್ ವರ್ಮಾ ಮುಳುಗಿಸಿ ಪ್ರತಿಭಟಿಸಿದರು</p></div>

ದೆಹಲಿಯ ಯಮುನಾ ನದಿಯಲ್ಲಿ ಅರವಿಂದ ಕೇಜ್ರಿವಾಲ್ ಅವರ ಪ್ರತಿಕೃತಿಯನ್ನು ಪರ್ವೇಶ್ ವರ್ಮಾ ಮುಳುಗಿಸಿ ಪ್ರತಿಭಟಿಸಿದರು

   

ಪಿಟಿಐ ಚಿತ್ರ

ನವದೆಹಲಿ: ದೆಹಲಿಯ ವಿಧಾನಸಭಾ ಚುನಾವಣೆ ಸನಿಹವಾಗುತ್ತಿದ್ದಂತೆ ಪಕ್ಷಗಳ ಹಾಗೂ ಮುಖಂಡರ ನಡುವೆ ಆರೋಪ ಹಾಗೂ ಪ್ರತ್ಯಾರೋಪಗಳು ತಾರಕಕ್ಕೇರಿವೆ. ದೆಹಲಿಯಲ್ಲಿ ಕಳೆದ ಹತ್ತು ವರ್ಷಗಳಿಂದ ಜನರಿಗೆ ನೀಡಿರುವ ಭರವಸೆ ಈಡೇರಿಲ್ಲ ಎಂದು ಆರೋಪಿಸಿ ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರ ಪ್ರತಿಕೃತಿಯನ್ನು ಬಿಜೆಪಿ ಮುಖಂಡ ಪರ್ವೇಶ್ ವರ್ಮಾ ಅವರು ಯಮುನೆಯಲ್ಲಿ ಮುಳುಗಿಸಿ ಪ್ರತಿಭಟಿಸಿದ್ದಾರೆ.

ADVERTISEMENT

ಯಮುನೆಯನ್ನು ಶುದ್ಧೀಕರಿಸುವ ಭರವಸೆ ಈಡೇರಿಲ್ಲ ಎಂದು ಆರೋಪಿಸಿದ ವರ್ಮಾ, ‘ಯಮುನೆ ಶುದ್ಧೀಕರಣಕ್ಕೆ ಕಳೆದ 11 ವರ್ಷಗಳಲ್ಲಿ ₹8 ಸಾವಿರ ಕೋಟಿ ಖರ್ಚು ಮಾಡಲಾಗಿದೆ. ಆದರೆ ನದಿಯ ಶುದ್ಧೀಕರಣ ಆಗಿಲ್ಲ. ಎಎಪಿ ಸರ್ಕಾರವು ಭರವಸೆ ಈಡೇರಿಸದೆ ಜನರಿಗೆ ದ್ರೋಹ ಮಾಡಿದೆ’ ಎಂದು ಆರೋಪಿಸಿದ್ದಾರೆ.

‘2025ರೊಳಗೆ ನದಿ ಶುದ್ಧಗೊಳಿಸುವುದಾಗಿ ಕೇಜ್ರಿವಾಲ್ ಹೇಳಿದ್ದರು. ಆದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಹೀಗಾಗಿ ಕೇಜ್ರಿವಾಲ್ ಪ್ರತಿಕೃತಿಯನ್ನು ನದಿಯಲ್ಲಿ ಮುಳುಗಿಸುವ ಮೂಲಕ ಅವರ ವೈಫಲ್ಯವನ್ನು ದೆಹಲಿ ಜನರ ಮುಂದಿಡುವ ಪ್ರಯತ್ನ ಮಾಡಲಾಗುತ್ತಿದೆ’ ಎಂದಿದ್ದಾರೆ.

ಪ್ರಸಕ್ತ ಚುನಾವಣೆಯಲ್ಲಿ ಎಎಪಿ ಅಭ್ಯರ್ಥಿಗಳ ಪರವಾಗಿ ಮತ ಯಾಚಿಸುತ್ತಿರುವ ಅರವಿಂದ ಕೇಜ್ರಿವಾಲ್, ‘ಅಧಿಕಾರಕ್ಕೆ ಬಂದ ನಂತರ ಮುಂದಿನ 2ರಿಂದ 3 ವರ್ಷಗಳಲ್ಲಿ ಯಮುನಾ ನದಿಯಲ್ಲಿ ಶುದ್ಧೀಕರಿಸಲಾಗುವುದು’ ಎಂದು ಭರವಸೆ ನೀಡುತ್ತಿದ್ದಾರೆ.

‘ಪೊಳ್ಳು ಭರವಸೆಗಳು ಹಾಗೂ ಸುಳ್ಳು ವಾದಗಳ ಮೂಲಕ ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್‌ ಜನರ ದಾರಿ ತಪ್ಪಿಸುತ್ತಿದ್ದಾರೆ. ಯಮುನಾ ನದಿಯನ್ನು ಶುದ್ಧೀಕರಿಸುವ ಸ್ಪಷ್ಟ ಯೋಜನೆಯಾಗಲೀ ಹಾಗೂ ಸಾಮರ್ಥ್ಯ ಅವರಿಗೆ ಇಲ್ಲ. ಕೇಜ್ರಿವಾಲ್ ಅವರ ವೈಫಲ್ಯಗಳನ್ನು ಜನರ ಮುಂದಿಡುವ ಕೆಲಸ ಮಾಡಲಾಗುತ್ತಿದೆ. ಮತ್ತೊಮ್ಮೆ ಕೇಜ್ರಿವಾಲ್ ಅವರನ್ನು ಆಯ್ಕೆ ಮಾಡಿದಲ್ಲಿ, ಸಮಸ್ಯೆಗಳಿಗೆ ಪರಿಹಾರ ಸಿಗದೆ, ಕೇವಲ ಅವರ ಸುಳ್ಳು ಭರವಸೆಗಳನ್ನು ಜನರು ಕೇಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ’ ಎಂದು ವರ್ಮಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.