
ಬಿಜೆಪಿ ನಾಯಕರು ಅಟಲ್ ಗ್ರಂಥಾಲಯವನ್ನು ಉದ್ಘಾಟಿಸಿದ್ದ ಸಂದರ್ಭ
ಗುರುಗ್ರಾಮ: ಹರಿಯಾಣದ ಫರಿದಾಬಾದ್‌ನ ಸೆಕ್ಟರ್ 12ರಲ್ಲಿ ನಿರ್ಮಿಸಿರುವ ಅಟಲ್ ಗ್ರಂಥಾಲಯವನ್ನು ಕೇಂದ್ರ ಸಚಿವ ಕೃಷ್ಣಪಾಲ್ ಗುರ್ಜರ್ ಮತ್ತು ರಾಜ್ಯದ ಕಂದಾಯ ಸಚಿವ ವಿಫುಲ್ ಗೋಯಲ್ ಅವರು ಒಂದೇ ದಿನ ಬೇರೆ ಬೇರೆ ಸಮಯದಲ್ಲಿ ಉದ್ಘಾಟಿಸುವ ಮೂಲಕ ಚರ್ಚೆಗೆ ಗ್ರಾಸವಾಗಿದ್ದಾರೆ.
ಸೆಕ್ಟರ್ 12ರ ಟೌನ್ ಪಾರ್ಕ್‌ನಲ್ಲಿ ₹3.85 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಅಟಲ್ ಗ್ರಂಥಾಲಯದ ಉದ್ಘಾಟನೆ ಕುರಿತು ಜಿಲ್ಲಾ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅಧಿಕೃತ ಆಹ್ವಾನ ಪತ್ರಿಕೆಯನ್ನು ನೀಡಿತ್ತು.
ಆಹ್ವಾನದ ಪ್ರಕಾರ, ರಾಜ್ಯಸಭಾ ಸದಸ್ಯ ಸುರೇಂದ್ರ ಸಿಂಗ್ ನಗರ್, ಹರಿಯಾಣ ಕೈಗಾರಿಕಾ ಸಚಿವ ರಾವ್ ನರವೀರ್, ರಾಜ್ಯ ಕಂದಾಯ ಸಚಿವ ವಿಫುಲ್ ಗೋಯಲ್ ಮತ್ತು ಮೇಯರ್ ಪ್ರವೀಣ್ ಜೋಶಿ ಅವರ ಸಮ್ಮುಖದಲ್ಲಿ ಕಟ್ಟಡವನ್ನು ಕೇಂದ್ರ ಸಚಿವ ಗುರ್ಜರ್ ಉದ್ಘಾಟಿಸಬೇಕಿತ್ತು. ಅವರ ಹೆಸರುಗಳನ್ನು ಒಳಗೊಂಡ ಉದ್ಘಾಟನಾ ಫಲಕವನ್ನು ಸಹ ಸ್ಥಳದಲ್ಲಿ ಸ್ಥಾಪಿಸಲಾಗಿತ್ತು.
ಸುರೇಂದ್ರ ನಗರ್ ಅವರು ಭಾನುವಾರ ಪ್ರಧಾನಿ ಮೋದಿಯವರ ‘ಮನ್ ಕಿ ಬಾತ್’ ಕಾರ್ಯಕ್ರಮವನ್ನು ವೀಕ್ಷಿಸಿದ ಬಳಿಕ ವಿಫುಲ್ ಗೋಯಲ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದಾದ ಬಳಿಕ ಮಧ್ಯಾಹ್ನ 12.30ಕ್ಕೆ ಆಹಾರ, ನಾಗರಿಕ ಸರಬರಾಜು ಖಾತೆ ಸಚಿವ ರಾಜೇಶ್ ನಗರ್ ಮತ್ತು ಮೇಯರ್ ಜೋಶಿ ಅವರೊಂದಿಗೆ ಉಭಯ ನಾಯಕರು ತೆರಳಿ ಗ್ರಂಥಾಲಯವನ್ನು ಉದ್ಘಾಟಿಸಿದ್ದರು.
ಆದಾಗ್ಯೂ, ಮಧ್ಯಾಹ್ನ 2.30ಕ್ಕೆ ಗುರ್ಜರ್ ಅವರು ಇತರೆ ಶಾಸಕರೊಂದಿಗೆ ತೆರಳಿ ಗ್ರಂಥಾಲಯವನ್ನು ಮತ್ತೊಮ್ಮೆ ಉದ್ಘಾಟಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಗುರ್ಜರ್, ಗ್ರಂಥಾಲಯವನ್ನು ಎರಡು ಬಾರಿ ಉದ್ಘಾಟಿಸಿದ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.
‘ಈಗಾಗಲೇ ಉದ್ಘಾಟನೆಯಾಗಿರುವುದನ್ನು ಯಾರಾದರೂ ಮತ್ತೊಮ್ಮೆ ಏಕೆ ಉದ್ಘಾಟಿಸುತ್ತಿದ್ದಾರೆ ಎಂಬುದರ ಕುರಿತು ನಾನು ಏನು ಹೇಳಬಲ್ಲೆ’ ಎಂದು ವಿಫುಲ್ ಗೋಯಲ್ ವ್ಯಂಗ್ಯವಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.