ADVERTISEMENT

ರಾಷ್ಟ್ರಪತಿ ಮುರ್ಮು ಭೇಟಿಯಾದ ದೆಹಲಿ ಬಿಜೆಪಿ ಶಾಸಕರ ನಿಯೋಗ

ಎಎಪಿ ಸರ್ಕಾರದ ಪದಚ್ಯುತಿಗೆ ಮನವಿ

ಪಿಟಿಐ
Published 31 ಆಗಸ್ಟ್ 2024, 14:28 IST
Last Updated 31 ಆಗಸ್ಟ್ 2024, 14:28 IST
ದ್ರೌಪದಿ ಮುರ್ಮು
ದ್ರೌಪದಿ ಮುರ್ಮು   

ನವದೆಹಲಿ: ದೆಹಲಿ ಬಿಜೆಪಿ ಶಾಸಕರ ನಿಯೋಗವು ಶುಕ್ರವಾರ ರಾಷ್ಟ್ರಪತಿ ದ್ರೌಪದಿ ಮರ್ಮು ಅವರನ್ನು ಭೇಟಿಯಾಗಿ, ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಜೈಲಿನಲ್ಲಿ ಇರುವ ಕಾರಣ ಎಎಪಿ ನೇತೃತ್ವದ ಸರ್ಕಾರವನ್ನು ಪದಚ್ಯುತಿಗೊಳಿಸಬೇಕು ಎಂದು ಕೋರಿತು.

ದೆಹಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿಜೇಂದ್ರ ಗುಪ್ತಾ ಅವರ ನೇತೃತ್ವದ ನಿಯೋಗವು, ಮುರ್ಮು ಅವರಿಗೆ ಮನವಿ ಪತ್ರವನ್ನು ಸಲ್ಲಿಸಿತು. ದೆಹಲಿಯಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಉಂಟಾಗಿದ್ದು, ಶೀಘ್ರವೇ ಮಧ್ಯ ಪ್ರವೇಶಿಸಬೇಕು ಎಂದು ಕೋರಿತು.

ಎಎಪಿ ಸರ್ಕಾರವು ಆಡಳಿತ ನಡೆಸುವ ನೈತಿಕತೆಯನ್ನು ಕಳೆದುಕೊಂಡಿದೆ. ದೆಹಲಿ ಜನರು ನೀಡಿದ್ದ ಜನಾದೇಶಕ್ಕೆ ವಂಚನೆ ಮಾಡಿದೆ ಎಂದು ಮನವಿಪತ್ರದಲ್ಲಿ ಹೇಳಿದೆ.

ADVERTISEMENT

‘ಕೇಜ್ರಿವಾಲ್‌ ಅವರು ರಾಜೀನಾಮೆ ನೀಡಲು ನಿರಾಕರಿಸುತ್ತಿದ್ದಾರೆ. ಹೀಗಾಗಿ ಆಡಳಿತಾತ್ಮಕ ನಿರ್ಧಾರ ಕೈಗೊಳ್ಳುವುದು ವಿಳಂಬವಾಗುತ್ತಿದೆ. ಇದು ದೆಹಲಿ ಜನರ ಜೀವನದ ಮೇಲೆ ಇದು ದುಷ್ಪರಿಣಾಮ ಬೀರುತ್ತಿದೆ’ ಎಂದು ಗುಪ್ತಾ ಹೇಳಿದ್ದಾರೆ.

ಎಎಪಿ ವಾಗ್ದಾಳಿ:

ಈ ವಿಚಾರವಾಗಿ ಬಿಜೆಪಿ ವಿರುದ್ಧ ಆಮ್‌ ಆದ್ಮಿ ಪಕ್ಷವು (ಎಎಪಿ) ವಾಗ್ದಾಳಿ ನಡೆಸಿದೆ. ಬಿಜೆಪಿಗೆ ಸಂವಿಧಾನದ ಬಗ್ಗೆ ಕಿಂಚಿತ್ತೂ ಗೌರವ ಇಲ್ಲ ಎಂದು ಆರೋಪಿಸಿದೆ.

ಎಲ್ಲೆಲ್ಲಿ ಬಿಜೆಪಿ ಗೆಲ್ಲಲು ಸಾಧ್ಯವಿಲ್ಲವೋ ಅಲ್ಲೆಲ್ಲಾ ಚುನಾಯಿತ ಸರ್ಕಾರವನ್ನು ಬೀಳಿಸಿ ‘ಪರ್ಯಾಯ ಸರ್ಕಾರ ’ ರಚನೆಗೆ ಯತ್ನಿಸುತ್ತದೆ. ದೆಹಲಿಯಲ್ಲಿ ಗೆಲುವು ಸಾಧ್ಯವಿಲ್ಲ ಎಂದು ಬಿಜೆಪಿಗೆ ತಿಳಿದಿದೆ. ಹೀಗಾಗಿ ರಾಷ್ಟ್ರರಾಜಧಾನಿಯಲ್ಲಿ ಚುನಾವಣೆ ನಡೆಯುವ ಮೊದಲೇ ಬಿಜೆಪಿ ಸೋಪೊಪ್ಪಿಕೊಂಡಿದೆ ಎಂದು ಕಿಡಿಕಾರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.