ADVERTISEMENT

ಸಂವಿಧಾನ ರಕ್ಷಿಸುವ ಮಾತುಗಳಿಂದ ಸಾವರ್ಕರ್‌ಗೆ ಅವಮಾನ ಮಾಡುತ್ತಿರುವ BJP: ರಾಹುಲ್

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2024, 10:38 IST
Last Updated 14 ಡಿಸೆಂಬರ್ 2024, 10:38 IST
<div class="paragraphs"><p>ಲೋಕಸಭೆಯಲ್ಲಿ ರಾಹುಲ್ ಗಾಂಧಿ ಅವರು ಶನಿವಾರ ಮಾತನಾಡಿದರು</p></div>

ಲೋಕಸಭೆಯಲ್ಲಿ ರಾಹುಲ್ ಗಾಂಧಿ ಅವರು ಶನಿವಾರ ಮಾತನಾಡಿದರು

   

ಪಿಟಿಐ ಚಿತ್ರ

ನವದೆಹಲಿ: ‘ಸಂವಿಧಾನದಲ್ಲಿ ಭಾರತೀಯತೆ ಏನೂ ಇಲ್ಲ’ ಎಂಬ ವೀರ ಸಾವರ್ಕರ್‌ ಅವರ ಹೇಳಿಕೆಯನ್ನು ಉಲ್ಲೇಖಿಸಿದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು, ‘ಸಂವಿಧಾನವನ್ನು ರಕ್ಷಿಸುವಂತಹ ಮಾತುಗಳನ್ನಾಡುವ ಮೂಲಕ ಬಿಜೆಪಿಯು ಸೈದ್ಧಾಂತಿಕ ಮಾರ್ಗದರ್ಶಕ ಸಾವರ್ಕರ್ ಅವರನ್ನೇ ನಿಂದಿಸುತ್ತಿದೆ ಹಾಗೂ ಅಪಹಾಸ್ಯ ಮಾಡುತ್ತಿದೆ’ ಎಂದು ವ್ಯಂಗ್ಯವಾಡಿದರು. 

ADVERTISEMENT

ಲೋಕಸಭೆಯಲ್ಲಿ ‘ಭಾರತದ ಸಂವಿಧಾನದ 75 ವರ್ಷಗಳ ವೈಭವಯುತ ಪ್ರಯಾಣ’ ಕುರಿತು ನಡೆದ ಚರ್ಚೆಯಲ್ಲಿ ಶನಿವಾರ ಪಾಲ್ಗೊಂಡು 26 ನಿಮಿಷಗಳ ಕಾಲ ಮಾತನಾಡಿದರು.

‘ಸಂವಿಧಾನದಲ್ಲಿ ಭಾರತೀಯತೆ ಏನೂ ಇಲ್ಲ. ಇದರ ಬದಲು ಹಿಂದೂ ಸಂಸ್ಕೃತಿಯ ಮನುಸ್ಮೃತಿಯನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ವೇದದ ನಂತರ ಮನುಸ್ಮೃತಿಯನ್ನು ಹೆಚ್ಚಾಗಿ ಹಿಂದೂಗಳು ಆರಾಧಿಸುತ್ತಾರೆ’ ಎಂದು ಸಾವರ್ಕರ್ ಹೇಳಿದ್ದರು.  ನೀವು (ಬಿಜೆಪಿಯವರು) ಸಂವಿಧಾನವನ್ನು ರಕ್ಷಿಸುತ್ತೇವೆ ಎಂಬ ಮಾತನ್ನು ಹೇಳುತ್ತಿರುವುದು ಸಂತೋಷದ ವಿಷಯ. ಆದರೆ, ನಿಮ್ಮಲ್ಲಿ ಒಂದು ಮಾತನ್ನು ಕೇಳಲು ಬಯಸುತ್ತೇನೆ. ನಿಮ್ಮ ನಾಯಕ ಹಾಗೂ ಮಾರ್ಗದರ್ಶಕನ ಮಾತಿಗೆ ನೀವು ಬದ್ಧವಾಗಿ ಇರುತ್ತೀರಾ? ಏಕೆಂದರೆ, ನೀವು ಸಂವಿಧಾನವನ್ನು ರಕ್ಷಿಸುವ ಕುರಿತು ಮಾತನಾಡುವಾಗ ಸಾವರ್ಕರ್ ಅವರನ್ನು ನಿಂದಿಸಿದಂತಲ್ಲವೇ? ಅವರಿಗೆ ಅಪಹಾಸ್ಯ ಮಾಡಿದಂತಲ್ಲವೇ? ಸಾವರ್ಕರ್ ಅವರ ಮಾನಹಾನಿ ಮಾಡಿದಂತಲ್ಲವೇ’ ಎಂದು ರಾಹುಲ್ ಕೇಳಿದರು.

ಹಾಥರಸ್‌ ಭೇಟಿಯನ್ನು ಉಲ್ಲೇಖಿಸಿ ಮಾತನಾಡಿದ ಅವರು, ‘ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯ ಕುಟುಂಬದವರು ಮನೆಯೊಳಗೆ ಬಂಧಿಗಳಾಗಿದ್ದಾರೆ. ಆದರೆ, ಆರೋಪಿಗಳು ಮುಕ್ತವಾಗಿ ಓಡಾಡುತ್ತಿದ್ದಾರೆ. ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ತನ್ನ ಮಾತನ್ನು ಉಳಿಸಿಕೊಳ್ಳದಿದ್ದರೆ ಇಂಡಿಯಾ ಮೈತ್ರಿಕೂಟವು ಕುಟುಂಬವನ್ನು ಸ್ಥಳಾಂತರ ಮಾಡಲಿದೆ’ ಎಂದು ಹೇಳಿದರು. 

‘ಅತ್ಯಾಚಾರಿಗಳು ಹೊರಗೆ ಇರಬೇಕು ಮತ್ತು ಸಂತ್ರಸ್ತೆಯ ಕುಟುಂಬದವರು ಒಳಗೆ ಇರಬೇಕು ಎಂದು ಸಂವಿಧಾನದಲ್ಲಿ ಬರೆದಿಲ್ಲ. ಇದನ್ನು ‘ಮನುಸ್ಮೃತಿ’ಯಲ್ಲಿ ಬರೆದಿರಬಹುದು. ಬಡವರನ್ನು ಸಂವಿಧಾನವೇ ರಕ್ಷಿಸುತ್ತದೆ ಎಂದು ಹೇಳಲು ಬಯಸುತ್ತೇನೆ’ ಎಂದು ಅವರು ಹೇಳಿದರು. ಸಂಭಲ್ ಹಿಂಸಾಚಾರವನ್ನು ಉಲ್ಲೇಖಿಸಿದ ಅವರು, ‘ದ್ವೇಷ ಹರಡಬೇಕು ಹಾಗೂ ಸಮುದಾಯಗಳು ಪರಸ್ಪರರ ವಿರುದ್ಧ ಹೋರಾಡಬೇಕು ಎಂಬುದನ್ನೂ ಸಂವಿಧಾನದಲ್ಲಿ ಬರೆದಿಲ್ಲ’ ಎಂದು ಕುಟುಕಿದರು. 

‘ಆಧುನಿಕ ಭಾರತದ ದಾಖಲೆಯೇ ನಮ್ಮ ಸಂವಿಧಾನ. ಪ್ರಾಚೀನ ಭಾರತದ ಮೌಲ್ಯಗಳ ಆಧಾರದ ಮೇಲೆಯೇ ಇದನ್ನು ರಚಿಸಲಾಗಿದೆ. ಶಿವ, ಗುರು ನಾನಕ್‌, ಬಸವಣ್ಣ, ಬುದ್ಧ ಮತ್ತು ಮಹಾವೀರರ ತತ್ವಗಳೂ ಅದರಲ್ಲಿ ಅಡಕವಾಗಿವೆ. ಸಂವಿಧಾನದ ಹೊತ್ತಿಗೆಯನ್ನು ನಾವು ತೆರೆದಾಗ ಅಂಬೇಡ್ಕರ್‌, ಮಹಾತ್ಮ ಗಾಂಧಿ ಮತ್ತು ಜವಾಹರಲಾಲ್‌ ನೆಹರೂ ಅವರ ಧ್ವನಿಯನ್ನು ನಾವು ಕೇಳಿಸಿಕೊಳ್ಳಬಹುದು. ಅವರ ಪರಿಕಲ್ಪನೆಗಳನ್ನೂ ಅರಿತುಕೊಳ್ಳಬಹುದು’ ಎಂದು ರಾಹುಲ್‌ ಹೇಳಿದರು. 

ಸಾವರ್ಕರ್ ಕುರಿತಾದ ರಾಹುಲ್ ಹೇಳಿಕೆಗಳನ್ನು ಶಿವಸೇನೆಯ ಶ್ರೀಕಾಂತ್ ಶಿಂದೆ ಟೀಕಿಸಿದರು. ಸಾವರ್ಕರ್ ಪ್ರತಿಷ್ಠಾನದ ಕಾರ್ಯನಿರ್ವಾಹಕರಿಗೆ ಆಗಿನ ಪ್ರಧಾನಿ ಇಂದಿರಾ ಗಾಂಧಿ ಬರೆದ ಪತ್ರವನ್ನು ಅವರು ಉಲ್ಲೇಖಿಸಿದರು. ಪತ್ರದಲ್ಲಿ ಸಾವರ್ಕರ್‌ ಅವರನ್ನು ಭಾರತದ ಸಾಧಕ ಪುತ್ರ ಎಂದು ಬಣ್ಣಿಸಲಾಗಿತ್ತು ಎಂದು ನೆನಪಿಸಿದರು. ಈ ವೇಳೆ ಎನ್‌ಡಿಎ ಹಾಗೂ ಇಂಡಿಯಾ ಮೈತ್ರಿಕೂಟದ ಸದಸ್ಯರ ನಡುವೆ ವಾಕ್ಸಮರ ನಡೆಯಿತು. 

ಶಿಂದೆ ಆರೋಪಕ್ಕೆ ಪ್ರತಿಕ್ರಿಯಿಸಿದ ರಾಹುಲ್‌, ‘ಮಹಾತ್ಮ ಗಾಂಧಿ, ನೆಹರು ಮತ್ತು ಇತರರು ಜೈಲಿಗೆ ಹೋಗಿದ್ದ ಸಂದರ್ಭದಲ್ಲಿ ಸಾವರ್ಕರ್‌ ಅವರು ಬ್ರಿಟಿಷರಿಗೆ ಕ್ಷಮಾಯಾಚನೆಯ ಪತ್ರ ಬರೆದಿದ್ದರು. ಇದನ್ನು ಅಜ್ಜಿ ಇಂದಿರಾ ಅವರೇ ನನಗೆ ಹೇಳಿದ್ದರು’ ಎಂದು ನೆನಪಿಸಿಕೊಂಡರು. 

ಜಾತಿ ಗಣತಿ ನಡೆಸಲು ಮತ್ತು ಮೀಸಲಾತಿ ಮೇಲಿನ ಶೇ 50ರ ಮಿತಿಯನ್ನು ತೆಗೆದುಹಾಕಲು ಇಂಡಿಯಾ ಮೈತ್ರಿಕೂಟದ ಬದ್ಧತೆಯನ್ನು ಅವರು ಪುನರುಚ್ಚರಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.