ADVERTISEMENT

ಜಾರ್ಜ್‌ ಸೊರೋಸ್‌ ಜತೆ ನೆಹರೂ – ಗಾಂಧಿ ಕುಟುಂಬದ ಆಳವಾದ ಸಂಬಂಧ: ಬಿಜೆಪಿ ಆರೋಪ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2024, 9:57 IST
Last Updated 11 ಡಿಸೆಂಬರ್ 2024, 9:57 IST
<div class="paragraphs"><p>ಜಾರ್ಜ್ ಸೊರೋಸ್</p></div>

ಜಾರ್ಜ್ ಸೊರೋಸ್

   

ರಾಯಿಟರ್ಸ್ ಚಿತ್ರ

ನವದೆಹಲಿ: ಫೋರಂ ಫಾರ್‌ ಡೆಮಾಕ್ರೆಟಿಕ್ ಲೀಡರ್ಸ್‌– ಏಷ್ಯಾ ಪ್ಯಾಸಿಫಿಕ್‌ (FDL-AP) ಸಹ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿ ಅವರ ಪಾತ್ರವನ್ನೂ ಮೀರಿ ಅಮೆರಿಕದ ಕೋಟ್ಯಧಿಪತಿ ಜಾರ್ಜ್‌ ಸೊರೋಸ್ ಹಾಗೂ ನೆಹರೂ – ಗಾಂಧಿ ಕುಟುಂಬ ನಡುವಿನ ಸಂಬಂಧ ಬಹಳಾ ಆಳವಾಗಿದೆ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ಬುಧವಾರ ವಾಗ್ದಾಳಿ ನಡೆಸಿದೆ.

ADVERTISEMENT

ಸಾಮಾಜಿಕ ಮಾಧ್ಯಮ ಎಕ್ಸ್‌ ಮೂಲಕ ಈ ಮಾಹಿತಿ ಹಂಚಿಕೊಂಡಿರುವ ಬಿಜೆಪಿ, ‘ಸೊರೋಸ್‌ನಂತೆ ಹಂಗೇರಿಯವರಾದ ಫೋರಿ ನೆಹರೂ ಅವರನ್ನು ಜವಾಹರಲಾಲ್ ನೆಹರೂ ಅವರ ಸಂಬಂಧಿ ಬಿ.ಕೆ. ನೆಹರೂ ಅವರು ಮದುವೆಯಾದರು. ಆ ಮೂಲಕ ಅವರು ರಾಹುಲ್ ಗಾಂಧಿ ಅವರ ಚಿಕ್ಕಮ್ಮ ಆದರು’ ಎಂದು ಹೇಳಿದೆ.

‘ಜಾರ್ಜ್‌ ಸೊರೋಸ್ ಅವರು ಫೋರಿ ನೆಹರೂ ಅವರನ್ನು ಭೇಟಿಯಾಗಿದ್ದು, ಅವರೊಂದಿಗೆ ಪತ್ರ ವ್ಯವಹಾರ ನಡೆಸಿದ್ದರ ಕುರಿತು ದಾಖಲಿಸಲಾಗಿದೆ. ಆ ಮೂಲಕ ಅಮೆರಿಕದಲ್ಲಿ ಭಾರತೀಯ ರಾಯಭಾರಿಯಾಗಿದ್ದ ಬಿ.ಕೆ. ನೆಹರೂ ಅವರೊಂದಿಗಿನ ವ್ಯವಹಾರಗಳನ್ನೂ ಜಾರ್ಜ್ ದಾಖಲಿಸಿದ್ದಾರೆ’ ಎಂದು ಬಿಜೆಪಿ ಹೇಳಿದೆ.

‘ಈ ಎಲ್ಲಾ ಬೆಳವಣಿಗೆಗಳು ದಶಕಗಳ ಕಾಲ ಭಾರತದ ವ್ಯೂಹಾತ್ಮಕ ಹಿತಾಸಕ್ತಿಗಳೊಂದಿಗೆ ನೆಹರೂ – ಗಾಂಧಿ ಕುಟುಂಬ ರಾಜಿ ಮಾಡಿಕೊಂಡೇ ಬಂದಿದೆ. ಇದಕ್ಕೆ ಪ್ರತಿಯಾಗಿ ಈ ಕುಟುಂಬವು ಎಷ್ಟೆಲ್ಲಾ ಆರ್ಥಿಕ ಲಾಭ ಮತ್ತು ಉದ್ದಿಮೆಯಲ್ಲಿ ಪಾಲುದಾರಿಕೆಯನ್ನೂ ಪಡೆದುಕೊಂಡಿರಬಹುದು’ ಎಂದು ಪ್ರಶ್ನಿಸಿದೆ.

ಸೋನಿಯಾ ಗಾಂಧಿ ಸಂಪರ್ಕ ಹೊಂದಿರುವ FDL-AP ಪ್ರತಿಷ್ಠಾನಕ್ಕೆ ಜಾರ್ಜ್ ಸೊರೋಸ್ ದೇಣಿಗೆ ನೀಡುತ್ತಿದ್ದರು. ಆ ಮೂಲಕ ಕಾಶ್ಮೀರವನ್ನು ಸ್ವತಂತ್ರ ದೇಶವನ್ನಾಗಿಸುವ ಸಂಚು ರೂಪಿಸಿದ್ದರು. ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ವಿರೋಧ ಪಕ್ಷದ ನಾಯಕ ರಾಹುಲ್ ಗಂಧಿ ಅವರು ಜಾರ್ಜ್ ಸೊರೋಸ್‌ ಜತೆಗೂಡಿ ದೇಶ ವಿರೋಧ ಚಟುವಟಿಕೆ ನಡೆಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಬಿಜೆಪಿಯ ಈ ಆರೋಪಗಳನ್ನು ಕಾಂಗ್ರೆಸ್ ಅಲ್ಲಗಳೆದಿದೆ. ನಿಜವಾದ ಸಂಚನ್ನು ಚಳಿಗಾಲದ ಅಧಿವೇಶನದಲ್ಲಿ ಸಂಸತ್‌ನಲ್ಲಿ ಬಿಚ್ಚಿಡಲಾಗುವುದು. ಇದರಲ್ಲಿ ತಮ್ಮ ನೆಚ್ಚಿನ ಗೌತಮ್ ಅದಾನಿ ಅವರನ್ನು ರಕ್ಷಿಸಲು ಕೇಂದ್ರ ಸರ್ಕಾರವು ಮತ್ತೊಂದು ರಾಷ್ಟ್ರದೊಂದಿಗೆ ಹೇಗೆ ಕೈಜೋಡಿಸಿದೆ ಎಂಬುದನ್ನು ವಿವರಿಸಲಾಗುವುದು ಎಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.