
ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ
(ಪಿಟಿಐ ಚಿತ್ರ)
ನವದೆಹಲಿ: 'ಜನ ಸಾಮಾನ್ಯರ ಹಕ್ಕುಗಳನ್ನು ಬಿಜೆಪಿ ಕಸಿದುಕೊಳ್ಳುತ್ತಿದೆ. ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ ಉಳಿಸಲು 'ದಂಡಿ ಯಾತ್ರೆ' ಹಾಗೂ 'ಕ್ವಿಟ್ ಇಂಡಿಯಾ' ಚಳವಳಿಯ ಅದೇ ಉತ್ಸಾಹದೊಂದಿಗೆ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಬೇಕು' ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂದು (ಭಾನುವಾರ) ಕರೆ ನೀಡಿದ್ದಾರೆ.
'ಸ್ವಾತಂತ್ರ್ಯ ಪೂರ್ವ ನಡೆದ ಚಳವಳಿಯಲ್ಲಿ ಬಿಜೆಪಿಯ ಪೂರ್ವಜರು ಯಾವುದೇ ಪಾತ್ರವನ್ನು ಹೊಂದಿಲ್ಲ. ಈಗ ಜನರ ಹಕ್ಕುಗಳನ್ನು ಕಸಿದುಕೊಳ್ಳುವಲ್ಲಿ ನಿರತರಾಗಿದ್ದಾರೆ' ಎಂದು ಖರ್ಗೆ ಆರೋಪಿಸಿದ್ದಾರೆ.
ಕಾಂಗ್ರೆಸ್ 140ನೇ ಸಂಸ್ಥಾಪನಾ ದಿನಾಚರಣೆ ಉದ್ದೇಶಿಸಿ ಮಾತನಾಡಿದ ಅವರು, ಯುಪಿಎ ನೇತೃತ್ವದ ಸರ್ಕಾರ ಜಾರಿಗೆ ತಂದಿದ್ದ ಮಹತ್ವಾಕಾಂಕ್ಷಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಕಾನೂನನ್ನು ರಕ್ಷಿಸುವುದಾಗಿ ಹೇಳಿದ್ದಾರೆ.
'ನಾವು ಅಧಿಕಾರದಲ್ಲಿ ಇಲ್ಲದೇ ಇರಬಹುದು. ಕಾಂಗ್ರೆಸ್ ಎಂದಿಗೂ ಧರ್ಮದ ಹೆಸರಿನಲ್ಲಿ ಮತಗಳನ್ನು ಕೇಳಿಲ್ಲ. ದೇವಾಲಯ ಹಾಗೂ ಮಸೀದಿಗಳ ನಡುವೆ ದ್ವೇಷವನ್ನು ಬಿತ್ತಿಲ್ಲ. ಬಿಜೆಪಿ ದೇಶವನ್ನು ವಿಭಜಿಸುತ್ತದೆ. ಆದರೆ ಕಾಂಗ್ರೆಸ್ ಒಗ್ಗೂಡಿಸುತ್ತದೆ. ಬಿಜೆಪಿಯ ಧರ್ಮವನ್ನು ರಾಜಕೀಯವನ್ನಾಗಿ ಬಳಸಿಕೊಂಡಿದೆ' ಎಂದು ಆರೋಪಿಸಿದ್ದಾರೆ.
'ಕಳೆದ 11 ವರ್ಷಗಳಲ್ಲಿ ಬಿಜೆಪಿ ಸರ್ಕಾರವು, ಬಂಡವಾಳಶಾಹಿಗಳಿಗೆ ಲಾಭ ಮಾಡಿಕೊಡಲು ಹಲವಾರು ಕಾನೂನುಗಳನ್ನು ತಿದ್ದುಪಡಿ ಮಾಡಿದೆ. ನರೇಗಾವನ್ನು ನಾಶಪಡಿಸಲಾಗಿದೆ. ಅರಣ್ಯ, ಜಲ ಮತ್ತು ಜಮೀನಿನ ಲೂಟಿ ಮುಂದುವರಿದಿದೆ. ಸತ್ಯವನ್ನು ಮರೆಮಾಚಲು ಜನಗಣತಿಯನ್ನು ನಡೆಸುತ್ತಿಲ್ಲ' ಎಂದು ಆರೋಪಿಸಿದ್ದಾರೆ.
'ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ನಿರ್ಮಿಸಲಾದ ಸಂಸ್ಥೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವಧಿಯಲ್ಲಿ ದುರ್ಬಲಗೊಳಿಸಲಾಗಿದೆ' ಎಂದು ಅವರು ಟೀಕಿಸಿದ್ದಾರೆ.
'ಆರ್‌ಎಸ್‌ಎಸ್-ಬಿಜೆಪಿ ನಾಯಕರು ಸಂವಿಧಾನವನ್ನು ಅಂಗೀಕರಿಸಿಲ್ಲ. ದೇಶದ ತ್ರಿವರ್ಣ ಧ್ವಜ, ಅಶೋಕ ಚಕ್ರ, ವಂದೇ ಮಾತರಂ ಅನ್ನು ಸಹ ಅಂಗೀಕರಿಸಿಲ್ಲ. ಬಿಜೆಪಿ ಅಧಿಕಾರದಲ್ಲಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಅಪಾಯದಲ್ಲಿದೆ' ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
'ಕಳೆದ 140 ವರ್ಷಗಳಲ್ಲಿ ಕಾಂಗ್ರೆಸ್ ಹಲವು ಏಳು-ಬೀಳುಗಳನ್ನು ಕಂಡಿದೆ. ಆದರೆ ಕಾಂಗ್ರೆಸ್ ಒಂದು ಸಿದ್ಧಾಂತವಾಗಿದೆ. ಸಿದ್ದಾಂತ ಎಂದಿಗೂ ಸೋಲುವುದಿಲ್ಲ. ಹಾಗಾಗಿ ಇದು ಕೇವಲ ಚುನಾವಣೆಗಾಗಿ ನಡೆಯುವ ಹೋರಾಟವಲ್ಲ. ಇದು ಭಾರತದ ಆತ್ಮಕ್ಕಾಗಿ ನಡೆಯುವ ಹೋರಾಟ. ಈ ಸ್ಥಿತಿಯಲ್ಲಿ ಕಾಂಗ್ರೆಸ್ ಹೋರಾಡದಿದ್ದರೆ ಸಂವಿಧಾನವನ್ನು ಯಾರು ರಕ್ಷಿಸುತ್ತಾರೆ? ಪ್ರಜಾಪ್ರಭುತ್ವವನ್ನು ಯಾರು ರಕ್ಷಿಸುತ್ತಾರೆ?' ಎಂದು ಹೇಳಿದ್ದಾರೆ.
ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ ಹೆಸರನ್ನು ವಿಬಿ ಜಿ ರಾಮ್ ಜಿ ಎಂದು ಬದಲಾಯಿಸಿರುವುದರ ವಿರುದ್ಧ ಕಾಂಗ್ರೆಸ್, ಜನವರಿ 5ರಿಂದ ನರೇಗಾ ಬಚಾವೊ ಅಭಿಯಾನ ಹಮ್ಮಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.