ADVERTISEMENT

ಹಿಂದೂ ವೋಟ್ ಬ್ಯಾಂಕ್ ಹಂಚಿಕೊಳ್ಳಲು ಬಿಜೆಪಿ ಬಯಸುತ್ತಿಲ್ಲ: ಉದ್ಧವ್ ಠಾಕ್ರೆ

ಪಿಟಿಐ
Published 25 ಜೂನ್ 2022, 3:06 IST
Last Updated 25 ಜೂನ್ 2022, 3:06 IST
ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ   

ಮುಂಬೈ: ಹಿಂದೂ ವೋಟ್ ಬ್ಯಾಂಕ್ ಅನ್ನು ಹಂಚಿಕೊಳ್ಳಲು ಬಿಜೆಪಿ ಬಯಸುತ್ತಿಲ್ಲ. ಅದಕ್ಕಾಗಿ ಶಿವಸೇನಾ ಪಕ್ಷವನ್ನು ಮುಗಿಸಲು ಬಯಸುತ್ತಿದೆ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಆರೋಪಿಸಿದ್ದಾರೆ.

ಶಿವಸೇನಾ ಕಾರ್ಪೊರೇಟರ್‌ಗಳನ್ನು ಉದ್ದೇಶಿಸಿ ಮಾತನಾಡಿದ ಉದ್ಧವ್, ಪಕ್ಷದ ಸಾಮಾನ್ಯ ಕಾರ್ಯಕರ್ತರು ತಮ್ಮ ಆಸ್ತಿಯಾಗಿದ್ದು, ಅವರೆಲ್ಲರು ತಮ್ಮೊಂದಿಗೆ ಇರುವವರೆಗೂ ಯಾವುದೇ ಟೀಕೆಗಳಿಗೆ ಹೆದರುವುದಿಲ್ಲ ಎಂದಿದ್ದಾರೆ.

ಶಿವಸೇನಾದವರೇ ಪಕ್ಷಕ್ಕೆ ದ್ರೋಹ ಎಸಗಿದ್ದಾರೆ ಎಂದು ಬಂಡಾಯ ಗುಂಪಿನ ನಾಯಕ ಏಕನಾಥ ಶಿಂಧೆ ಅವರನ್ನು ಉದ್ದೇಶಿಸಿ ಠಾಕ್ರೆ ವಾಗ್ದಾಳಿ ನಡೆಸಿದರು.

ಮಿತ್ರಕೂಟದ ಬಗ್ಗೆ ಇರುವ ದೂರುಗಳನ್ನು ಪರಿಶೀಲಿಸುವಂತೆ ಶಿಂಧೆ ಅವರಿಗೆ ತಿಳಿಸಿದ್ದೆ. ಶಿವಸೇನಾ ಬಿಜೆಪಿ ಜೊತೆ ಕೈಜೋಡಿಸುವಂತೆ ಶಾಸಕರು ಒತ್ತಡ ಹೇರುತ್ತಿದ್ದಾರೆ ಎಂದು ಅವರು ಹೇಳಿದ್ದರು. ಆ ಶಾಸಕರನ್ನು ನನ್ನ ಬಳಿಗೆ ಕರೆತನ್ನಿ, ಚರ್ಚಿಸೋಣ ಎಂದು ಹೇಳಿದ್ದೆ. ಬಿಜೆಪಿ ನಮ್ಮನ್ನು ಕೆಟ್ಟದಾಗಿ ನಡೆಸಿಕೊಂಡಿದೆ. ಭರವಸೆಗಳನ್ನು ಈಡೇರಿಸಲಿಲ್ಲ. ಬಂಡಾಯಗಾರರ ಮೇಲೆ ಅನೇಕ ಪ್ರಕರಣಗಳು ದಾಖಲಾಗಿವೆ. ಹಾಗಾಗಿ ಅವರು ಬಿಜೆಪಿಯೊಂದಿಗೆ ಹೋದರೆ ಶುದ್ಧರಾಗುತ್ತಾರೆ. ನಮ್ಮೊಂದಿಗೆ ಇದ್ದರೆ ಜೈಲಿಗೆ ಹೋಗುತ್ತಾರೆ. ಇದು ಸ್ನೇಹದ ಸಂಕೇತವೇ ಎಂದು ಠಾಕ್ರೆ ಪ್ರಶ್ನಿಸಿದ್ದಾರೆ.

ಪಕ್ಷದಲ್ಲಿ ಹಲವು ಆಕಾಂಕ್ಷಿಗಳಿದ್ದರೂ ಬಂಡಾಯ ಶಾಸಕರಿಗೆ ವಿಧಾಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಿದ್ದೆವು. ಕಾರ್ಯಕರ್ತರ ಪರಿಶ್ರಮದಿಂದ ಚುನಾಯಿತರಾದ ಬಳಿಕ ಪಕ್ಷದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಈ ನಿರ್ಣಾಯಕ ಹಂತದಲ್ಲಿ ನಮ್ಮ ಜೊತೆಗಿರುವ ಪಕ್ಷದ ನಿಷ್ಠಾವಂತ ಬೆಂಬಲಿಗರಿಗೆ ಧನ್ಯವಾದಗಳನ್ನು ಹೇಳಲಿಚ್ಛಿಸುತ್ತೇನೆ ಎಂದು ಹೇಳಿದರು.

ಶಿವಸೇನಾವನ್ನು ಮುನ್ನಡೆಸಲು ತಾವು ಅಸಮರ್ಥರು ಎಂದು ಪಕ್ಷದ ಕಾರ್ಯಕರ್ತರು ಭಾವಿಸಿದರೆ, ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ ಎಂದು ಹೇಳಿದರು.

ಶಿವಸೇನಾಕ್ಕೆ ಒಂದು ಸಿದ್ಧಾಂತವಿದೆ. ಬಿಜೆಪಿಯು ಅದನ್ನು ಮುಗಿಸಲು ಬಯಸುತ್ತಿದೆ. ಏಕೆಂದರೆ ಅವರು ಹಿಂದೂ ಮತಗಳನ್ನು ಯಾರೊಂದಿಗೂ ಹಂಚಿಕೊಳ್ಳಲು ಬಯಸುವುದಿಲ್ಲ ಎಂದು ಆರೋಪಿಸಿದರು.

ಹಿಂದುತ್ವದ ಮತಗಳ ವಿಭಜನೆಯನ್ನು ತಪ್ಪಿಸಲು ಬಾಳಾ ಸಾಹೇಬ್ ಠಾಕ್ರೆ ಬಿಜೆಪಿಯೊಂದಿಗೆ ಮೈತ್ರಿ ಆರಂಭಿಸಿದರು. ಬಂಡಾಯ ಶಾಸಕರಿಗೆ ಬಿಜೆಪಿ ಜೊತೆಗೆ ಸೇರುವುದನ್ನು ಬಿಟ್ಟು ಬೇರೆ ದಾರಿಯಿಲ್ಲ. ಹಾಗೊಂದು ವೇಳೆ ಸರ್ಕಾರ ರಚಿಸಲು ಯಶಸ್ವಿಯಾದರೂ ಹೆಚ್ಚು ಕಾಲ ಉಳಿಯುವುದಿಲ್ಲ. ಏಕೆಂದರೆ ಅನೇಕ ಶಾಸಕರು ಅಸಂತೃಪ್ತರಾಗಿದ್ದಾರೆ. ಅಲ್ಲದೆ ಮುಂದಿನ ಚುನಾವಣೆ ಗೆಲ್ಲಲು ಬಂಡಾಯ ಶಾಸಕರಿಗೆ ಸಾಧ್ಯವಾಗದು ಎಂದು ಹೇಳಿದರು.

ಪಕ್ಷದಿಂದ ಹೊರಹೋಗಲು ಬಯಸವವರು ಹೊರ ಹೋಗಲು ಸ್ವತಂತ್ರರಾಗಿದ್ದಾರೆ. ನಾನು ಹೊಸ ಶಿವಸೇನಾವನ್ನು ರಚಿಸುತ್ತೇನೆ ಎಂದು ಶಿಂಧೆ ಹಾಗೂ ಬಿಜೆಪಿಗೆ ಸವಾಲು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.