
ಕೋಲ್ಕತ್ತ: ಭಗವದ್ಗೀತೆ ಬೃಹತ್ ಪಠಣ ಕಾರ್ಯಕ್ರಮ ನಡೆಯುತ್ತಿದ್ದ ಮೈದಾನದಲ್ಲಿ ಮಾಂಸದ ಅಂಗಡಿ ಇಟ್ಟಿದ್ದ ವ್ಯಾಪಾರಿಗಳ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ಜಾಮೀನು ಪಡೆದು ಬಿಡುಗಡೆಯಾದ ಆರೋಪಿಗಳನ್ನು ಪಶ್ಚಿಮ ಬಂಗಾಳ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅಭಿನಂದಿಸಿದ್ದಾರೆ.
‘ನಾನೊಬ್ಬ ಹಿಂದುವಾಗಿ ಅವರ ಜೊತೆ ನಿಲ್ಲುತ್ತೇನೆ’ ಎಂದು ಆರೋಪಿಗಳನ್ನು ಅಭಿನಂಧಿಸಿದ ಭಾವಚಿತ್ರ ಸಮೇತ ಅವರು ಫೇಸ್‌ಬುಕ್ ಪೋಸ್ಟ್ ಮಾಡಿದ್ದಾರೆ.
ಡಿಸೆಂಬರ್ 7ರಂದು ಕೋಲ್ಕತ್ತದ ಬ್ರಿಗೇಡ್ ಪರೇಡ್ ಮೈದಾನದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದ ವೇಳೆ ಕೋಳಿ ಮಾಂಸಾಹಾರದ ಅಂಗಡಿ ಇಟ್ಟಿದ್ದ ಇಬ್ಬರ ಮೇಲೆ ಹಲ್ಲೆ ನಡೆದಿತ್ತು. ಈ ಸಂಬಂಧ ಬುಧವಾರ ರಾತ್ರಿ ಮೂವರನ್ನು ಬಂಧಿಸಲಾಗಿತ್ತು. ಮೂವರಿಗೂ ಬ್ಯಾಂಕ್‌ಶಲ್ ನ್ಯಾಯಾಲಯ ಜಾಮೀನು ನೀಡಿತ್ತು.
‘ನಿಮ್ಮ ನಿಯತ್ತಿನ ಪೊಲೀಸರನ್ನು ಛೂ ಬಿಡುವುದರಿಂದ ಸನಾತನಿಗಳನ್ನು ದಮನ ಮಾಡಲು ಸಾಧ್ಯವಿಲ್ಲ ಎಂದು ಮಮತಾ ಬ್ಯಾನರ್ಜಿ (ಮುಖ್ಯಮಂತ್ರಿ) ಅವರಿಗೆ ತಿಳಿಸಲು ಬಯಸುತ್ತೇನೆ’ ಎಂದು ಸುವೇಂದು ಹೇಳಿದ್ದಾರೆ.
‘ನಾನು ಶಾಸಕ, ವಿಪಕ್ಷ ನಾಯಕ, ಬಿಜೆಪಿಗ ಏನೇ ಆಗಿರಬಹುದು. ಮೊದಲು ಹಿಂದು. ಧರ್ಮ ರಕ್ಷಣೆಯ ಹೋರಾಟ ನಿಲ್ಲದು. ನಾನು ಹಿಂದು ಪರ ನಿಲ್ಲುವೆ. ನನ್ನವರು ತೊಂದರೆಗೆ ಸಿಲುಕಿದಾಗ ರಕ್ಷಣೆಗೆ ಬರುವೆ. ಭಗವದ್ಗೀತೆ ನಮಗೆ ಇದನ್ನೇ ಕಲಿಸಿದೆ’ ಎಂದಿದ್ದಾರೆ.
‘ಯುವಕರ ಗುಂಪು ನಮ್ಮ ಮಳಿಗೆಗೆ ಬಂದು ಮಾಂಸಾಹಾರ ಮಾರಾಟ ಮಾಡದಂತೆ ಬೆದರಿಸಿತ್ತು. ಕಿವಿ ಹಿಡಿದು ಬಸಿಕೆ ಹೊಡೆಸಿತ್ತು’ ಎಂದು ಇಬ್ಬರು ವ್ಯಾಪಾರಿಗಳು ದೂರಿದ್ದರು. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ ನಂತರ ಮೈದಾನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.