ADVERTISEMENT

ಅಸಾದುದ್ದೀನ್ ಒವೈಸಿ ಬಿಜೆಪಿಯ ‘ಚಾಚಾ ಜಾನ್’: ರಾಕೇಶ್ ಟಿಕಾಯತ್ ಟೀಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಸೆಪ್ಟೆಂಬರ್ 2021, 7:06 IST
Last Updated 15 ಸೆಪ್ಟೆಂಬರ್ 2021, 7:06 IST
ಭಾರತೀಯ ರೈತ ಒಕ್ಕೂಟದ (ಬಿಕೆಯು) ನಾಯಕ ರಾಕೇಶ್ ಟಿಕಾಯತ್ (ಪಿಟಿಐ ಸಂಗ್ರಹ ಚಿತ್ರ)
ಭಾರತೀಯ ರೈತ ಒಕ್ಕೂಟದ (ಬಿಕೆಯು) ನಾಯಕ ರಾಕೇಶ್ ಟಿಕಾಯತ್ (ಪಿಟಿಐ ಸಂಗ್ರಹ ಚಿತ್ರ)   

ಬಾಗ್‌ಪತ್ (ಉತ್ತರ ಪ್ರದೇಶ): ಆಲ್ ಇಂಡಿಯಾ ಮಜಿಲಿಸ್-ಇ-ಇತ್ಹೇದುಲ್‌ ಮುಸ್ಲೀಮೀನ್ (ಎಐಎಂಐಎಂ) ಅಧ್ಯಕ್ಷ ಅಸಾದುದ್ದೀನ್ ಒವೈಸಿ ಬಿಜೆಪಿಯ ‘ಚಾಚಾ ಜಾನ್’ ಎಂದು ಭಾರತೀಯ ರೈತ ಒಕ್ಕೂಟದ (ಬಿಕೆಯು) ನಾಯಕ ರಾಕೇಶ್ ಟಿಕಾಯತ್ ಟೀಕಿಸಿದ್ದಾರೆ.

ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿ ಸಾರ್ವಜನಿಕ ರೈತರನ್ನು ಉದ್ದೇಶಿಸಿ ಮಾತನಾಡಿದ ಅವರು, ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಎಐಎಂಐಎಂ ಸ್ಪರ್ಧಿಸುವ ಕುರಿತು ಒವೈಸಿ ನಿರ್ಧಾರ ಕೈಗೊಂಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿಯ ‘ಚಾಚಾ ಜಾನ್’ ಒವೈಸಿ ಉತ್ತರ ಪ್ರದೇಶ ಪ್ರವೇಶಿಸಿದ್ದಾರೆ. ಅವರು ಬಿಜೆಪಿಯವರನ್ನು ನಿಂದಿಸಿದರೆ ಅವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳುವುದಿಲ್ಲ. ಅವರು ಒಂದು ತಂಡವಾಗಿದ್ದಾರೆ ಎಂದು ಟಿಕಾಯತ್ ಆರೋಪಿಸಿರುವುದಾಗಿ ‘ಎಎನ್‌ಐ’ ಟ್ವೀಟ್ ಮಾಡಿದೆ.

‘ಒವೈಸಿಗೆ ಬಿಜೆಪಿಯ ಆಶೀರ್ವಾದವಿದೆ. ಇದೇ ಕಾರಣಕ್ಕೆ ಅವರು ಧೈರ್ಯವಾಗಿ ಬಿಜೆಪಿಯನ್ನು ನಿಂದಿಸುತ್ತಾರೆ. ಸರ್ಕಾರ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಬಿಜೆಪಿಯೂ ಒವೈಸಿಯ ಸಹಾಯ ಪಡೆಯಲಿದೆ. ಈ ನಡೆಯನ್ನು ರೈತರು ಅರ್ಥ ಮಾಡಿಕೊಳ್ಳಬೇಕು. ಒವೈಸಿ ರೈತರನ್ನು ನಾಶ ಮಾಡಲಿದ್ದಾರೆ’ ಎಂದು ಟಿಕಾಯತ್ ಹೇಳಿದ್ದಾರೆ.

ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ಇದೀಗ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಉತ್ತರ ಪ್ರದೇಶದತ್ತ ಹೆಚ್ಚು ಗಮನಹರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.