ರಿತು ತಾವಡೆ
ಮುಂಬೈ: ಬೃಹನ್‌ಮುಂಬೈ ಮಹಾನಗರಪಾಲಿಕೆಯ (ಬಿಎಂಸಿ) ಮೇಯರ್ ಚುನಾವಣೆಗೆ ರಿತು ತಾವಡೆ ಅವರನ್ನು ಭಾರತೀಯ ಜನತಾ ಪಕ್ಷ (ಬಿಜೆಪಿ) ಅಭ್ಯರ್ಥಿಯಾಗಿ ಶನಿವಾರ ಆಯ್ಕೆ ಮಾಡಿದೆ.
ಇದೇ ವೇಳೆ, ಮೈತ್ರಿಕೂಟದ ಭಾಗವಾದ ಶಿವಸೇನೆ (ಶಿಂದೆ) ಉಪ ಮೇಯರ್‌ಗೆ ಸಂಜಯ್ ಘಾಡಿಯನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ ಎಂದು ಶಿವಸೇನೆ ನಾಯಕ ರಾಹುಲ್ ಶೇವಾಳೆ ತಿಳಿಸಿದ್ದಾರೆ.
ರಿತು ತಾವಡೆ ವಾರ್ಡ್ ಸಂಖ್ಯೆ 132ರ ಕಾರ್ಪೊರೇಟರ್ ಆಗಿದ್ದಾರೆ. ಸಂಜಯ್ ಘಾಡಿ ವಾರ್ಡ್ ಸಂಖ್ಯೆ 5ರಿಂದ ಆಯ್ಕೆಯಾಗಿದ್ದಾರೆ. ಸಂಜಯ್ ಈ ಹಿಂದೆ 15 ತಿಂಗಳ ಕಾಲ ಉಪಮೇಯರ್ ಆಗಿ ಕೆಲಸ ಮಾಡಿದ್ದರು.
227 ಸದಸ್ಯ ಬಲದ ಪಾಲಿಕೆ ಚುನಾವಣೆ ಇತ್ತೀಚೆಗೆ ನಡೆದಿತ್ತು. ಬಿಜೆಪಿ 89 ಸ್ಥಾನಗಳೊಂದಿಗೆ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಶಿವಸೇನೆ 29 ಸ್ಥಾನಗಳನ್ನು ಗೆದ್ದುಕೊಂಡಿದೆ. ಒಟ್ಟಾರೆ 118 ಸದಸ್ಯ ಬಲ ಹೊಂದಿರುವ ಈ ಮೈತ್ರಿಕೂಟ ಸರಳ ಬಹುಮತ ಪಡೆದುಕೊಂಡಿದೆ.
25 ವರ್ಷಗಳ ಕಾಲ ಪಾಲಿಕೆ ಆಡಳಿತ ನಡೆಸಿದ್ದ ಶಿವಸೇನೆ (ಯುಬಿಟಿ) ಈ ಬಾರಿ 65 ಸ್ಥಾನಗಳನ್ನು ಗೆದ್ದು ಅಧಿಕಾರದಿಂದ ಕೆಳಗಿಳಿದಿದೆ. ಅದರ ಮೈತ್ರಿ ಪಕ್ಷಗಳಾದ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) 6, ಎನ್‌ಸಿಪಿ (ಶರದ್) 1 ಸ್ಥಾನ ಪಡೆದಿತ್ತು. ಇತರೆ ಪಕ್ಷಗಳಾದ ಕಾಂಗ್ರೆಸ್ 24, ಎಐಎಂಐಎಂ 8, ಎನ್‌ಸಿಪಿ (ಅಜಿತ್) 3, ಸಮಾಜವಾದಿ ಪಕ್ಷ 2 ಹಾಗೂ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಗೆಲುವು ದಾಖಲಿಸಿದ್ದಾರೆ.
ಬಿಎಂಸಿ ದೇಶದ ಅತಿ ಶ್ರೀಮಂತ ಪಾಲಿಕೆಯಾಗಿದೆ. ಕಳೆದ ಸಾಲಿನಲ್ಲಿ ಬಿಎಂಸಿ ₹74,450 ಕೋಟಿ ಬಜೆಟ್ ಮಂಡಿಸಿತ್ತು. ಇದು ನಮ್ಮ ದೇಶದ ಕೆಲವು ಸಣ್ಣ ರಾಜ್ಯಗಳ ಬಜೆಟ್‌ಗಿಂತಲೂ ಹೆಚ್ಚಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.