
ಪಂಜಾಬ್‌ನ ಗುರುದಾಸ್‌ಪುರ ಕ್ಷೇತ್ರದಲ್ಲಿ 2019ರ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಪುತ್ರ ಸನ್ನಿ ದೇವಲ್ ಪರವಾಗಿ ಪ್ರಚಾರದಲ್ಲಿ ಭಾಗಿಯಾದ ನಟ ಧರ್ಮೇಂದ್ರ
ಪಿಟಿಐ ಚಿತ್ರ
ಮುಂಬೈ: ಬಾಲಿವುಡ್‌ನಲ್ಲಿ ಸಾಹಸ ದೃಶ್ಯ, ಖಡಕ್ ಸಂಭಾಷಣೆ ಮೂಲಕವೇ ಹಿ–ಮ್ಯಾನ್ ಎಂದು ಕರೆಸಿಕೊಂಡಿದ್ದು ಮಾತ್ರವಲ್ಲ, ರಾಜಕೀಯಕ್ಕೂ ಪ್ರವೇಶಿಸಿ ಚೊಚ್ಚಲ ಚುನಾವಣೆಯಲ್ಲೇ ಸಂಸತ್ ಭವನ ಪ್ರವೇಶಿಸಿ ಅಚ್ಚರಿ ಮೂಡಿಸಿದವರು ನಟ ಧರ್ಮೇಂದ್ರ.
ರಾಜಸ್ಥಾನದ ಬಿಕಾನೆರ್ ಕ್ಷೇತ್ರದ ಮೂಲಕ 2004ರಲ್ಲಿ ಧರ್ಮೇಂದ್ರ ಅವರು ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸಿದರು. ಆದರೆ ಬಹುಬೇಗನೆ ಅವರು ರಾಜಕೀಯದಿಂದಲೇ ನಿರ್ಗಮಿಸಿದ್ದು ಸಾಕಷ್ಟು ಪ್ರಶ್ನೆಯನ್ನು ಹುಟ್ಟುಹಾಕಿತು.
ಭಾರತೀಯ ಜನತಾ ಪಾರ್ಟಿಯ (ಬಿಜೆಪಿ) ಹಿರಿಯ ನಾಯಕ ಎಲ್.ಕೆ. ಅಡ್ವಾನಿ ಅವರು ‘ಇಂಡಿಯಾ ಶೈನಿಂಗ್’ ಎಂಬ ಬೃಹತ್ ರಾಜಕೀಯ ಅಭಿಯಾನವನ್ನು 2004ರಲ್ಲಿ ಆರಂಭಿಸಿದರು. ಧರ್ಮೇಂದ್ರ ಅವರು ಇದರ ಭಾಗವಾದರು. ಅವರ ಜನಪ್ರಿಯತೆ ಸ್ವತಃ ಅವರಿಗೆ ಹಾಗೂ ಪಕ್ಷಕ್ಕೂ ಸಾಕಷ್ಟು ನೆರವಾಯಿತು.
2004ರಲ್ಲಿ 14ನೇ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಧರ್ಮೇಂದ್ರ ಅವರು ಕಾಂಗ್ರೆಸ್ ಅಭ್ಯರ್ಥಿ ರಾಮೇಶ್ವರ ಲಾಲ್ ದುದಿ ಅವರನ್ನು 60 ಸಾವಿರ ಮತಗಳ ಅಂತರದಿಂದ ಪರಾಭವಗೊಳಿಸಿ ಸಂಸತ್ ಪ್ರವೇಶಿಸಿದರು.
ಆದರೆ ಚಿತ್ರ ನಟನೆಯಂತೆ ಧರ್ಮೇಂದ್ರ ಅವರ ರಾಜಕೀಯ ಜೀವನ ಅಷ್ಟಾಗಿ ಜನಮಾನಸದಲ್ಲಿ ಉಳಿದಿಲ್ಲ. ರಾಜಕೀಯದಲ್ಲಿ ಅವರ ಜನಪ್ರಿಯತೆ ಎಷ್ಟಿತ್ತೋ, ಕೆಲವೊಂದು ವಿವಾದಾತ್ಮಕ ಹೇಳಿಕೆಗಳ ಮೂಲಕ ಕುಖ್ಯಾತಿಯನ್ನೂ ಅವರು ಅಷ್ಟೇ ಪಡೆದಿದ್ದರು.
‘ಪ್ರಜಾಪ್ರಭುತ್ವಕ್ಕೆ ಅಗತ್ಯವಿರುವ ಮೂಲಭೂತ ಶಿಷ್ಟಾಚಾರವನ್ನು ಕಲಿಸಲು ಚುನಾಯಿತ ಸರ್ವಾಧಿಕಾರಿ ಅಗತ್ಯ’ ಎಂಬ ಅವರ ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಬಹಳಷ್ಟು ನಾಯಕರು ಹಾಗೂ ಜನರು ಅವರ ಹೇಳಿಕೆಯನ್ನು ಟೀಕಿಸಿದ್ದರು. ಸಂಸದರಾಗಿ ಲೋಕಸಭೆ ಪ್ರವೇಶಿಸಿದ ನಂತರವೂ ಕಲಾಪಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳದ ಅವರ ನಡೆ ಕುರಿತೂ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು.
ಸಂಸದರಾಗಿ ಐದು ವರ್ಷಗಳ ಅವಧಿ ಪೂರ್ಣಗೊಂಡ ನಂತರ ನಟ ಧರ್ಮೇಂದ್ರ ಅವರು ತಮ್ಮ ರಾಜಕೀಯ ಜೀವನದ ಕುರಿತು ಬಹಿರಂಗವಾಗಿಯೇ ಬೇಸರ ವ್ಯಕ್ತಪಡಿಸಿದರು. ‘ಕಾಮ್ ಮೇ ಕರ್ತಾತಾ, ಕ್ರೆಡಿಟ್ ಕೋಯಿ ಔರ್ ಲೇಜಾತಾತಾ (ನಾನು ಕೆಲಸ ಮಾಡುತ್ತಿದ್ದೆ. ಶ್ರೇಯಸನ್ನು ಇನ್ಯಾರೋ ತೆಗೆದುಕೊಳ್ಳುತ್ತಿದ್ದರು) ಎಂದಿದ್ದರು.
ಕೆಲ ದಿನಗಳ ನಂತರ ಧರ್ಮೇಂದ್ರ ಅವರ ಪುತ್ರ ಸನ್ನಿ ದೇವಲ್ ಅವರು ಮಾಧ್ಯಮ ಸಂದರ್ಶನದಲ್ಲಿ ಈ ವಿಷಯ ಹಂಚಿಕೊಂಡಿದ್ದರು. ‘ತಂದೆಯವರಿಗೆ ರಾಜಕೀಯ ಇಷ್ಟವಿರಲಿಲ್ಲ. ರಾಜಕೀಯದ ಒಳಮರ್ಮಗಳ ಕುರಿತು ಸದಾ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು’ ಎಂದಿದ್ದರು.
ರಾಜಕೀಯದಿಂದ ದೂರವೇ ಉಳಿದರು, ತಮ್ಮ ಪುತ್ರ ಸನ್ನಿ ಅವರು 2019ರಲ್ಲಿ ಗುರುದಾಸ್‌ಪುರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾಗ, ಅವರ ಪರವಾಗಿ ಪ್ರಚಾರ ನಡೆಸಿದ್ದರು. ‘ನಾನು ಇಲ್ಲಿ ಬಂದಿರುವುದು ರಾಜಕೀಯ ಮಾತನಾಡಲು ಅಲ್ಲ. ಏಕೆಂದರೆ ನಾನು ಈಗ ರಾಜಕೀಯದಲ್ಲಿ ಇಲ್ಲ. ನಾನೊಬ್ಬ ದೇಶಭಕ್ತ ಮತ್ತು ಸ್ಥಳೀಯ ಸಮಸ್ಯೆಗಳು ಗೊತ್ತಿರುವುದರಿಂದ ನಾನು ನಿಮ್ಮೆದುರು ನಿಂತಿದ್ದೇನೆ’ ಎಂದಿದ್ದರು.
ಧರ್ಮೇಂದ್ರ ಅವರು ಮೂಲತಃ ಪಂಜಾಬ್‌ನ ಕೈಗಾರಿಕಾ ನಗರವಾದ ಲೂಧಿಯಾನದ ಸಹನೇವಾಲ್ ಪಟ್ಟಣದವರು. ಶೋಲೆ, ಗಾಯಲ್, ಯಾದೋ ಕಿ ಬಾರಾತ್, ಪೂಲ್ ಔರ್ ಪತ್ತರ್, ಚುಪ್ಕೆ ಚುಪ್ಕೆ ಸೇರಿದಂತೆ ಹಲವು ಚಿತ್ರಗಳಿಗೆ ಬಣ್ಣ ಹಚ್ಚಿರುವ ಅವರು ತಮ್ಮ ದೇಹದಾರ್ಢ್ಯತೆ ಮತ್ತು ಸಾಹಸ ದೃಶ್ಯಗಳಿಂದ ಬಾಲಿವುಡ್‌ನ ‘ಹಿ–ಮ್ಯಾನ್’ ಎಂದೇ ಖ್ಯಾತಿ ಪಡೆದವರು. ಶೋಲೆಯ ‘ವೀರು’ ಎಂದೇ ಮನೆಮಾತಾಗಿದ್ದರು. ‘ಸೀತಾ ಔರ್ ಗೀತಾ’ ಚಿತ್ರದಲ್ಲಿನ ಅವರ ಭಾವನಾತ್ಮಕ ನಟನೆಯನ್ನು ಇಂದಿಗೂ ಹಲವರು ನೆನಪಿಸಿಕೊಳ್ಳುತ್ತಾರೆ.
ಪ್ರಕಾಶ್ ಕೌರ್ ಅವರನ್ನು ವರಿಸಿರುವ ಧರ್ಮೇಂದ್ರ ನಂತರ ನಟಿ ಹೇಮಾ ಮಾಲಿನಿ ಅವರನ್ನು ವಿವಾಹವಾದರು. ಇವರಿಗೆ ಆರು ಜನ ಮಕ್ಕಳಿದ್ದಾರೆ. ನಟರಾದ ಸನ್ನಿ ದೇವಲ್, ಬಾಬಿ ದೇವಲ್ ಅವರೊಂದಿಗೆ ವಿಜೇತಾ ಮತ್ತು ಅಜೀತಾ ಎಂಬ ಪುತ್ರಿಯರು ಪ್ರಕಾಶ್ ಅವರಿಗೆ ಜನಿಸಿದ್ದಾರೆ. ಹೇಮಾ ಅವರಿಗೆ ಇಶಾ ದೇವಲ್ ಮತ್ತು ಅಹಾಮಾ ದೇವಲ್ ಎಂಬ ಪುತ್ರಿಯರು ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.