ADVERTISEMENT

ಬಾಂಬ್‌ ಬೆದರಿಕೆ: ತುರ್ತು ಭೂಸ್ಪರ್ಶ ಮಾಡಿದ ರಷ್ಯಾ ವಿಮಾನ

ಪಿಟಿಐ
Published 14 ಅಕ್ಟೋಬರ್ 2022, 14:20 IST
Last Updated 14 ಅಕ್ಟೋಬರ್ 2022, 14:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಬಾಂಬ್‌ ಬೆದರಿಕೆ ಬಂದ ಹಿನ್ನೆಲೆಯಲ್ಲಿ ರಷ್ಯಾದ ಮಾಸ್ಕೊದಿಂದ ದೆಹಲಿಗೆ ಬರುತ್ತಿದ್ದ ವಿಮಾನವು ಶುಕ್ರವಾರ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ತುರ್ತು ಭೂಸ್ಪರ್ಶ ಮಾಡಿತು.

‘ಏರೊಫ್ಲೋಟ್‌ ವಿಮಾನದಲ್ಲಿ 386 ಮಂದಿ ಪ್ರಯಾಣಿಕರು ಹಾಗೂ 14 ಮಂದಿ ಸಿಬ್ಬಂದಿ ಸೇರಿ ಒಟ್ಟು 400 ಮಂದಿ ‍ಪ್ರಯಾಣಿಸುತ್ತಿದ್ದರು. ಗುರುವಾರ ತಡರಾತ್ರಿ 2.48 ಹೊತ್ತಿಗೆ ವಿಮಾನವು ವಿಮಾನ ನಿಲ್ದಾಣಕ್ಕೆ ಸುರಕ್ಷಿತವಾಗಿ ಬಂದಿಳಿಯಿತು’ ಎಂದು ಅಧಿಕಾರಿಗಳು ತಿಳಿಸಿದರು.

‘ಕೇಂದ್ರೀಯ ಕೈಗಾರಿಕಾ ಸುರಕ್ಷಾ ಪಡೆಗೆ (ಸಿಐಎಸ್‌ಎಫ್‌) ಇ–ಮೇಲ್‌ ಮೂಲಕ ವಿಮಾನದಲ್ಲಿ ಬಾಂಬ್‌ ಇರುವುದಾಗಿ ಗುರುವಾರ ರಾತ್ರಿ ಬೆದರಿಕೆ ಸಂದೇಶ ಬಂದಿತ್ತು’ ಎಂದರು.

ADVERTISEMENT

‘ತಕ್ಷಣದಲ್ಲೇ 400 ಮಂದಿಯನ್ನು ವಿಮಾನದಿಂದ ಕೆಳಗಿಳಿಸಿ, ವಿಮಾನವನ್ನು ಪೂರ್ತಿಯಾಗಿ ತಪಾಸಣೆ ಮಾಡಲಾಯಿತು. ಆದರೆ, ಬಾಂಬ್‌ ಇರುವ ಬಗ್ಗೆ ಯಾವುದೇ ಮಾಹಿತಿ ದೊರೆಯಲಿಲ್ಲ ಎಂದರು.

ಪದೇ ಪದೇ ಬರುತ್ತಿರುವ ಬಾಂಬ್‌ ಬೆದರಿಕೆ ಸಂದೇಶ

ಇಂದಿರಾ ಗಾಂಧಿ ವಿಮಾನ ನಿಲ್ದಾಣಕ್ಕೆ ವಿಮಾನದಲ್ಲಿ ಬಾಂಬ್‌ ಇರುವುದಾಗಿ ಬೆದರಿಕೆಯ ಸಂದೇಶ ಬರುವ ಘಟನೆಗಳು ಇತ್ತೀಚೆಗೆ ಹೆಚ್ಚಾಗಿವೆ.

ಅ.3ರಂದು ಇರಾನ್‌ನಿಂದ ಚೀನಾಕ್ಕೆ ಹೊರಟಿದ್ದ ವಿಮಾನದಲ್ಲೂ ಬಾಂಬ್‌ ಇದೆ ಎಂದು ಬೆದರಿಕೆಯ ಸಂದೇಶ ಬಂದಿತ್ತು. ಆಗ ಭಾರತೀಯ ವಾಯು ಪಡೆಯು ತುರ್ತು ಕಾರ್ಯಾಚರಣೆ ನಡೆಸಿತ್ತು. ವಿಮಾನವು ಭಾರತದಲ್ಲಿ ತುರ್ತು ಭೂರ್ಶ ಮಾಡದೆ, ಚೀನಾವನ್ನು ಸುರಕ್ಷಿತವಾಗಿ ತಲುಪಿತ್ತು.

ಸೆ.30ರಂದು ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಲೇಷ್ಯಾ ವಿಮಾನ ಹತ್ತಿದ್ದ ಇಬ್ಬರು ಪ್ರಯಾಣಿಕರು ಬ್ಯಾಗ್‌ ಇಡುವ ವಿಚಾರಕ್ಕೆ ಜಗಳ ಮಾಡಿಕೊಂಡಿದ್ದರು. ಇವರಲ್ಲಿ ಒಬ್ಬರು ‘ನನ್ನ ಬ್ಯಾಗ್‌ನಲ್ಲಿ ಬಾಂಬ್‌ ಇದೆ’ ಎಂದು ಜೋರಾಗಿ ಕೂಗಿದ್ದರು. ಇದರಿಂದ ಕೆಲ ಕಾಲ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು.

2019ರ ಆ.12ರಂದು ಇಂದಿರಾ ಗಾಂಧಿ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್‌ ಕರೆ ಬಂದಿತ್ತು. ಇದರಿಂದಾಗಿ 70 ನಿಮಿಷಗಳ ಕಾಲ ನಿಲ್ದಾಣದ ಕೆಲಸ ಕಾರ್ಯಾಗಳಿಗೆ ಅಡಚಣೆ ಉಂಟಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.