ADVERTISEMENT

ನೀರು ಮಿಶ್ರಿತ ಇಂಧನ | ಮಧ್ಯಪ್ರದೇಶದ ಸಿಎಂ ಬೆಂಗಾವಲು ಪಡೆಗೆ ಕಿರಿಕಿರಿ: FIR

ಪಿಟಿಐ
Published 28 ಜೂನ್ 2025, 14:38 IST
Last Updated 28 ಜೂನ್ 2025, 14:38 IST
   

ಭೋಪಾಲ್/ರತ್ಲಂ: ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್‌ ಯಾದವ್‌ ಅವರ ಬೆಂಗಾವಲು ಪಡೆಯ ವಾಹನಗಳು ಹಠಾತ್ತನೆ ಸ್ಥಗಿತಗೊಳ್ಳಲು, ಅದರ ಇಂಧನದಲ್ಲಿ ನೀರು ಮಿಶ್ರಣವಾಗಿದ್ದೇ ಕಾರಣ ಎಂದು ಭಾರತೀಯ ಪೆಟ್ರೋಲಿಯಂ ಕಾರ್ಪೋರೇಷನ್‌ (ಬಿಪಿಸಿಎಲ್‌) ಶನಿವಾರ ತಿಳಿಸಿದೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಪೆಟ್ರೋಲ್‌ ಪಂಪ್‌ ನಿರ್ವಹಿಸುತ್ತಿರುವವರ ವಿರುದ್ಧ ಎಫ್‌ಐಆರ್‌ ದಾಖಲಿಸಿದೆ.

‘ಈ ಭಾಗದಲ್ಲಿ ಸುರಿದ ಭಾರಿ ಮಳೆಯ ಕಾರಣ ರತ್ಲಂನ ಪೆಟ್ರೋಲ್‌ ಪಂಪ್‌ನ ಇಂಧನ ಸಂಗ್ರಹದ ಟ್ಯಾಂಕ್‌ವೊಳಗೆ ನೀರು ಸೇರ್ಪಡೆಯಾಗಿ, ಇಂಧನದ ಜತೆಗೆ ಮಿಶ್ರಣಗೊಂಡಿದೆ’ ಎಂದು ಬಿಪಿಸಿಎಲ್‌ ಪ್ರಕಟಣೆಯಲ್ಲಿ ಹೇಳಿದೆ. 

ADVERTISEMENT

ಜೂನ್‌ 26ರಂದು ಬೆಳಿಗ್ಗೆ 10 ಗಂಟೆಗೆ ಮುಖ್ಯಮಂತ್ರಿ ಅವರ ಬೆಂಗಾವಲು ಪಡೆಯ ವಾಹನಗಳಿಗೆ ರತ್ಲಂನ ಶಕ್ತಿ ಪಟ್ರೋಲ್ ಪಂಪ್‌ನಲ್ಲಿ ಡೀಸೆಲ್‌ ತುಂಬಿಸಲಾಗಿತ್ತು. ಆದರೆ, ಕೆಲ ಕ್ಷಣದಲ್ಲಿಯೇ ವಾಹನಗಳು ದಿಢೀರನೇ ಸ್ಥಗಿತಗೊಂಡವು. ವಾಹನಗಳು ಚಾಲನೆಗೊಳ್ಳದ ಕಾರಣ, ರಸ್ತೆ ಬದಿಯಲ್ಲಿ ನಿಲ್ಲಿಸಬೇಕಾಯಿತು. ಬಳಿಕ ಜಿಲ್ಲಾಡಳಿತ ಬೆಂಗಾವಲು ಪಡೆಗೆ ಪರ್ಯಾಯ ವ್ಯವಸ್ಥೆ ಮಾಡಿಕೊಟ್ಟಿತು. 

‘ಗ್ರಾಹಕರಿಗೆ ಆದ ತೊಂದರೆಗೆ ತೀವ್ರವಾಗಿ ವಿಷಾದಿಸುತ್ತೇವೆ ಮತ್ತು ಸರ್ಕಾರದ ತನಿಖೆಗೆ ಪೂರ್ಣ ಪ್ರಮಾಣದಲ್ಲಿ ಸಹಕರಿಸುತ್ತೇವೆ’ ಎಂದು ಬಿಪಿಸಿಎಲ್‌ ಪ್ರಕಟಣೆಯಲ್ಲಿ ತಿಳಿಸಿದೆ.

ಪಂಪ್‌ ಬಂದ್‌: ಲೋಪ ಎಸಗಿದ ಆರೋಪದ ಮೇಲೆ ಶಕ್ತಿ ಪಟ್ರೋಲ್ ಪಂಪ್‌ ಅನ್ನು ಜಿಲ್ಲಾಡಳಿತ ಬಂದ್‌ ಮಾಡಿಸಿದೆ. ಅಲ್ಲದೆ ಪಂಪ್‌ನಿಂದ ಸಂಗ್ರಹಿಸಿದ ಇಂಧನವನ್ನು ಹೆಚ್ಚಿನ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದೆ.

ತಪ್ಪಿತಸ್ಥ ಪಂಪ್‌ ನಿರ್ವಾಹಕರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ 1955ರ ಸೆಕ್ಷನ್‌ 377, ಮೋಟಾರ್‌ ಸ್ಪಿರಿಟ್‌ ಮತ್ತು ಡೀಸೆಲ್‌ (ಪೂರೈಕೆ ಮತ್ತು ವಿತರಣೆ ನಿಯಂತ್ರಣ ಹಾಗೂ ದೃಷ್ಕೃತ್ಯಗಳ ತಡೆಗಟ್ಟುವಿಕೆ) ಕುರಿತು ಆದೇಶ–2005ರ ನಿಬಂಧನೆಗಳ ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ. 

ಅಲ್ಲದೆ ಪೆಟ್ರೋಲ್‌ ಪಂಪ್‌ನಲ್ಲಿದ್ದ 5,995 ಲೀಟರ್‌ ಪೆಟ್ರೋಲ್‌ ಮತ್ತು 10,657 ಲೀಟರ್‌ ಡೀಸೆಲ್‌ ಅನ್ನು ಸರ್ಕಾರ ಜಪ್ತಿ ಮಾಡಿದೆ.

ಗುಣಮಟ್ಟ ಪರೀಕ್ಷೆಗೆ ಸೂಚನೆ: ರಾಜ್ಯದ ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕ ಸಂರಕ್ಷಣಾ ಸಚಿವ ಗೋವಿಂದ ಸಿಂಗ್‌ ರಜಪೂತ್‌ ಅವರು ಶನಿವಾರ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿ, ರಾಜ್ಯದ ಎಲ್ಲ ಪೆಟ್ರೋಲ್‌ ಪಂಪ್‌ಗಳಲ್ಲಿನ ಪೆಟ್ರೋಲ್‌ ಮತ್ತು ಡೀಸೆಲ್‌ನ ಗುಣಮಟ್ಟ ಪರಿಶೀಲಿಸುವಂತೆ ನಿರ್ದೇಶಿಸಿದರು. ಅಲ್ಲದೆ ಅಕ್ರಮ ಕಂಡು ಬಂದರೆ ಸಂಬಂಧಿಸಿದ ತೈಲ ಕಂಪನಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆಯೂ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.