ADVERTISEMENT

ರಾಕೇಶ್ ಅಸ್ತಾನಾ ವಿರುದ್ಧದ ಆರೋಪ ವಿಚಾರಣಾರ್ಹ: ಸಿಬಿಐ

ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಅಸ್ತಾನಾ

ಏಜೆನ್ಸೀಸ್
Published 1 ನವೆಂಬರ್ 2018, 13:03 IST
Last Updated 1 ನವೆಂಬರ್ 2018, 13:03 IST
ರಾಕೇಶ್ ಅಸ್ತಾನಾ
ರಾಕೇಶ್ ಅಸ್ತಾನಾ   

ನವದೆಹಲಿ:ಸಿಬಿಐನ ವಿಶೇಷ ನಿರ್ದೇಶಕ ರಾಕೇಶ್‌ ಅಸ್ತಾನಾ ವಿರುದ್ಧ ಲಂಚ ಪಡೆದ ಆರೋಪದಲ್ಲಿ ದಾಖಲಿಸಿರುವ ಎಫ್‌ಐಆರ್‌ ರದ್ದು ಮಾಡುವುದಕ್ಕೆ ಸಿಬಿಐ ಆಕ್ಷೇಪ ವ್ಯಕ್ತಪಡಿಸಿದೆ. ಸಿಬಿಐನ ಕೆಲವು ಅಧಿಕಾರಿಗಳ ವಿರುದ್ಧ ಕೇಳಿ ಬಂದಿರುವ ಆರೋಪಗಳು ವಿಚಾರಣೆಗೆ ಅರ್ಹ ಎಂಬಂತೆ ಕಾಣಿಸುತ್ತಿದೆ ಎಂದು ದೆಹಲಿ ಹೈಕೋರ್ಟ್‌ಗೆ ಸಿಬಿಐ ಹೇಳಿದೆ.

ಪ್ರಕರಣದ ವಿಚಾರಣೆ ಈಗ ಆರಂಭಿಕ ಹಂತದಲ್ಲಿದೆ. ಪ್ರಕರಣಕ್ಕೆ ಸಂಬಂಧಿಸಿದ ಕೆಲವು ಕಡತಗಳು ಕೇಂದ್ರ ಜಾಗೃತ ಆಯೋಗದ (ಸಿವಿಸಿ) ವಶದಲ್ಲಿ ಇರುವುದು ವಿಚಾರಣೆಗೆ ದೊಡ್ಡ ತೊಡಕಾಗಿದೆ ಎಂದು ಎಫ್‌ಐಆರ್‌ ಪ್ರಶ್ನಿಸಿ ಅಸ್ತಾನಾ ಅವರು ಸಲ್ಲಿಸಿರುವ ಅರ್ಜಿಗೆ ಸಿಬಿಐ ಪ್ರತಿಕ್ರಿಯೆ ನೀಡಿದೆ.

ಸಿಬಿಐ ನಿರ್ದೇಶಕ ಅಲೋಕ್‌ ವರ್ಮಾ ವಿರುದ್ಧದ ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ಸಿವಿಸಿಗೆ ಸುಪ್ರೀಂ ಕೋರ್ಟ್‌ ಸೂಚಿಸಿದ್ದರಿಂದ ಕಡತಗಳನ್ನು ಸಿವಿಸಿ ವಶಕ್ಕೆ ಕೊಡಲಾಗಿದೆ.

‘ಅಸ್ತಾನಾ ಅವರ ವಿರುದ್ಧದ ಆರೋಪಗಳು ವಿಚಾರಣೆಗೆ ಅರ್ಹ ಎಂಬುದು ಎಫ್‌ಐಆರ್‌ ಮತ್ತು ದೂರಿನಲ್ಲಿ ಸ್ಪಷ್ಟವಾಗಿಯೇ ಇದೆ. ಹಾಗಾಗಿಯೇ ಸಿಬಿಐ ತನಿಖೆ ಮುಂದುವರಿಸಿದೆ. ತನಿಖೆ ಈಗ ಪ್ರಾಥಮಿಕ ಹಂತದಲ್ಲಿದೆ. ಹಾಗಾಗಿ, ಅನಗತ್ಯ ಪ್ರಶ್ನೆಗಳನ್ನು ಕೇಳುವ ಮೂಲಕ ತೇಜೋವಧೆ ನಡೆಸಲಾಗುತ್ತಿದೆ ಎಂದು ಹೇಳಲಾಗದು. ಇತರ ಹಲವು ವ್ಯಕ್ತಿಗಳು ಪ್ರಕರಣದ ಭಾಗವಾಗಿರುವುದರಿಂದ ಅವರ ತನಿಖೆ ನಡೆಯುತ್ತಿದೆ’ ಎಂದು ಸಿಬಿಐ ತಿಳಿಸಿದೆ.

ಅಸ್ತಾನಾ ಅವರ ಅರ್ಜಿಗೆ ಸಂಬಂಧಿಸಿ ಮತ್ತು ಅಲ್ಲದೆ ಸಂಸ್ಥೆಯ ವಿರುದ್ಧ ಮಾಡಲಾಗಿರುವ ಎಲ್ಲ ಆರೋಪಗಳನ್ನು ಸಿಬಿಐ ಅಲ್ಲಗಳೆದಿದೆ.

ಹೊಸ ತಂಡವೊಂದು ಇತ್ತೀಚೆಗಷ್ಟೇ ತನಿಖಾ ಪ್ರಕ್ರಿಯೆ ಆರಂಭಿಸಿದೆ. ಈ ತಂಡವು ದಾಖಲೆಗಳು ಮತ್ತು ಸಾಕ್ಷ್ಯಗಳ ವಿಶ್ಲೇಷಣೆ ನಡೆಸುತ್ತಿದೆ. ಹಾಗಾಗಿ ಮುಂದಿನ ಹಂತದಲ್ಲಿ ವಿವರವಾದ ಪ್ರಮಾಣಪತ್ರ ಸಲ್ಲಿಸಲಾಗುವುದು ಎಂದು ಸಿಬಿಐ ತಿಳಿಸಿದೆ.

14ರವರೆಗೆ ಅಸ್ತಾನಾ ನಿರಾಳ

ಅಸ್ತಾನಾ ವಿರುದ್ಧದ ಕಾನೂನು ಪ್ರಕ್ರಿಯೆಗೆ ನೀಡಿದ್ದ ತಡೆಯನ್ನು ಇದೇ 14ರವರೆಗೆ ದೆಹಲಿ ಹೈಕೋರ್ಟ್‌ ವಿಸ್ತರಿಸಿದೆ.

ಅಸ್ತಾನಾ ವಿರುದ್ಧದ ತನಿಖೆಗೆ ಸಂಬಂಧಿಸಿ ಯಥಾಸ್ಥಿತಿ ಕಾಪಾಡಿಕೊಳ್ಳಬೇಕು ಎಂದು ಅಕ್ಟೋಬರ್‌ 23ರಂದು ಹೈಕೋರ್ಟ್‌ ಆದೇಶ ನೀಡಿತ್ತು. ಬಳಿಕ ಇದನ್ನು ನವೆಂಬರ್‌ 1ರವರೆಗೆ ವಿಸ್ತರಿಸಲಾಗಿತ್ತು. ಅಸ್ತಾನಾ ಅವರನ್ನು ಬಂಧಿಸುವಂತಹ ಯಾವುದೇ ಕ್ರಮಗಳಿಗೆ ಮುಂದಾಗಬಾರದು ಎಂದು ಅ. 23ರಂದೇ ಹೈಕೋರ್ಟ್‌ ಸೂಚಿಸಿತ್ತು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.