ADVERTISEMENT

MP: 90 ಡಿಗ್ರಿ ತಿರುವಿನ ಮೇಲ್ಸೇತುವೆ ನಿರ್ಮಿಸಿದ ಎಂಜಿನಿಯರ್‌ಗಳ ವಿರುದ್ಧ ಕ್ರಮ

ಪಿಟಿಐ
Published 29 ಜೂನ್ 2025, 2:04 IST
Last Updated 29 ಜೂನ್ 2025, 2:04 IST
<div class="paragraphs"><p>ಭೋಪಾಲ್‌ನ&nbsp;ಐಷ್‌ಬಾಗ್‌ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ರೈಲ್ವೆ ಮೇಲ್ಸೇತುವೆ</p></div>

ಭೋಪಾಲ್‌ನ ಐಷ್‌ಬಾಗ್‌ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ರೈಲ್ವೆ ಮೇಲ್ಸೇತುವೆ

   

ಚಿತ್ರಕೃಪೆ: X / @theskindoctor13

ಭೋಪಾಲ್‌: ನಗರದ ಐಷ್‌ಬಾಗ್‌ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಹೊಸ ರೈಲ್ವೆ ಮೇಲ್ಸೇತುವೆಯ ದೋಷಪೂರಿತ ವಿನ್ಯಾಸದ ಕಾರಣಕ್ಕೆ ಲೋಕೋಪಯೋಗಿ ಇಲಾಖೆಯ (ಪಿಡಬ್ಲ್ಯುಡಿ) ಎಂಟು ಎಂಜಿನಿಯರ್‌ಗಳ ವಿರುದ್ಧ ಮಧ್ಯಪ್ರದೇಶ ಸರ್ಕಾರ ಶನಿವಾರ ಕ್ರಮ ಕೈಗೊಂಡಿದೆ.

ADVERTISEMENT

ರೈಲ್ವೆ ಮೇಲ್ಸೇತುವೆಯನ್ನು 90 ಡಿಗ್ರಿ ತಿರುವು ಇರುವಂತೆ ನಿರ್ಮಿಸಲಾಗಿದೆ. ಇದು ಅಪಾಯಕ್ಕೆ ಎಡೆಮಾಡಿಕೊಡುತ್ತದೆ ಎಂಬ ಕಾರಣದಿಂದಾಗಿ ಸಾರ್ವಜನಿಕರಿಂದ ಭಾರಿ ಆಕ್ರೋಶ ವ್ಯಕ್ತವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿಯೂ ಟೀಕೆಗಳು ಕೇಳಿ ಬಂದಿವೆ.

ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿರುವ ಬಗ್ಗೆ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌/ಟ್ವಿಟರ್‌ನಲ್ಲಿ ಮಾಹಿತಿ ನೀಡಿರುವ ಮುಖ್ಯಮಂತ್ರಿ ಮೋಹನ್‌ ಯಾದವ್‌, 'ಐಷ್‌ಬಾಗ್‌ನಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿಯಲ್ಲಿ ಗಂಭೀರ ನಿರ್ಲಕ್ಷ್ಯ ಕಂಡುಬಂದಿದೆ. ಈ ಸಂಬಂಧ ತನಿಖೆಗೆ ಆದೇಶಿಸಿದ್ದೆ. ವರದಿಯ ಆಧಾರದಲ್ಲಿ ಲೋಕೋಪಯೋಗಿ ಇಲಾಖೆಯ ಎಂಟು ಎಂಜಿನಿಯರ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ' ಎಂದು ತಿಳಿಸಿದ್ದಾರೆ.

ಇಬ್ಬರು ಮುಖ್ಯ ಎಂಜಿನಿಯರ್‌ಗಳು ಸೇರಿದಂತೆ ಒಟ್ಟು ಏಳು ಮಂದಿಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ. ಹಾಗೆಯೇ, ನಿವೃತ್ತರಾಗಿರುವ ಸೂಪರಿಂಟೆಂಡೆಂಟ್‌ ಎಂಜಿನಿಯರ್‌ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ವಿನ್ಯಾಸ ಸಲಹೆಗಾರ ಮತ್ತು ನಿರ್ಮಾಣ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಮೇಲ್ಸೇತುವೆಯಲ್ಲಿ ಅಗತ್ಯ ಸುಧಾರಣೆ ಮಾಡುವ ಸಂಬಂಧ ಸಮಿತಿ ರಚಿಸಲಾಗಿದೆ ಎಂದಿರುವ ಅವರು, ಸುಧಾರಣೆ ನಂತರವಷ್ಟೇ ಉದ್ಘಾಟನೆ ನೆರವೇರಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಮಹಾಮಯಿ ಕಾ ಬಾಗ್‌, ಪುಷ್ಪಾ ನಗರ್ ಹಾಗೂ ನ್ಯೂ ಭೋಪಾಲ್‌ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಈ ಮೇಲ್ಸೇತುವೆಯನ್ನು ₹ 18 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.

ವಾಹನ ಸವಾರರ ಸುರಕ್ಷತೆ ದೃಷ್ಟಿಯಿಂದ ಮೇಲ್ಸೇತುವೆಯನ್ನು ಸಾಧ್ಯವಿರುವ ರೀತಿಯಲ್ಲಿ ಮಾರ್ಪಾಡು ಮಾಡುವ ಸಲುವಾಗಿ ಪಿಡಬ್ಲ್ಯುಡಿ ಈಗಾಗಲೇ ಸಮಿತಿಯನ್ನು ರಚಿಸಿದೆ.

'ಪಕ್ಕದಲ್ಲೇ ರೈಲ್ವೆ ನಿಲ್ದಾಣವಿದೆ. ಹೆಚ್ಚಿನ ಜಾಗ ಇಲ್ಲದ ಕಾರಣ ಈ ರೀತಿ ನಿರ್ಮಿಸಬೇಕಾಯಿತು' ಎಂದು ನಿರ್ಮಾಣದಲ್ಲಿ ಭಾಗಿಯಾಗಿದ್ದ ಅಧಿಕಾರಿಯೊಬ್ಬರು ಸಮರ್ಥಿಸಿಕೊಂಡಿದ್ದರು ಎಂಬುದಾಗಿ ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.