ಪಾಕ್ ವಶದಲ್ಲಿದ್ದ ಬಿಎಸ್‌ಎಫ್ ಯೋಧ ಭಾರತಕ್ಕೆ ಹಸ್ತಾಂತರ
ಅಮೃತಸರ: ಪಂಜಾಬ್ ಬಳಿ ಅಂತರಾಷ್ಟ್ರೀಯ ಗಡಿಯಲ್ಲಿ ವಶಕ್ಕೆ ಪಡೆದಿದ್ದ ಬಿಎಸ್‌ಎಫ್ ಯೋಧ ಪೂರ್ಣಂ ಕುಮಾರ್ ಸಾಹು ಅವರನ್ನು ಪಾಕಿಸ್ತಾನ 21 ದಿನಗಳ ಬಳಿಕ ಭಾರತಕ್ಕೆ ಹಸ್ತಾಂತರಿಸಿದೆ.
'ಅಮೃತಸರ ಜಿಲ್ಲೆಯಲ್ಲಿನ ಜಂಟಿ ಚೆಕ್‌ಪೋಸ್ಟ್ ಅಟ್ಟಾರಿ– ವಾಘಾದಲ್ಲಿ ಪಾಕಿಸ್ತಾನದ ರೇಂಜರ್‌ಗಳು ಪೂರ್ಣಂ ಅವರನ್ನು ಬುಧವಾರ ಬೆಳಿಗ್ಗೆ 10.30ಕ್ಕೆ ಗಡಿ ಭದ್ರತಾ ಪಡೆಗೆ(ಬಿಎಸ್‌ಎಫ್) ಹಸ್ತಾಂತರಿಸಿದರು’ ಎಂದು ಬಿಎಸ್‌ಎಫ್ ವಕ್ತಾರರು ಹೇಳಿದ್ದಾರೆ.
ಫಿರೋಜ್‌ಪುರದ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ಸಾಹು ಅವರು ಪಾಕಿಸ್ತಾನ ಗಡಿಯೊಳಗೆ ಏಪ್ರಿಲ್ 23ರಂದು ಆಕಸ್ಮಿಕವಾಗಿ ಪ್ರವೇಶಿಸಿದ್ದರು. ಆಗ ರೇಂಜರ್‌ಗಳು ಅವರನ್ನು ವಶಕ್ಕೆ ಪಡೆದಿದ್ದರು.
ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯವರಾದ ಪೂರ್ಣಂ ಅವರು ಬಿಎಸ್ಎಫ್‌ನ 24ನೇ ಬೆಟಾಲಿಯನ್‌ನಲ್ಲಿ ಕಾನ್‌ಸ್ಟೆಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
‘ಪಾಕಿಸ್ತಾನದ ರೇಂಜರ್‌ಗಳೊಂದಿಗೆ ಬಿಎಸ್‌ಎಫ್ ನಿರಂತರ ಮಾತುಕತೆ ಮತ್ತು ಸಂವಹನ ನಡೆಸಿದ ಫಲವಾಗಿ ಪೂರ್ಣಂ ಅವರ ಬಿಡುಗಡೆಯಾಗಿದೆ. ನಿಯಮಗಳಂತೆ ಶಾಂತಿಯುತವಾಗಿ ಹಸ್ತಾಂತರ ಪ್ರಕ್ರಿಯೆ ನಡೆದಿದೆ’ ಎಂದು ವಕ್ತಾರರು ತಿಳಿಸಿದ್ದಾರೆ.
ಪಾಕ್ ರೇಂಜರ್ ಬಿಡುಗಡೆ
ಲಾಹೋರ್: ಬಿಎಸ್‌ಎಫ್ ಯೋಧನನ್ನು ಬಿಡುಗಡೆಗೊಳಿಸಿದ್ದಕ್ಕೆ ಪ್ರತಿಯಾಗಿ ಭಾರತವು ಪಾಕಿಸ್ತಾನದ ರೇಂಜರ್‌ನನ್ನು ಹಸ್ತಾಂತರಿಸಿದೆ. ಭಾರತದ ಗಡಿಯೊಳಗೆ ಪ್ರವೇಶಿಸಿದ್ದ ಮುಹಮ್ಮದುಲ್ಲಾ ಅವರನ್ನು ಬಿಎಸ್‌ಎಫ್ ಬಂಧಿಸಿತ್ತು. ಬಿಎಸ್‌ಎಫ್ ಯೋಧ ಪೂರ್ಣಂ ಅವರನ್ನು ವಾಘಾ–ಅಟ್ಟಾರಿ ಗಡಿಯಲ್ಲಿ ಪಾಕಿಸ್ತಾನ ಹಸ್ತಾಂತರಿಸಿದ ಸಂದರ್ಭದಲ್ಲಿಯೇ ಮುಹಮ್ಮದುಲ್ಲಾ ಅವರನ್ನು ಬಿಎಸ್‌ಎಫ್ ಹಸ್ತಾಂತರಿಸಿತು.
‘ದೈಹಿಕವಾಗಿ ಸದೃಢವಾಗಿದ್ದಾರೆ’
ಪೂರ್ಣಂ ಅವರು ಬಿಡುಗಡೆಗೊಂಡಿರುವ ವಿಷಯ ತಿಳಿದು ಅವರ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದರು ಮತ್ತು ಕೇಂದ್ರ ಸರ್ಕಾರ ಹಾಗೂ ಬಿಎಸ್ಎಫ್‌ಗೆ ಧನ್ಯವಾದ ಸಲ್ಲಿಸಿದರು. ‘ವಿಡಿಯೊ ಕಾಲ್ ಮೂಲಕ ನನ್ನ ಪತಿಯೊಂದಿಗೆ ಮಾತನಾಡಿದ್ದೇನೆ. ಅವರು ದೈಹಿಕವಾಗಿ ಸದೃಢರಾಗಿದ್ದಾರೆ’ ಎಂದು ಪೂರ್ಣಂ ಪತ್ನಿ ರಜನಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.