ADVERTISEMENT

ನುಸುಳುಕೋರರಿಗೆ ನೆರವಾಗುವ ಮೂಲಕ ಬಂಗಾಳದಲ್ಲಿ ಅರಾಜಕತೆ ಸೃಷ್ಟಿಸುವ BSF: CM ಮಮತಾ

ಏಜೆನ್ಸೀಸ್
Published 2 ಜನವರಿ 2025, 9:21 IST
Last Updated 2 ಜನವರಿ 2025, 9:21 IST
<div class="paragraphs"><p>ಮಮತಾ ಬ್ಯಾನರ್ಜಿ</p></div>

ಮಮತಾ ಬ್ಯಾನರ್ಜಿ

   

– ಪಿಟಿಐ ಚಿತ್ರ

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಅರಾಜಕತೆ ಸೃಷ್ಟಿಸುವ ದುರುದ್ದೇಶದಿಂದ ನುಸುಳುಕೋರರಿಗೆ ರಾಜ್ಯ ಪ್ರವೇಶಿಸಲು ಗಡಿ ಭದ್ರತಾ ಪಡೆ (BSF) ನೆರವಾಗುತ್ತಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇರ ಆರೋಪ ಮಾಡಿದ್ದಾರೆ.

ADVERTISEMENT

‘ಇಸ್ಲಾಮ್‌ಪುರ, ಸಿತಾಯಿ ಹಾಗೂ ಚೋಪ್ರಾ ಪ್ರದೇಶಗಳಿಂದ ನುಸುಳುಕೋರರು ರಾಜ್ಯ ಪ್ರವೇಶಿಸುತ್ತಿದ್ದಾರೆ. ಗಡಿ ಕಾಯುವ ಹೊಣೆ ಗಡಿ ಭದ್ರತಾ ಪಡೆಯದ್ದು. ಆದರೆ ನುಸುಳುವಿಕೆ ತಡೆಯದ ಇವರ ಕ್ರಮದ ವಿರುದ್ಧ ಏಕೆ ಧನಿ ಎತ್ತುತ್ತಿಲ್ಲ’ ಎಂದು ಪ್ರಶ್ನಿಸಿದ್ದಾರೆ.

‘ನುಸುಳುಕೋರರಿಗೆ ಗಡಿಯಲ್ಲಿ ನೆರವಾಗಿ, ತೃಣಮೂಲ ಕಾಂಗ್ರೆಸ್‌ ಮೇಲೆ ಅನಗತ್ಯ ಆರೋಪ ಮಾಡಿದರೆ ಎಚ್ಚರ! ಇಂಥ ಕೆಲಸವನ್ನು ತೃಣಮೂಲ ಕಾಂಗ್ರೆಸ್ ಎಂದಿಗೂ ಮಾಡುವುದಿಲ್ಲ. ಬಿಎಸ್‌ಎಫ್‌ ಮಾಡುವ ತಪ್ಪುಗಳನ್ನು ಬೆಂಬಲಿಸುವ ಮೂಲಕ ತೃಣಮೂಲ ಪಕ್ಷವನ್ನು ಹೀಗಳಿಯಬೇಡಿ’ ಎಂದಿದ್ದಾರೆ.

‘ಗಡಿ ಕಾಯುತ್ತಿರುವುದು ಬಿಎಸ್‌ಎಫ್‌ ಹೊರತೂ ಟಿಎಂಸಿ ಪಕ್ಷವಲ್ಲ. ಅಲ್ಲಿಂದ ರೌಡಿಗಳು ರಾಜ್ಯ ಪ್ರವೇಶಿಸುತ್ತಿದ್ದಾರೆ. ಗಡಿಯುದ್ದಕ್ಕೂ ಕೊಲೆಗಳನ್ನು ಮಾಡುತ್ತಿದ್ದಾರೆ. ಇವೆಲ್ಲವೂ ಬಿಎಸ್‌ಎಫ್‌ನ ಆಂತರಿಕ ಕೆಲಸವಾಗಿದೆ. ಇದಕ್ಕೆ ಕೇಂದ್ರ ಸರ್ಕಾರದ ಕುಮ್ಮಕ್ಕೂ ಇದೆ’ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

‘ಇಷ್ಟೇ ಅಲ್ಲ, ಗಡಿಯುದ್ದಕ್ಕೂ ರಾಜ್ಯದ ಮಹಿಳೆಯರ ಮೇಲೆ ಬಿಎಸ್‌ಎಫ್‌ ದೌರ್ಜನ್ಯ ಎಸಗುತ್ತಿದೆ. ಈ ಕುರಿತು ಕೇಂದ್ರಕ್ಕೆ ನಿರಂತರವಾಗಿ ದೂರು ನೀಡಲಾಗಿದೆ. ಆದರೂ ಕ್ರಮ ಕೈಗೊಂಡಿಲ್ಲ. ರಾಜ್ಯಕ್ಕೆ ಸೌಕರ್ಯಗಳನ್ನು ನೀಡದಿದ್ದಲ್ಲಿ ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು. ಅದರ ಪ್ರತಿಯನ್ನು ಕೇಂದ್ರಕ್ಕೆ ಕಳುಹಿಸಲಾಗುವುದು’ ಎಂದು ಮಮತಾ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.