
ಅಶ್ವಿನಿ ವೈಷ್ಣವ್
ಮುಂಬೈ: ಅಹಮದಾಬಾದ್-ಮುಂಬೈ ಬುಲೆಟ್ ರೈಲು ಯೋಜನೆಯು ಮಗದೊಂದು ಮಹತ್ವದ ಪ್ರಗತಿ ಕಂಡಿದೆ.
ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ಬುಲೆಟ್ ರೈಲು ಯೋಜನೆಯ 1.5 ಕಿ.ಮೀ. ಉದ್ದದ ಕಣಿವೆ ಸುರಂಗ ಕೊರೆಯುವ ಅಂತಿಮ ಪ್ರಗತಿಯನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಇಂದು (ಶುಕ್ರವಾರ) ನವದೆಹಲಿಯ ರೈಲು ಭವನದಿಂದ ವರ್ಚುವಲ್ ಆಗಿ ವೀಕ್ಷಿಸಿದ್ದಾರೆ.
1.5 ಕಿ.ಮೀ. ಉದ್ದದ ಈ ಮಾರ್ಗವು ಪಾಲ್ಘರ್ ಜಿಲ್ಲೆಯ ಅತಿ ಉದ್ದದ ಸುರಂಗಗಳಲ್ಲಿ ಒಂದಾಗಿದೆ. ವಿರಾರ್ ಹಾಗೂ ಬೋಯ್ಸರ್ ಬುಲೆಟ್ ರೈಲು ನಿಲ್ದಾಣಗಳ ನಡುವೆ ಇದನ್ನು ಕೊರೆಯಲಾಗಿದೆ.
ಮಹಾರಾಷ್ಟ್ರದ ಎರಡನೇ ಬುಲೆಟ್ ಸುರಂಗ ಮಾರ್ಗ ಇದಾಗಿದೆ. 2025ರ ಸೆಪ್ಟೆಂಬರ್‌ನಲ್ಲಿ ಠಾಣೆ ಹಾಗೂ ಬಿಕೆಸಿ ನಡುವೆ ಮೊದಲ ಸುರಂಗ ಮಾರ್ಗ ಕೊರೆಯಲಾಗಿತ್ತು.
ಒಟ್ಟು 508 ಕಿ.ಮೀ. ಉದ್ದದ ಮುಂಬೈ-ಅಹಮದಾಬಾದ್ ನಡುವಣ ಹೈಸ್ಪೀಡ್ ರೈಲು ಯೋಜನೆ ಇದಾಗಿದೆ.
ಗಂಟೆಗೆ 320 ಕಿ.ಮೀ. ವೇಗದಲ್ಲಿ ಬುಲೆಟ್ ರೈಲು ಸಂಚರಿಸಲಿದ್ದು, 2 ಗಂಟೆ 17 ನಿಮಿಷಗಳಲ್ಲಿ ಗಮ್ಯಸ್ಥಾನವನ್ನು ತಲುಪಲಿದೆ.
ಈ ಯೋಜನೆಯನ್ನು ಜಪಾನ್ ಸರ್ಕಾರದ ತಾಂತ್ರಿಕ ಹಾಗೂ ಹಣಕಾಸಿನ ನೆರವಿನೊಂದಿಗೆ ಕಾರ್ಯಗತಗೊಳಿಸಲಾಗುತ್ತಿದೆ.
ಬುಲೆಟ್ ರೈಲು ಯೋಜನೆಯಲ್ಲಿ ಒಟ್ಟು 12 ನಿಲ್ದಾಣಗಳಿರಲಿವೆ. ಸಬರ್‌ಮತಿ ಹಾಗೂ ಮುಂಬೈ ಟರ್ಮಿನಲ್ ನಿಲ್ದಾಣವಾಗಿರಲಿದೆ ಎಂದು ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.