ಪ್ರಾತಿನಿಧಿಕ ಚಿತ್ರ
ಮುಂಬೈ: ಅಹಮದಾಬಾದ್–ಮುಂಬೈ ಬುಲೆಟ್ ರೈಲು ಯೋಜನೆಯು ಮಹತ್ವದ ಪ್ರಗತಿ ಕಂಡಿದೆ. ಶಿಲ್ಫಾಟ ಮತ್ತು ಘನ್ಸೋಲಿ ನಡುವಿನ 4.88 ಕಿಲೋ ಮೀಟರ್ ಉದ್ದದ ಸುರಂಗ ಕೊರೆಯುವ ಕಾರ್ಯ ಪೂರ್ಣಗೊಂಡಿದ್ದು, ಶನಿವಾರ ಬೆಳಗ್ಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ಸಮ್ಮುಖದಲ್ಲಿ ಕೊನೆಯ ಪದರವನ್ನು ಸ್ಫೋಟಿಸಲಾಯಿತು.
ಸಚಿವ ವೈಷ್ಣವ್ ಅವರು ಬಟನ್ ಒತ್ತುವ ಮೂಲಕ ನಿಯಂತ್ರಿತ ಡೈನಮೈಟ್ ಸ್ಫೋಟಿಸಿದರು. ಇದರೊಂದಿಗೆ ಸುರಂಗದ ಕೊನೆಯ ಪದರ ತೆರೆದುಕೊಂಡಿತು. ಸುರಂಗದಲ್ಲಿ ಇದೀಗ ಹಳಿ ಜೋಡಣೆಯ ಪ್ರಕ್ರಿಯೆ ಆರಂಭಗೊಳ್ಳಬೇಕಿದೆ. ಈ ಸುರಂಗವು 21 ಕಿ.ಮೀ ಭೂಗತ ಮಾರ್ಗದ ಭಾಗವಾಗಿದೆ.
ಪ್ರಗತಿ ಪರಿಶೀಲನೆ ನಂತರ ಮುಂಬೈ ಸಮೀಪದ ಘನ್ಸೋಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ‘ಇದೊಂದು ಐತಿಹಾಸಿಕ ಸಾಧನೆ. ಹೈಸ್ಪೀಡ್ ರೈಲ್ವೆ ಕಾರಿಡಾರ್‌ನ ಮೊದಲ ಹಂತ ಸೂರತ್–ಬಿಲಿಮೋರಾ ನಡುವಿನ ಭಾಗವು 2027ರ ಡಿಸೆಂಬರ್‌ನಲ್ಲಿ ಕಾರ್ಯಾರಂಭ ಮಾಡಲಿದೆ. ಬುಲೆಟ್ ರೈಲು ‘ಮಧ್ಯಮ ವರ್ಗದ ಸಾರಿಗೆ’ಯಾಗಲಿದೆ. ರೈಲ್ವೆ ಟಿಕೆಟ್ ದರವು ಸಾಮಾನ್ಯ ಜನರ ಕೈಗೆಟಕುವಂತಿರಲಿದೆ’ ಎಂದು ತಿಳಿಸಿದರು.
ಗೂಗಲ್ ಮ್ಯಾಪ್ ಆ್ಯಪ್ ಪ್ರಕಾರ ಮುಂಬೈ–ಅಹಮದಾಬಾದ್ ನಡುವಿನ ಸಂಚಾರ ಅವಧಿ 9 ಗಂಟೆಯಷ್ಟಿದೆ. ಬುಲೆಟ್ ರೈಲು ಆರಂಭಗೊಂಡರೆ ಜನರು 2 ಗಂಟೆ 7 ನಿಮಿಷಗಳಲ್ಲೇ ಈ ದೂರ ತಲುಪಲಿದ್ದಾರೆ ಎಂದು ಅವರು ಹೇಳಿದರು.
ಠಾಣೆಯ ನಡುವಿನ ಮಾರ್ಗ 2028ರಲ್ಲಿ ಮತ್ತು ಬಾಂದ್ರಾ ಕುರ್ಲಾ ರೈಲು ಮಾರ್ಗ 2029ಕ್ಕೆ ಪೂರ್ಣಗೊಂಡು ಕಾರ್ಯಾಚರಿಸಲಿವೆ ಎಂದರು.
ಬೆಳಗ್ಗೆ ಮತ್ತು ಸಂಜೆಯ ಜನದಟ್ಟಣೆ ಸಮಯದಲ್ಲಿ ಅರ್ಧ ಗಂಟೆಗೆ ಒಂದು ರೈಲು ಸಂಚರಿಸಲಿದೆ. ಆನಂತರ 10 ನಿಮಿಷಕ್ಕೊಂದು ರೈಲು ಓಡಿಸಲಾಗುವುದು. ಮುಂಬೈ–ಅಹಮದಾಬಾದ್ ನಡುವೆ ಸಂಚರಿಸುವ ಜನರು ಮುಂಗಡವಾಗಿ ಟಿಕೆಟ್ ಕಾಯ್ದಿರಿಸುವ ಅಗತ್ಯವಿಲ್ಲ. ನೇರವಾಗಿ ನಿಲ್ದಾಣಕ್ಕೆ ಬಂದು ಸಂಚರಿಸಬಹುದು ಎಂದು ತಿಳಿಸಿದರು.
ಪ್ರಮುಖ ಅಂಶಗಳು:
ರಾಷ್ಟ್ರೀಯ ಹೈಸ್ಪೀಡ್ ರೈಲು ನಿಗಮದಿಂದ ನಿರ್ಮಾಣ
ಆಸ್ಟ್ರಿಯಾದ ಹೊಸ ಟನಲ್ ಮೆಥೆಡ್ ಬಳಕೆ
2024ರ ಮೇನಲ್ಲಿ ಸುರಂಗ ಕೊರೆಯುವ ಕಾರ್ಯ ಆರಂಭ
12.6 ಮೀಟರ್ ಅಗಲದ ಸುರಂಗದಲ್ಲಿ ಜೋಡಿ ಹಳಿ ನಿರ್ಮಾಣ
ಹಳಿಗಳ ಅಳವಡಿಕೆ, ಸಲಕರಣೆ ಜೋಡಣೆ ಕಾರ್ಯ ಬಾಕಿ ಇದೆ
16 ಕಿ.ಮೀ. ಸುರಂಗ ಮಾರ್ಗ ನಿರ್ಮಾಣ ಮಾಡಬೇಕಿದೆ
ಬಾಂದ್ರಾ–ಕುರ್ಲಾ ನಡುವಿನ ಮಾರ್ಗದಲ್ಲಿ ನಿರ್ಮಾಣ
ವಯಾಡಕ್ಟ್ (ಎತ್ತರಿಸಿದ ಮೇಲು ಸೇತುವೆ) ಭಾಗಕ್ಕೆ ಸಂಪರ್ಕ
ಒಟ್ಟು 508 ಕಿ.ಮೀ. ಉದ್ದದ ಬುಲೆಟ್ ರೈಲು ಮಾರ್ಗ
398 ಕಿ.ಮೀ. ಎತ್ತರಿಸಿದ ಮೇಲುಸೇತುವೆಯ 321 ಕಿ.ಮೀ. ಪೂರ್ಣ
ನದಿಗಳ ಮೇಲೆ 17 ಸೇತುವೆ, 9 ಉಕ್ಕಿನ ಸೇತುವೆಗಳ ನಿರ್ಮಾಣ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.