ADVERTISEMENT

ಪತ್ರಕರ್ತೆ ಬರ್ಖಾದತ್‍ಗೆ ವಾಟ್ಸ್ಆ್ಯಪ್‍ನಲ್ಲಿ ಅಶ್ಲೀಲ ಸಂದೇಶ, ಬೆದರಿಕೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2019, 11:50 IST
Last Updated 18 ಫೆಬ್ರುವರಿ 2019, 11:50 IST
   

ನವದೆಹಲಿ: ಪುಲ್ವಾಮ ಆತ್ಮಾಹುತಿ ದಾಳಿ ನಂತರ ಸಂಕಷ್ಟಕ್ಕೀಡಾಗಿರುವ ಕಾಶ್ಮೀರಿಗಳಿಗೆ ಸುರಕ್ಷಿತ ಸ್ಥಳ ಒದಗಿಸುವುದಾಗಿ ಟ್ವೀಟಿಸಿದ್ದ ಪತ್ರಕರ್ತೆ ಬರ್ಖಾ ದತ್ ಅವರಿಗೆಅಶ್ಲೀಲ ಸಂದೇಶ, ಬೆದರಿಕೆಗಳು ಬರುತ್ತಿವೆ.

ಕಾಶ್ಮೀರಿಗಳಿಗೆ ಸಹಾಯ ಹಸ್ತ ನೀಡುವುದಾಗಿ ಹೇಳಿದ ಟ್ವೀಟ್‍ನಲ್ಲಿ ಬರ್ಖಾ ತಮ್ಮ ವಾಟ್ಸ್ಆ್ಯಪ್ ಸಂಖ್ಯೆ ನೀಡಿದ್ದರು.ಈ ವಾಟ್ಸ್ಆ್ಯಪ್ ಸಂಖ್ಯೆಗೆ ದುಷ್ಕರ್ಮಿಗಳು ಅಶ್ಲೀಲ ಸಂದೇಶ ಕಳುಹಿಸಿ, ಕರೆ ಮಾಡಿ ತೊಂದರೆ ನೀಡುತ್ತಿದ್ದಾರೆ ಎಂದು ಬರ್ಖಾ ಹೇಳಿದ್ದಾರೆ.

ತನ್ನ ವಾಟ್ಸ್ಆ್ಯಪ್ ಸಂಖ್ಯೆಗೆ ಗುಪ್ತಾಂಗದ ಫೋಟೊ ಕಳಿಸಿ, ಫೋನ್ ಕರೆ ಮಾಡಿ ತೊಂದರೆ ನೀಡುತ್ತಿರುವ ಕಿಡಿಗೇಡಿಗಳ ಫೋನ್ ಸಂಖ್ಯೆ ಮತ್ತು ಲಭಿಸಿದ ಸಂದೇಶದ ಸ್ಕ್ರೀನ್‍ಶಾಟ್‍ನ್ನು ಬರ್ಖಾ ಟ್ವೀಟ್ ಮಾಡಿ ದೆಹಲಿ ಪೊಲೀಸರ ಗಮನಕ್ಕೆ ತಂದಿದ್ದಾರೆ.

ADVERTISEMENT

ಬರ್ಖಾ ಅವರ ಟ್ವೀಟ್ ಗಮನಿಸಿದ ದೆಹಲಿ ಪೊಲೀಸ್ ಉಪ ಆಯುಕ್ತ ಮಧುರ್ ವರ್ಮಾ ಈ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.

ಸಹಾಯಕ್ಕೆ ಧಾವಿಸಿದ ವಾಟ್ಸ್ಆ್ಯಪ್ ಸಂಸ್ಥೆ
ನಿನ್ನೆಯಿಂದ ತನಗೆ ಈ ರೀತಿಅಶ್ಲೀಲ ಸಂದೇಶ, ಕರೆಗಳು ಬರುತ್ತಿವೆ ಎಂದು ಟ್ವೀಟಿಸಿದ್ದ ಬರ್ಖಾ ಟ್ವೀಟ್‌ಗೆ ವಾಟ್ಸ್ಆ್ಯಪ್ ಸಂಸ್ಥೆಯ ಕಾರ್ಲ್ ವೂಗ್ ಪ್ರತಿಕ್ರಿಯಿಸಿ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ.

ಅಭಿಸರ್ ಶರ್ಮಾಗೆ ಅತ್ಯಾಚಾರ ಬೆದರಿಕೆ


ಎಬಿಪಿ ನ್ಯೂಸ್ ಮಾಜಿ ಪತ್ರಕರ್ತ, ಪ್ರಸುತ ನ್ಯೂಸ್ ಕ್ಲಿಕ್ ಡಾಟ್ ಇನ್‍ನಲ್ಲಿ ಕಾರ್ಯವೆಸಗುತ್ತಿರುವ ಅಭಿಸರ್ ಶರ್ಮಾ ಅವರು ಕೂಡಾ ತಮಗೆ ಬಂದಿರುವ ಬೆದರಿಕೆ ಸಂದೇಶಗಳನ್ನು ಟ್ವೀಟಿಸಿದ್ದಾರೆ.ವಾಟ್ಸ್ಆ್ಯಪ್ ಸಂದೇಶವೊಂದರಲ್ಲಿ ಅತ್ಯಾಚಾರ ಬೆದರಿಕೆಯೊಡ್ಡಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಶರ್ಮಾ ದೆಹಲಿ ಪೊಲೀಸರಿಗೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.