ಕೋಲ್ಕತ್ತ: ಕಾನೂನು ಸಂಘರ್ಷ ಪೂರ್ಣಗೊಳ್ಳುವವರೆಗೆ ಪತ್ನಿ ಹಸೀನ್ ಜಹಾನ್ ಹಾಗೂ ಮಗಳ ಜೀವನ ನಿರ್ವಹಣೆಗೆ ಪ್ರತಿ ತಿಂಗಳು ₹ 4 ಲಕ್ಷ ಪಾವತಿಸುವಂತೆ ಕ್ರಿಕೆಟಿಗ ಮೊಹಮ್ಮದ್ ಶಮಿ ಅವರಿಗೆ ಕಲ್ಕತ್ತ ಹೈಕೋರ್ಟ್ ಆದೇಶಿಸಿದೆ.
ಪತ್ನಿಗೆ ₹ 50,000 ಹಾಗೂ ಮಗಳಿಗೆ ₹ 80,000 ನೀಡಬೇಕು ಎಂದು ಶಮಿ ಅವರಿಗೆ ಜಿಲ್ಲಾ ಸೆಷನ್ಸ್ ನ್ಯಾಯಾಲಯವು 2023ರಲ್ಲಿ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಜಹಾನ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಕೆ. ಮುಕರ್ಜಿ, 'ನನ್ನ ಅಭಿಪ್ರಾಯದಲ್ಲಿ, ಅರ್ಜಿದಾರರಿಬ್ಬರ ಆರ್ಥಿಕ ಸ್ಥಿರತೆಯನ್ನು ಖಾತ್ರಿಪಡಿಸಿಕೊಳ್ಳುವ ಸಲುವಾಗಿ, ಪ್ರಕರಣ ಇತ್ಯರ್ಥವಾಗುವವರೆಗೆ ಹಸೀನ್ ಜಹಾನ್ ಅವರಿಗೆ ಮಾಸಿಕ ₹ 1.50 ಲಕ್ಷ ಹಾಗೂ ಪುತ್ರಿಗೆ ₹ 2.50 ಲಕ್ಷ ನೀಡುವುದು ನ್ಯಾಯಯುತ ಮತ್ತು ಸಮಂಜಸವಾಗಿದೆ' ಎಂದು ಹೇಳಿದ್ದಾರೆ.
'ಆದಾಗ್ಯೂ, ತಂದೆಯು ತಮ್ಮ ಮಗಳ ಶಿಕ್ಷಣ ಅಥವಾ ಇತರೆ ಅಗತ್ಯಗಳನ್ನು ಪೂರೈಸಲು ಮೇಲೆ ಹೇಳಿದ್ದಕ್ಕಿಂತಲೂ ಹೆಚ್ಚು ಮೊತ್ತವನ್ನು ಸ್ವಯಂಪ್ರೇರಣೆಯಿಂದ ಭರಿಸಲು ಸ್ವತಂತ್ರರು' ಎಂದೂ ಉಲ್ಲೇಖಿಸಿದ್ದಾರೆ.
ಶಮಿ ಅವರನ್ನು 2014ರ ಏಪ್ರಿಲ್‌ನಲ್ಲಿ ವಿವಾಹವಾಗಿದ್ದ ಜಹಾನ್, ಅವರ (ಪತಿ) ವಿರುದ್ಧ 2018ರಲ್ಲಿ ಪೊಲೀಸರಿಗೆ ದೂರು ನೀಡಿದ್ದರು.
ಶಮಿ ಹಾಗೂ ಅವರ ಕುಟುಂಬದವರು ತಮಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಹಾಗೆಯೇ, ತಮ್ಮ ಮಗಳ ಕಾಳಜಿ ವಹಿಸುತ್ತಿಲ್ಲ ಎಂದು ಆರೋಪಿಸಿ 'ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯ ರಕ್ಷಣೆ (PWDV) ಕಾಯ್ದೆ–2005'ರ ಸೆಕ್ಷನ್ 12ರ ಅಡಿಯಲ್ಲಿ ಜಾದವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಕೌಟುಂಬಿಕ ದೌರ್ಜನ್ಯ ಮಾತ್ರವಲ್ಲದೆ, ಜಹಾನ್ ಅವರು ವರದಕ್ಷಿಣೆ ಕಿರುಕುಳ, ಮ್ಯಾಚ್ ಫಿಕ್ಸಿಂಗ್ ಆರೋಪಗಳನ್ನೂ ಶಮಿ ವಿರುದ್ಧ ಮಾಡಿದ್ದರು.
ತಮಗೆ ಮಧ್ಯಂತರ ಆರ್ಥಿಕ ಪರಿಹಾರವಾಗಿ ಮಾಸಿಕ ₹ 7 ಲಕ್ಷ ಮತ್ತು ಮಗಳಿಗೆ ₹ 3 ಲಕ್ಷ ನೀಡುವಂತೆ ಶಮಿ ಅವರಿಗೆ ಆದೇಶಿಸಬೇಕು ಎಂದು ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದರು. ಆದರೆ, ಅವರ ಮನವಿಯನ್ನು ತಿರಸ್ಕರಿಸಿದ್ದ ನ್ಯಾಯಾಲಯ, ಮಗಳಿಗೆ ₹ 80,000 ಪಾವತಿಸುವಂತೆ ಶಮಿಗೆ ನಿರ್ದೇಶಿಸಿ, ಅರ್ಜಿಯನ್ನು ವಿಲೇವಾರಿ ಮಾಡಿತ್ತು. ನಂತರ, ಪತ್ನಿಗೂ ₹ 50,000 ನೀಡುವಂತೆ ಆದೇಶದಲ್ಲಿ ಮಾರ್ಪಾಡು ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.