ADVERTISEMENT

ಪೈಲಟ್ ಸಾಠೆ‌ ಕುರಿತು ಫೇಸ್‌ಬುಕ್‌ನಲ್ಲಿ ಕುತೂಹಲಕಾರಿ ಅಂಶ ಹಂಚಿಕೊಂಡ ಸೋದರ ಸಂಬಂಧಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಆಗಸ್ಟ್ 2020, 16:03 IST
Last Updated 8 ಆಗಸ್ಟ್ 2020, 16:03 IST
   

ಮುಂಬೈ: ಕೋಯಿಕ್ಕೋಡ್‌ನಲ್ಲಿ ಶುಕ್ರವಾರ ಸಂಭವಿಸಿದ ವಿಮಾನ ಅಪಘಾತದಲ್ಲಿ ಸಾವಿಗೀಡಾದಪೈಲಟ್‌ ಕ್ಯಾಪ್ಟನ್ ದೀಪಕ್ ಸಾಠೆ ಅಪಘಾತಕ್ಕಿಂತಲೂ ಮೊದಲು ವಿಮಾನ ನಿಲ್ದಾಣದ ಮೇಲೆ ಆಗಸದಲ್ಲಿಯೇ ಮೂರು ಸುತ್ತು ಹಾಕಿ, ವಿಮಾನದಲ್ಲಿದ್ದ ಎಲ್ಲ ಇಂಧನವನ್ನೂ ಖಾಲಿ ಮಾಡಿದ್ದರು!

‘ಹಾಗಾಗಿ ಅಪಘಾತಕ್ಕೀಡಾದ ನಂತರವೂ ವಿಮಾನಹೋಳಾದರೂ ಬೆಂಕಿ ಹೊತ್ತಿಕೊಳ್ಳಲಿಲ್ಲ ಮತ್ತು ಸ್ಫೋಟಗೊಳ್ಳಲಿಲ್ಲ. ಇದರಿಂದ ನೂರಾರು ಜೀವಗಳು ಉಳಿದವು. ಒಂದು ವೇಳೆ ಇಂಧನ ಖಾಲಿ ಮಾಡದಿದ್ದರೆ, ವಿಮಾನ ಹೊತ್ತಿ ಉರಿಯುತ್ತಿತ್ತು. ಅದರಲ್ಲಿದ್ದ ಯಾರೂ ಬದುಕುಳಿಯುತ್ತಿರಲಿಲ್ಲ’ ಎಂಬ ಸಂಗತಿಯನ್ನು ದೀಪಕ್‌ ಸಹೋದರ ಸಂಬಂಧಿ ನೀಲೇಶ್‌ ಸಾಠೆ ಅವರು ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.

‘ನನಗೆ ದೊರೆತಿರುವ ಮಾಹಿತಿಯಂತೆ ವಿಮಾನದ ಲ್ಯಾಂಡಿಂಗ್‌ ಗೇರ್‌ಗಳು ಕೆಲಸ ಮಾಡುತ್ತಿರಲಿಲ್ಲ. ಧಾರಾಕಾರ ಮಳೆಯಿಂದ ರನ್ ವೇ ಕೂಡ ಸ್ಪಷ್ಟವಾಗಿ ಗೋಚರಿಸುತ್ತಿರಲಿಲ್ಲ. ವಿಮಾನಕ್ಕೆ ಬೆಂಕಿ ಹೊತ್ತಿಕೊಳ್ಳುವುದನ್ನು ತಪ್ಪಿಸಲು ದೀಪಕ್, ವಿಮಾನ ನಿಲ್ದಾಣದ ಮೇಲೆ‌ ಆಗಸದಲ್ಲಿಯೇ ಮೂರು ಸುತ್ತು ಹೊಡೆದರು. ನೆಲಕ್ಕೆ ಅಪ್ಪಳಿಸುವ ಮೊದಲು ಎಂಜಿನ್‌ ಬಂದ್‌ ಮಾಡಿದ್ದರು. ವಿಮಾನ ನೆಲಕ್ಕೆ ಅಪ್ಪಳಿಸಿದರೂ ಸ್ಫೋಟಿಸಲಿಲ್ಲ. ಅದರಿಂದ 180 ಜನರ ಜೀವ ಉಳಿಸಿ ತಾವು ಹುತಾತ್ಮರಾದರು’ ಎಂದು ನೀಲೇಶ್‌ ಕಂಬನಿ ಮಿಡಿದಿದ್ದಾರೆ.

ADVERTISEMENT

ಇದರೊಂದಿಗೆ ದೀಪಕ್ ಸಾಠೆ ಅವರ ಜೀವನಗಾಥೆಯನ್ನು ನೀಲೇಶ್‌ ವಿವರವಾಗಿ ಬರೆದುಕೊಂಡಿದ್ದಾರೆ. ಈ ಪತ್ರ ಶನಿವಾರ ವೈರಲ್‌ ಆಗಿದೆ.

1990ರಲ್ಲಿಭಾರತೀಯ ವಾಯುಪಡೆಯಲ್ಲಿ ವಿಂಗ್‌ ಕಮಾಂಡರ್ ಆಗಿ ಕಾರ್ಯನಿರ್ವಹಿಸುವಾಗ ಸಂಭವಿಸಿದ ವಿಮಾನ ಅಪಘಾತದಲ್ಲಿದೀಪಕ್ ಸಾಠೆಕೂದಲೆಳೆಯ ಅಂತರದಲ್ಲಿ ಪಾರಾಗಿದ್ದರು. ಅಂದು ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅವರ ಮೆದುಳಿಗೆ ಬಲವಾದ ಪೆಟ್ಟು ಬಿದ್ದಿತ್ತು. ಸುಮಾರು 6 ತಿಂಗಳ ಚಿಕಿತ್ಸೆ ನಂತರ ಗುಣಮುಖರಾಗಿ ಬಂದಿದ್ದರು. ಆದರೆ, ಈ ಬಾರಿ ಅದೃಷ್ಟ ಅವರ ಕೈ ಹಿಡಯಲಿಲ್ಲ ಎಂದು ವಿಷಾದಿಸಿದ್ದಾರೆ.

ದೀಪಕ್‌ ಸಾಠೆ ಅವರ ಇಡೀ ಕುಟುಂಬವೇ ಸೇನೆಯಲ್ಲಿದೆ. ಅವರ ಅಪ್ಪವಸಂತ್ ಸಾಠೆ ಸೇನೆಯಲ್ಲಿ ಬ್ರಿಗೇಡಿಯರ್ ಹುದ್ದೆಯಲ್ಲಿದ್ದವರು. ಸಹೋದರ ಕ್ಯಾಪ್ಟನ್ ವಿಕಾಸ್ ಕೂಡ ಭೂಸೇನೆಯಲ್ಲಿದ್ದಾರೆ. ಅವರ ಇಬ್ಬರು ಪುತ್ರರು ಬಾಂಬೆ ಐಐಟಿಯಲ್ಲಿ ಪದವಿ ಮುಗಿಸಿದ್ದಾರೆ. ಸಾಠೆ ಕುಟುಂಬ 15 ವರ್ಷಗಳಿಂದ ಮುಂಬೈನಲ್ಲಿ ವಾಸಿಸುತ್ತಿದೆ.

ದೀಪಕ್‌ ವಿಮಾನ ಚಾಲನೆಯಲ್ಲಿ 36 ವರ್ಷಗಳ ಅನುಭವ ಹೊಂದಿದ್ದವರು. ನ್ಯಾಷನಲ್ ಡಿಫೆನ್ಸ್‌ ಅಕಾಡೆಮಿ ಕೋರ್ಸ್‌ನಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದರು.‘ಸ್ವೋರ್ಡ್ ಆಫ್ ಆನರ್‌‘ ಪ್ರಶಸ್ತಿ ಪುರಸ್ಕೃತರು. 21 ವರ್ಷಗಳ ಕಾಲ ಭಾರತೀಯ ವಾಯುಪಡೆಯಲ್ಲಿ ಸೇವೆ ಸಲ್ಲಿಸಿದ ನಂತರ 2005ರಲ್ಲಿ ಏರ್ ‌ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನಯಾನ ಸಂಸ್ಥೆಯಲ್ಲಿಪೈಲಟ್‌ ಕೆಲಸಕ್ಕೆ ಸೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.