ADVERTISEMENT

ತೆಲಂಗಾಣ: ಅಸ್ಸಾಂ ಸಿಎಂ ಮೈಕ್ ಕಿತ್ತೆಸೆದ ಟಿಆರ್‌ಎಸ್ ನಾಯಕನ ವಿರುದ್ಧ ದೂರು ದಾಖಲು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಸೆಪ್ಟೆಂಬರ್ 2022, 2:02 IST
Last Updated 11 ಸೆಪ್ಟೆಂಬರ್ 2022, 2:02 IST
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಭಾಷಣಕ್ಕೆ ಅಡ್ಡಿಪಡಿಸಿದ ಸಂದರ್ಭ (ಎಎನ್‌ಐ ಟ್ವಿಟರ್ ಚಿತ್ರ)
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಭಾಷಣಕ್ಕೆ ಅಡ್ಡಿಪಡಿಸಿದ ಸಂದರ್ಭ (ಎಎನ್‌ಐ ಟ್ವಿಟರ್ ಚಿತ್ರ)   

ಹೈದರಾಬಾದ್: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ವೇದಿಕೆ ಮೇಲೆ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಮೈಕ್‌ ಕಿತ್ತೆಸೆದು, ಭಾಷಣಕ್ಕೆ ಅಡ್ಡಿಪಡಿಸಿದ ಆರೋಪ ಮೇಲೆ ತೆಲಂಗಾಣ ರಾಷ್ಟ್ರ ಸಮಿತಿಯ (ಟಿಆರ್‌ಎಸ್‌) ನಾಯಕ ನಂದ ಕಿಶೋರ್‌ ವಿರುದ್ಧ ಪ್ರಕರಣ ದಾಖಲಾಗಿದೆ.

ಅಸ್ಸಾಂ ಮುಖ್ಯಮಂತ್ರಿಯನ್ನು ಎದುರಿಸಲು ಯತ್ನಿಸಿದ್ದಕ್ಕಾಗಿ ಕಿಶೋರ್‌ ವಿರುದ್ಧ ಐಪಿಸಿ ಸೆಕ್ಷನ್ 354, 341 ಮತ್ತು 506ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೈದರಾಬಾದ್‌ನ ಅಬಿಡ್ಸ್ ರಸ್ತೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಪ್ರಸಾದ್ ರಾವ್ ತಿಳಿಸಿದ್ದಾರೆ.

ಹೈದರಾಬಾದ್‌ನಲ್ಲಿ ಶುಕ್ರವಾರ ಭಾಗ್ಯನಗರ ಗಣೇಶ ಉತ್ಸವ ಸಮಿತಿ (ಬಿಜಿಯುಎಸ್) ಆಯೋಜಿಸಿದ್ದ ಗಣೇಶ ಮೆರವಣಿಗೆಯಲ್ಲಿ ಹಿಮಂತ ಬಿಸ್ವಾ ಶರ್ಮಾ ಭಾಗವಹಿಸಿದ್ದರು.

ADVERTISEMENT

ರ್‍ಯಾಲಿಯಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಶರ್ಮಾ ಮಾತನಾಡುತ್ತಿದ್ದ ಸಂದರ್ಭದಲ್ಲಿ ಟಿಆರ್‌ಎಸ್‌ ನಾಯಕ ನಂದ ಕಿಶೋರ್‌, ವೇದಿಕೆಯ ಮೇಲೆ ಹೋಗಿ ಮೈಕ್ ಅನ್ನು ಕಿತ್ತೆಸೆದಿದ್ದರು. ಘಟನೆಯಿಂದಾಗಿ ಕೆಲಕಾಲ ಉದ್ವಿಗ್ನತೆ ಉಂಟಾಗಿತ್ತು.

ಹಿಮಂತ ಬಿಸ್ವಾ ತಮ್ಮ ಭಾಷಣದಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರನ್ನು ಟೀಕಿಸಿದ್ದರು. ತೆಲಂಗಾಣದಲ್ಲಿ ಒಂದು ಕುಟುಂಬ (ಕೆಸಿಆರ್) ಮಾತ್ರ ಸಂತೋಷವಾಗಿದೆ ಎಂದು ಆರೋಪಿಸಿದ್ದರು.

ತೆಲಂಗಾಣ ಸರ್ಕಾರದ ವಿರುದ್ಧ ಶರ್ಮಾ ಅವರು ನೀಡಿದ ಹೇಳಿಕೆಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದ ನಂದ ಕಿಶೋರ್‌, ವೇದಿಕೆ ಮೇಲೆ ಬಂದು ಕೆಸಿಆರ್ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದರೆ ಸಹಿಸುವುದಿಲ್ಲ ಎಂದು ಕೂಗಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.