ನವದೆಹಲಿ: ‘ಕೇಂದ್ರ ಸರ್ಕಾರ ಕೈಗೊಳ್ಳಲಿರುವ ಜನಗಣತಿಯಲ್ಲಿ ಜಾತಿ ಗಣತಿಯನ್ನೂ ಒಳಗೊಳ್ಳುವ ನಿರ್ಧಾರವು ಕಾಂಗ್ರೆಸ್‌ನ ಬಹುದಿನಗಳ ಬೇಡಿಕೆಯಾಗಿತ್ತು. ಇಂಥ ಪ್ರಮುಖ ಬೇಡಿಕೆಯನ್ನು ಕೈಬಿಡುವುದಕ್ಕಿಂತ, ತಡವಾದರೂ ಕೈಗೊಳ್ಳುವುದೇ ಲೇಸು’ ಎಂದು ಕಾಂಗ್ರೆಸ್ ಬುಧವಾರ ಹೇಳಿದೆ.
ಸರ್ಕಾರದ ನಿರ್ಧಾರಕ್ಕೆ ಪ್ರತಿಕ್ರಿಯೆ ನೀಡಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ‘ಸಾಮಾಜಿಕ ನ್ಯಾಯದಡಿ ಜಾತಿ ಗಣತಿ ನಡೆಸಬೇಕು ಎಂಬ ಒತ್ತಾಯವನ್ನು ಪಕ್ಷ ಮಾಡುತ್ತಲೇ ಬಂದಿದೆ. ಏ. 9ರಂದು ಅಹಮದಾಬಾದ್‌ನಲ್ಲಿ ಪಕ್ಷ ಕೈಗೊಂಡ ಸಮಾವೇಶದಲ್ಲೂ ಈ ಕುರಿತು ಹಕ್ಕೊತ್ತಾಯ ಮಂಡಿಸಲಾಗಿತ್ತು’ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ರಾಜಕೀಯ ವ್ಯವಹಾರಗಳ ಸಮಿತಿ ಸಭೆಯಲ್ಲಿ ಜನಗಣತಿಯೊಂದಿಗೆ ಜಾತಿ ಗಣತಿ ನಡೆಸುವ ನಿರ್ಧಾರವನ್ನು ಸರ್ಕಾರ ಪ್ರಕಟಿಸಿತು. ‘ಕೈಗೊಳ್ಳಲಿರುವ ಜನಗಣತಿಯಲ್ಲಿ ಜಾತಿ ಗಣತಿ ಮಾಹಿತಿಯನ್ನೂ ಪಾರದರ್ಶಕವಾಗಿ ಸಂಗ್ರಹಿಸಲಾಗುವುದು. ಆದರೆ ಜಾತಿ ಗಣತಿ ವಿಷಯವನ್ನು ವಿರೋಧ ಪಕ್ಷಗಳು ತಮ್ಮ ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದೆ’ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಆರೋಪಿಸಿದ್ದರು.
ದೇಶವ್ಯಾಪಿ ಜಾತಿ ಗಣತಿ ನಡೆಸಬೇಕು ಎಂದು ಕಾಂಗ್ರೆಸ್ ಬೇಡಿಕೆ ಇಟ್ಟಿತ್ತು. ಬಿಹಾರ, ತೆಲಂಗಾಣ ಮತ್ತು ಕರ್ನಾಟಕದ ಚುನಾವಣೆಯಲ್ಲೂ ಈ ವಿಷಯವನ್ನು ಪ್ರಸ್ತಾಪಿಸಿತ್ತು.
ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಈ ವಿಷಯ ಹಂಚಿಕೊಂಡಿರುವ ಜೈರಾಮ್ ರಮೇಶ್, ‘2023ರ ಏ. 16ರಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿಗೆ ಬರೆದ ಪತ್ರವನ್ನು ಹಂಚಿಕೊಂಡಿದ್ದಾರೆ. ವಿಳಂಬವಾಗಿರುವ ಜನಗಣತಿಯನ್ನು ಶೀಘ್ರದಲ್ಲಿ ನಡೆಸುವಂತೆ ಹಾಗೂ ಅದರೊಳಗೆ ಜಾತಿ ಗಣತಿಯನ್ನು ಅಳವಡಿಸಬೇಕು’ ಎಂದು ಆಗ್ರಹಿಸಿದ್ದರು.
‘2006ರ ಜ. 20ರಂದು ಕಾಂಗ್ರೆಸ್ ಸರ್ಕಾರವು ಆರ್ಟಿಕಲ್ 15 (5) ಅಡಿಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ಜಾತಿಯ ಅಭ್ಯರ್ಥಿಗಳಿಗೆ ತಡಮಾಡದೆ ಮೀಸಲಾತಿ ನೀಡಬೇಕು. ಸಾಂವಿಧಾನಿಕವಾಗಿ ಖಾತ್ರಿಪಡಿಸಲಾದ ಸಾಮಾಜಿಕ ನ್ಯಾಯವನ್ನು ರಾಷ್ಟ್ರವ್ಯಾಪಿ ಜಾತಿ ಗಣತಿ ಮೂಲಕವೇ ಬಲಪಡಿಸಲು ಸಾಧ್ಯ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.