ADVERTISEMENT

ಕಾವೇರಿ ವಿವಾದ: ಡಿಎಂಕೆ ವಿರುದ್ಧ ಪಳನಿಸ್ವಾಮಿ ವಾಗ್ದಾಳಿ

ಪಿಟಿಐ
Published 1 ಅಕ್ಟೋಬರ್ 2023, 13:52 IST
Last Updated 1 ಅಕ್ಟೋಬರ್ 2023, 13:52 IST
ಎಡಪ್ಪಾಡಿ ಪಳನಿಸ್ವಾಮಿ
ಎಡಪ್ಪಾಡಿ ಪಳನಿಸ್ವಾಮಿ   

ಚೆನ್ನೈ: ಕಾವೇರಿ ನದಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಆಡಳಿತರೂಢ ಡಿಎಂಕೆ ವಿರುದ್ಧ ವಾಗ್ದಾಳಿ ನಡೆಸಿರುವ ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಕೆ. ಪಳನಿಸ್ವಾಮಿ, ‘ಈ ವಿಚಾರದಲ್ಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರಿಗೆ ರಾಜ್ಯದ ಜನರ ಬಗ್ಗೆ ಕಾಳಜಿ ಇದೆಯೇ’ ಎಂದು ಪ್ರಶ್ನಿಸಿದ್ದಾರೆ. 

‘ಅಲ್ಲಿ(ಕರ್ನಾಟಕದಲ್ಲಿ) ತನ್ನ ಕುಟುಂಬ ಸದಸ್ಯರು ನಡೆಸುತ್ತಿರುವ ಉದ್ಯಮಗಳಿಗೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳಲು ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರ್ಕಾರವನ್ನು ಡಿಎಂಕೆ ಬೆಂಬಲಿಸುತ್ತಿದೆ’ ಎಂದು ಅವರು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಆರೋಪಿಸಿದ್ದಾರೆ. 

ರಾಜ್ಯ ಸರ್ಕಾರದ ಭರವಸೆಯಿಂದಾಗಿ ಕಾವೇರಿ ನದಿ ಮುಖಜ ಭೂಮಿ ಪ್ರದೇಶದ 1.50 ಲಕ್ಷ ರೈತರು ತಮ್ಮ ಐದು ಲಕ್ಷ ಎಕರೆ ಪ್ರದೇಶದಲ್ಲಿ ಅಲ್ಪಾವಧಿಯ ಕುರುವೈ  ಬೆಳೆಯನ್ನು ಬೆಳೆದಿದ್ದಾರೆ. ಆದರೆ, ಈಗಾಗಲೇ 3.5 ಲಕ್ಷ ಎಕರೆ ಪ್ರದೇಶದ ಬೆಳೆಗಳು ನೀರಿಲ್ಲದೆ ಸೊರಗಿವೆ. ಉಳಿದ ಬೆಳೆಗಳು ಕೊಳವೆ ಬಾವಿ ನೀರಾವರಿಯನ್ನು ಅವಲಂಬಿಸಿವೆ ಎಂದಿದ್ದಾರೆ. 

ADVERTISEMENT

‘ಮುಖ್ಯಮಂತ್ರಿ ಸ್ಟಾಲಿನ್ ಅವರಿಗೆ ಯಾವುದೇ ಮುಂದಾಲೋಚನೆಯೇ ಇಲ್ಲ. ಇದೇ ಕಾರಣದಿಂದಾಗಿ ಅವರು ಜೂನ್ 12ರಂದು ಮೆಟ್ಟೂರು ಜಲಾಶಯದಿಂದ ನೀರು ಬಿಡುಗಡೆ ಮಾಡಿದ್ದಾರೆ. ಮೆಟ್ಟೂರು ಜಲಾಶಯದಿಂದ ಬಿಡುಗಡೆ ಮಾಡುವ ನೀರಿನ ಪ್ರಮಾಣವನ್ನು ರಾಜ್ಯ ಸರ್ಕಾರ ತಗ್ಗಿಸಬೇಕಿತ್ತು. ಜತೆಗೆ ರಾಜಕೀಯ ಒತ್ತಡದ ಮುಖಾಂತರ ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಕಾನೂನು ಪ್ರಕಾರ ಕರ್ನಾಟಕದಿಂದ ರಾಜ್ಯಕ್ಕೆ ಬರಬೇಕಿದ್ದ ನೀರಿನ ಪಾಲನ್ನು ಬಿಡುಗಡೆ ಮಾಡಿಸಿಕೊಳ್ಳಬೇಕಿತ್ತು’ ಎಂದು ಹೇಳಿದ್ದಾರೆ.

ಸ್ಟಾಲಿನ್ ಅವರಿಗೆ ನಿಜವಾಗಿಯೂ ಕಾವೇರಿ ನದಿಮುಖಜ ಭೂಮಿ ಪ್ರದೇಶ ಸೇರಿದಂತೆ ರಾಜ್ಯದ ಜನರ ಬಗ್ಗೆ ಕಾಳಜಿ ಇದ್ದಿದ್ದರೆ, ಜೂನ್‌ನಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿಯೇ ಅವರೊಂದಿಗೆ ಈ ಕುರಿತು ಸ್ಟಾಲಿನ್ ಚರ್ಚಿಸಬೇಕಿತ್ತು’ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.