ADVERTISEMENT

ಸಿಬಿಐ ನಿರ್ದೇಶಕರ ಮೇಲೇ ಬೇಹುಗಾರಿಕೆ?

ಅಲೋಕ್‌ ವರ್ಮಾ ಮನೆ ಮುಂದೆ ಠಳಾಯಿಸಿದ ಗುಪ್ತಚರ ಘಟಕದ ನಾಲ್ವರು

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2018, 20:16 IST
Last Updated 25 ಅಕ್ಟೋಬರ್ 2018, 20:16 IST
ಐ.ಬಿ.ಯ ಸಿಬ್ಬಂದಿಯನ್ನು ಸಿಬಿಐ ನಿರ್ದೇಶಕರ ಭದ್ರತಾ ಸಿಬ್ಬಂದಿ ಎಳೆದೊಯ್ದರು ಪಿಟಿಐ ಚಿತ್ರ
ಐ.ಬಿ.ಯ ಸಿಬ್ಬಂದಿಯನ್ನು ಸಿಬಿಐ ನಿರ್ದೇಶಕರ ಭದ್ರತಾ ಸಿಬ್ಬಂದಿ ಎಳೆದೊಯ್ದರು ಪಿಟಿಐ ಚಿತ್ರ   

ನವದೆಹಲಿ:ಸಿಬಿಐ ನಿರ್ದೇಶಕ ಅಲೋಕ್‌ ವರ್ಮಾ ಅವರ ಮೇಲೆ ಬೇಹುಗಾರಿಕೆ ನಡೆಯುತ್ತಿದೆ ಎಂಬ ಅನುಮಾನಕ್ಕೆ ಕಾರಣವಾಗುವಂತೆ ಅವರ ಅಧಿಕೃತ ಮನೆಯ ಮುಂದೆ ಠಳಾಯಿಸುತ್ತಿದ್ದ ಗುಪ್ತಚರ ಘಟಕದ (ಐ.ಬಿ.) ನಾಲ್ವರನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದರು. ಬಳಿಕ ಇವರನ್ನು ಪೊಲೀಸರಿಗೆ ಹಸ್ತಾಂತರಿಸಲಾಯಿತು. ಇವರು ಐ.ಬಿ. ಸಿಬ್ಬಂದಿ ಎಂಬುದು ದೃಢಪಟ್ಟ ಬಳಿಕ ಪೊಲೀಸರು ಅವರನ್ನು ಬಿಟ್ಟಿದ್ದಾರೆ.

ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದ ನಾಲ್ವರೂ ತನ್ನದೇ ಅಧಿಕಾರಿಗಳು ಎಂದು ಐ.ಬಿ. ಮೂಲಗಳು ಸ್ಪಷ್ಟಪಡಿಸಿವೆ. ಆದರೆ, ವರ್ಮಾ ಅವರ ಮೇಲೆ ಬೇಹುಗಾರಿಕೆಯ ಕೆಲಸವನ್ನು ಅವರು ಮಾಡಿಲ್ಲ. ಅವರು ತಮ್ಮ ನಿತ್ಯದ ಕರ್ತವ್ಯದಲ್ಲಿದ್ದರು, ಜತೆಗೆ ಗುರುತಿನ ಚೀಟಿಯನ್ನೂ ಹೊಂದಿದ್ದರು. ಅವರು ಯಾವುದೇ ರಹಸ್ಯ ಕಾರ್ಯಾಚರಣೆಯ ಭಾಗವಾಗಿ ಅಲ್ಲಿಗೆ ಹೋಗಿರಲಿಲ್ಲ ಎಂದೂ ಮೂಲಗಳು ತಿಳಿಸಿವೆ.‌

ವಶಕ್ಕೆ ಪಡೆದವರನ್ನು ಧೀರಜ್‌ ಕುಮಾರ್‌ ಸಿಂಗ್‌, ಅಜಯ್‌ ಕುಮಾರ್‌, ಪ್ರಶಾಂತ್‌ ಕುಮಾರ್‌ ಮತ್ತು ವಿನೀತ್‌ ಕುಮಾರ್‌ ಗುಪ್ತಾ ಎಂದು ಗುರುತಿಸಲಾಗಿದೆ. ಅವರಿಂದ ಗುರುತು ಚೀಟಿ, ಆಧಾರ್‌ ಕಾರ್ಡ್‌ ಮತ್ತು ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಗುರುತುಚೀಟಿಗಳು ಅಸಲಿಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ.

ADVERTISEMENT

ವರ್ಮಾ ಮತ್ತು ಸಿಬಿಐನ ವಿಶೇಷ ನಿರ್ದೇಶಕ ರಾಕೇಶ್‌ ಅಸ್ತಾನಾ ಅವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿದ ಮರು ದಿನವೇ ಬೇಹುಗಾರಿಕೆ ಆರೋಪ ಕೇಳಿ ಬಂದಿದೆ. ಹಾಗಾಗಿ ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಹರಿಹಾಯ್ದಿವೆ.

ರಾತ್ರಿ 2 ಗಂಟೆಗೆ ಸಿಬಿಐ ನಿರ್ದೇಶಕರಿಗೆ ಕಡ್ಡಾಯ ರಜೆ ಕೊಡಲಾಗುತ್ತದೆ. ಮರುದಿನ ಅವರ ಮನೆ ಮುಂದೆ ಐ.ಬಿ.ಯ ಅಧಿಕಾರಿಗಳು ಬೇಹುಗಾರಿಕೆ ನಡೆಸುತ್ತಾರೆ. ರಾಜಕೀಯ ಪಿತೂರಿಯಿಂದಾಗಿ ಅಪರಾಧ ಕೃತ್ಯಗಳು ನಡೆಯುವ ಥ್ರಿಲ್ಲರ್‌ನಲ್ಲಿ ನಡೆಯುವ ಘಟನೆಯಂತೆ ಇಡೀ ಪ್ರಸಂಗ ಕಾಣಿಸುತ್ತದೆ ಎಂದು ಕಾಂಗ್ರೆಸ್‌ನ ಮುಖ್ಯ ವಕ್ತಾರ ರಣದೀಪ್‌ ಸುರ್ಜೇವಾಲಾ ಹೇಳಿದ್ದಾರೆ.‌ ‘ಹಿಂದೆ ಗುಜರಾತ್‌ನಲ್ಲಿದ್ದ ಬೇಹುಗಾರಿಕಾ ಪ್ರವೀಣ ಈಗ ದೇಶದ ಚುಕ್ಕಾಣಿ ಹಿಡಿದಿದ್ದಾರೆ. ಬೇಹುಗಾರಿಕೆಯಲ್ಲಿ ಪಡೆದ ಪ್ರಾವೀಣ್ಯದ ಅನುಭವ ಈಗ ಅನುಕೂಲವಾಗಿದೆ. ರಫೇಲ್‌ ಹಗರಣದಿಂದ ತಪ್ಪಿಸಿಕೊಳ್ಳಲೇಬೇಕು ಎಂಬ ಅವರ ಹತಾಶೆ ಕಾಣಿಸುತ್ತಿದೆ’ ಎಂದು ಎಎಪಿಯ ರಾಜ್ಯ ಸಭಾ ಸದಸ್ಯ ಸಂಜಯ್‌ ಸಿಂಗ್‌ ಹೇಳಿದ್ದಾರೆ.

ಖರ್ಗೆ ಆಕ್ರೋಶ: ಪ್ರಧಾನಿಗೆ ಪತ್ರ

ಸಿಬಿಐ ನಿರ್ದೇಶಕ ಅಲೋಕ್‌ ವರ್ಮಾ ಅವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿ ಅವರ ಸ್ಥಾನಕ್ಕೆ ಮಧ್ಯಂತರ ನಿರ್ದೇಶಕರನ್ನು ನೇಮಿಸುವುದಕ್ಕೆ ಮೇಲ್ನೋಟಕ್ಕೆ ಯಾವ ಕಾರಣವೂ ಕಾಣಿಸುತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರದಲ್ಲಿ ಲೋಕಸಭೆಯಲ್ಲಿ ಕಾಂಗ್ರೆಸ್‌ನ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ನಿರ್ದೇಶಕರ ಅವಧಿ ಕಡಿತಗೊಳಿಸುವ ವಿಚಾರದಲ್ಲಿ ಪ್ರಧಾನಿ ಅಥವಾ ಸಿವಿಸಿಗೆ ಯಾವುದೇ ಅಧಿಕಾರ ಇಲ್ಲ. ಈ ನಿರ್ಧಾರಕ್ಕೆ ಮೊದಲು ಆಯ್ಕೆ ಸಮಿತಿಯ ಒಪ್ಪಿಗೆ ಪಡೆಯಬೇಕಿತ್ತು ಎಂದು ಸಿಬಿಐ ನಿರ್ದೇಶಕರ ಆಯ್ಕೆ ಸಮಿತಿಯ ಸದಸ್ಯರೂ ಆಗಿರುವ ಖರ್ಗೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ.

‘ಸಿಬಿಐ ನಿರ್ದೇಶಕರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿರುವುದು ಕಾನೂನುಬಾಹಿರ,
ದುರುದ್ದೇಶಪೂರಿತ ಮತ್ತು ರಫೇಲ್‌ ಹಗರಣ ಸೇರಿ ಹಲವು ಮಹತ್ವದ ಪ್ರಕರಣಗಳ ತನಿಖೆಯ ಹಾದಿ ತಪ್ಪಿಸುವ ಕಾರ್ಯಸೂಚಿಯ ಭಾಗ’ ಎಂದು ಖರ್ಗೆ ಆರೋಪಿಸಿದ್ದಾರೆ.

ಸಿಬಿಐನಲ್ಲಿ ಭ್ರಷ್ಟಾಚಾರ: ತುರ್ತು ವಿಚಾರಣೆಗೆ ‘ಸುಪ್ರೀಂ’ ಒಪ್ಪಿಗೆ

ರಾಕೇಶ್‌ ಅಸ್ತಾನಾ ಸೇರಿ ಸಿಬಿಐಯ ಹಿರಿಯ ಅಧಿಕಾರಿಗಳ ವಿರುದ್ಧ ಕೇಳಿ ಬಂದಿರುವ ಭ್ರಷ್ಟಾಚಾರ ಆರೋಪಗಳ ಬಗ್ಗೆ ನ್ಯಾಯಾಲಯದ ಉಸ್ತುವಾರಿಯಲ್ಲಿ ವಿಶೇಷ ತನಿಖೆ ನಡೆಯಬೇಕು ಎಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್‌ ಗುರುವಾರ ಒಪ್ಪಿಗೆ ನೀಡಿದೆ.

ಕಾಮನ್‌ ಕಾಸ್‌ ಎಂಬ ಎನ್‌ಜಿಒ ಪರವಾಗಿ ವಕೀಲ ಪ್ರಶಾಂತ್‌ ಭೂಷಣ್‌ ಅವರು ಸಲ್ಲಿಸಿದ ಅರ್ಜಿಯನ್ನು ಪರಿಗಣಿಸುವುದಾಗಿ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಪೀಠ ಹೇಳಿದೆ.

ಐ.ಬಿ.ಯ ಸಮರ್ಥನೆ ಏನು?

ದೆಹಲಿಯ ಗರಿಷ್ಠ ಭದ್ರತೆಯ ಪ್ರದೇಶಗಳಲ್ಲಿ ಐ.ಬಿ. ತನ್ನ ಸಿಬ್ಬಂದಿಯನ್ನು ನಿಯೋಜಿಸಿ ಅವರ ಮೂಲಕ ಮಾಹಿತಿ ಸಂಗ್ರಹಿಸುವುದು ವಾಡಿಕೆ. ವರ್ಮಾ ಅವರ ಮನೆಯ ಮುಂದೆ ಸುದ್ದಿ ವಾಹಿನಿಗಳ ಸಿಬ್ಬಂದಿ ಜತೆಗೆ ದೊಡ್ಡ ಸಂಖ್ಯೆಯ ಜನರು ಜಮಾಯಿಸಿದ್ದರಿಂದ ಈ ನಾಲ್ವರು ಅಲ್ಲಿಗೆ ಹೋಗಿದ್ದಾರೆ. ಜನರು ಅಲ್ಲಿ ಸೇರಿರುವುದಕ್ಕೆ ಕಾರಣ ಏನು ಎಂಬುದನ್ನು ತಿಳಿಯುವುದು ಅವರ ಉದ್ದೇಶವಾಗಿತ್ತು.

‘ಮಾಹಿತಿ ಸಂಗ್ರಹವೇ ಅವರ ಕೆಲಸ’

ಸಾರ್ವಜನಿಕ ಸುವ್ಯವಸ್ಥೆ ಮತ್ತು ಆಂತರಿಕ ಭದ್ರತೆಯ ಮೇಲೆ ಪ್ರಭಾವ ಬೀರಬಹುದಾದ ಪರಿಸ್ಥಿತಿಯ ಬಗ್ಗೆ ಗುಪ್ತಚರ ಮಾಹಿತಿ ಸಂಗ್ರಹಿಸುವುದು ಐ.ಬಿ.ಯ ಕೆಲಸ. ಸೂಕ್ಷ್ಮ ಪ್ರದೇಶಗಳಲ್ಲಿ ಐ.ಬಿ. ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಇಂತಹ ದೈನಂದಿನ ಜವಾಬ್ದಾರಿಯ ಭಾಗವಾಗಿ ಐ.ಬಿ.ಯ ನಾಲ್ವರು ಸಿಬ್ಬಂದಿ ಸಿಬಿಐ ನಿರ್ದೇಶಕ ಮನೆ ಸಮೀಪಕ್ಕೆ ಹೋಗಿದ್ದರು. ಅದನ್ನು ಅಪಾರ್ಥ ಮಾಡಿಕೊಳ್ಳಲಾಯಿತು ಎಂದು ಕೇಂದ್ರ ಗೃಹ ಸಚಿವಾಲಯ ಸ್ಪಷ್ಟನೆ ನೀಡಿದೆ.

ಸಿಬಿಐ ನಿರ್ದೇಶಕರ ನಿವಾಸದ ಸಮೀಪದಲ್ಲಿಯೇ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌, ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಅವರ ಮನೆಗಳಿವೆ.

* ನ್ಯಾಯಾಧೀಶ ಬಿ.ಎಚ್‌. ಲೋಯಾ ಅವರಿಗೆ ಏನಾ ಯಿತು ಎಂಬುದು ಎಲ್ಲ ರಿಗೂ ಗೊತ್ತು. ಹಗರಣಗಳನ್ನು ಮುಚ್ಚಿ ಹಾಕುವುದಕ್ಕಾಗಿ ಕೇಂದ್ರ ಸರ್ಕಾರ ಏನನ್ನಾದರೂ ಮಾಡುತ್ತದೆ

–ಸಂಜಯ್‌ ಸಿಂಗ್‌, ಎಎಪಿ ರಾಜ್ಯಸಭಾ ಸದಸ್ಯ

* ಅಸ್ತಿತ್ವ ಉಳಿಸಿಕೊಳ್ಳುವ ಎಲ್ಲ ಭರವಸೆಗಳನ್ನೂ ಕಾಂಗ್ರೆಸ್ ಕಳೆದುಕೊಂಡಿದೆ. ಹಾಗಾಗಿ ರಾಹುಲ್‌ ಗಾಂಧಿ ಅವರು ರಫೇಲ್‌ ಯುದ್ಧ ವಿಮಾನ ಖರೀದಿ ವಿಚಾರದಲ್ಲಿ ಪ್ರತಿ ದಿನವೂ ಸುಳ್ಳುಗಳನ್ನು ಸೃಷ್ಟಿಸುತ್ತಿದ್ದಾರೆ.

–ಪ್ರಕಾಶ್‌ ಜಾವಡೇಕರ್‌, ಕೇಂದ್ರ ಸಚಿವ

* ಪ್ರಧಾನಿ ಮೋದಿ ಅವರು ಭ್ರಷ್ಟಾಚಾರ ಎಸಗಿರುವುದು ನಿಜ. ಹಾಗಾಗಿ ಅವರು ಸಿಕ್ಕಿಬೀಳುತ್ತಾರೆ. ಅವರು ತಪ್ಪಿಸಿಕೊಳ್ಳಲು ಕಾಂಗ್ರೆಸ್‌ ಮತ್ತು ವಿರೋಧಪಕ್ಷಗಳು ಬಿಡುವುದಿಲ್ಲ

–ರಾಹುಲ್‌ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ

*ಸಿಬಿಐ ನಿರ್ದೇಶಕ ಮನೆ ಇರುವ ಪ್ರದೇಶ ಅತ್ಯುನ್ನತ ಭದ್ರತೆ ಇರುವ ವಲಯ. ಭಾರಿ ಭದ್ರತೆ ಇರುವ ಜನರು ಇಲ್ಲಿ ನೆಲೆಸಿದ್ದಾರೆ. ಈ ಪ್ರದೇಶಕ್ಕೆ ಬಂದ ಐ.ಬಿ ಸಿಬ್ಬಂದಿಯನ್ನು ಅಪಾರ್ಥ ಮಾಡಿಕೊಳ್ಳಲಾಗಿದೆ

–ಕೇಂದ್ರ ಗೃಹ ಇಲಾಖೆಯ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.