
ನವದೆಹಲಿ: ಶೆಲ್ ಕಂಪನಿಗಳು ಮತ್ತು ಡಿಜಿಟಲ್ ಹಗರಣಗಳ ಮೂಲಕ ₹1,000 ಕೋಟಿಗೂ ಹೆಚ್ಚು ಹಣ ವಂಚಿಸಿದ ಅಂತರರಾಷ್ಟ್ರೀಯ ಸೈಬರ್ ವಂಚನೆ ಜಾಲದಲ್ಲಿ ನಾಲ್ವರು ಚೀನೀಯರು ಸೇರಿದಂತೆ 17 ಜನರು ಹಾಗೂ 111 ಕಂಪನಿಗಳ ವಿರುದ್ಧ ಕೇಂದ್ರ ತನಿಖಾ ದಳ (ಸಿಬಿಐ) ಚಾರ್ಜ್‌ಶೀಟ್ ಸಲ್ಲಿಸಿದೆ.
ಅಕ್ಟೋಬರ್‌ನಲ್ಲಿ ಈ ಜಾಲವನ್ನು ಭೇದಿಸಿದ ನಂತರ ತನಿಖಾಧಿಕಾರಿಗಳು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದು, ವಂಚನೆಗಳನ್ನು ನಡೆಸಲು ನೆರವಾಗುತ್ತಿದ್ದ ಜಾಲವನ್ನು ಬಯಲಿಗೆಳೆದಿದ್ದಾರೆ.
ಸಾಲದ ಅರ್ಜಿಗಳು, ನಕಲಿ ಹೂಡಿಕೆ ಯೋಜನೆಗಳು, ಪೊಂಜಿ ಮತ್ತು ಬಹುಹಂತದ ಮಾರ್ಕೆಟಿಂಗ್ ಮಾದರಿಗಳು, ನಕಲಿ ಅರೆಕಾಲಿಕ ಉದ್ಯೋಗ ನೀಡುವಿಕೆ ಮತ್ತು ಆನ್‌ಲೈನ್ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳ ಮೂಲಕ ವಂಚಿಸಿರುವುದು ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
111 ಶೆಲ್ ಕಂಪನಿಗಳ (ಸಕ್ರಿಯವಾದ ಚಟುವಟಿಕೆ ಇಲ್ಲದ ಕಂಪನಿಗಳು) ಮೂಲಕ ಹಣದ ಅವ್ಯವಹಾರ ನಡೆಸಲಾಗಿದೆ. ವಂಚಕರು ‘ಮ್ಯೂಲ್’ ಖಾತೆಗಳ ಮೂಲಕ ಸುಮಾರು ₹1,000 ಕೋಟಿ ರವಾನಿಸಿದ್ದಾರೆ ಎಂದೂ ಅಧಿಕಾರಿಗಳು ವಿವರಿಸಿದ್ದಾರೆ.
ನಕಲಿ ದಾಖಲೆಗಳು, ನಕಲಿ ವಿಳಾಸಗಳು ಮತ್ತು ವ್ಯವಹಾರ ಉದ್ದೇಶಗಳ ಸುಳ್ಳು ಹೇಳಿಕೆಗಳನ್ನು ಆಧರಿಸಿ ಶೆಲ್ ಕಂಪನಿಗಳನ್ನು ನಡೆಸಲಾಗಿದೆ. ಚೀನಾದ ಝೌ ಯಿ, ಹುವಾನ್ ಲಿಯು, ವೀಜಿಯಾನ್ ಲಿಯು ಮತ್ತು ಗುವಾನ್ಹುವಾ ವಾಂಗ್ ನಿರ್ದೇಶನದ ಮೇರೆಗೆ ಈ ಶೆಲ್ ಕಂಪನಿಗಳು ಕಾರ್ಯನಿರ್ವಹಿಸಿವೆ ಎಂದು ಆರೋಪಿಸಲಾಗಿದೆ.
ಚೀನೀಯರೊಂದಿಗೆ ಸಂಪರ್ಕದಲ್ಲಿದ್ದ ಭಾರತೀಯ ಸಹಚರರು ಅನುಮಾನಾಸ್ಪದ ವ್ಯಕ್ತಿಗಳಿಂದ ಗುರುತಿನ ಚೀಟಿಗಳನ್ನು ಪಡೆದುಕೊಳ್ಳುತ್ತಿದ್ದರು. ನಂತರ ಅವುಗಳನ್ನು ಶೆಲ್ ಕಂಪನಿಗಳು, ಮ್ಯೂಲ್ ಖಾತೆಗಳನ್ನು ತೆರೆಯಲು ಮತ್ತು ಹಗರಣಗಳಿಂದ ಬಂದ ಹಣವನ್ನು ಅಕ್ರಮವಾಗಿ ವರ್ಗಾಯಿಸಲು ಮತ್ತು ಹಣದ ಹಾದಿಯನ್ನು ಮರೆಮಾಡಲು ಬಳಸಲಾಗುತ್ತಿತ್ತು ಎಂದು ಸಿಬಿಐ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ.