ADVERTISEMENT

ಬಹುಕೋಟಿ ಗುಟ್ಕಾ ಹಗರಣ: ತಮಿಳುನಾಡಿನ ಸಚಿವ, ಡಿಜಿಪಿ ಮನೆ ಮೇಲೆ ಸಿಬಿಐ ದಾಳಿ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2018, 6:16 IST
Last Updated 5 ಸೆಪ್ಟೆಂಬರ್ 2018, 6:16 IST
   

ಚೆನ್ನೈ: ತಮಿಳುನಾಡಿನ ಆರೋಗ್ಯ ಸಚಿವ ಸಿ.ವಿಜಯ ಭಾಸ್ಕರ್‌, ಡಿಜಿಪಿ ಟಿ.ಕೆ.ರಾಜೇಂದ್ರನ್‌ ಸೇರಿದಂತೆ ಹಿರಿಯ ಪೊಲೀಸ್‌ ಅಧಿಕಾರಿಗಳು ಮತ್ತು ವಾಣಿಜ್ಯ ತೆರಿಗೆ ಅಧಿಕಾರಿಗಳ ಮನೆಗಳ ಮೇಲೆ ಸಿಬಿಐ ಬುಧವಾರ ದಾಳಿ ನಡೆಸಿದೆ.

ಬಹುಕೋಟಿ ಗುಟ್ಕಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆಸಲಾಗಿದೆ.

ಸಚಿವರ ಮನೆ, ಕಚೇರಿ ಹಾಗೂ ಪೊಲೀಸ್‌ ಅಧಿಕಾರಿಗಳು ಮತ್ತು ವಾಣಿಜ್ಯ ತೆರಿಗೆ ಅಧಿಕಾರಿಗಳ ನಿವಾಸ, ಕಚೇರಿ ಸೇರಿದಂತೆ 32 ಕಡೆ ಏಕಕಾಲದಲ್ಲಿ ದಾಳಿ ನಡೆಸಿ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡು ಪರಿಶೀಲಿಸಲಾಗುತ್ತಿದೆ ಎಂದು ತಮಿಳುನಾಡು ಮಾಧ್ಯಮಗಳು ವರದಿ ಮಾಡಿವೆ.

ADVERTISEMENT

2016 ರಲ್ಲಿ ತಂಬಾಕು ವ್ಯಾಪಾರಿ ಮಾದವ್‌ ರಾವ್‌ ಅವರ ಮನೆಯ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಮಾದವ್ ರಾವ್ ಡೈರಿಯಲ್ಲಿ ಅಕ್ರಮವಾಗಿ ಗುಟ್ಕಾ ಮತ್ತು ತಂಬಾಕು ಮಾರಾಟದ ಬಗ್ಗೆ ಮಾಹಿತಿ ದೊರೆತಿತ್ತು. ಅದರಲ್ಲಿ ರಾಜಕಾರಣಿಗಳು ಮತ್ತು ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ₹ 40 ಕೋಟಿಗೂ ಹೆಚ್ಚು ಹಣ ನೀಡಿದ್ದರ ಬಗ್ಗೆ ನಮೂದಿಸಲಾಗಿತ್ತು.

ಬಹುಕೋಟಿ ಗುಟ್ಕಾ ಹಗರಣವನ್ನು ಸಿಬಿಐಗೆ ವಹಿಸುವಂತೆ ಕಳೆದ ಏಪ್ರಿಲ್‌ನಲ್ಲಿ ಮದ್ರಾಸ್‌ ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿತ್ತು.

2013ರಲ್ಲಿ ತಂಬಾಕು ಮತ್ತು ಗುಟ್ಕಾವನ್ನು ತಮಿಳುನಾಡಿನಲ್ಲಿ ನಿಷೇದಿಸಲಾಗಿದೆ. ಆದರೂ ಅಕ್ರಮವಾಗಿ ಗುಟ್ಕಾ ಮಾರಾಟವನ್ನು ಮಾಡಲಾಗುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.