ADVERTISEMENT

ಅಬಕಾರಿ ಅವ್ಯವಹಾರ ಆರೋಪ: ಮನೀಷ್‌ ಸಿಸೋಡಿಯಾ ಲಾಕರ್‌ ಶೋಧ

ಸಿಬಿಐ ಪರಿಶೀಲನೆಯಲ್ಲಿ ಏನೂ ಸಿಕ್ಕಿಲ್ಲ ಎಂದ ದೆಹಲಿ ಡಿಸಿಎಂ

ಪಿಟಿಐ
Published 30 ಆಗಸ್ಟ್ 2022, 19:31 IST
Last Updated 30 ಆಗಸ್ಟ್ 2022, 19:31 IST
ಮನೀಷ್‌ ಸಿಸೋಡಿಯಾ
ಮನೀಷ್‌ ಸಿಸೋಡಿಯಾ   

ಗಾಜಿಯಾಬಾದ್‌: ದೆಹಲಿ ಉಪಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ ಅವರ ಬ್ಯಾಂಕ್‌ ಲಾಕರ್‌ ಅನ್ನು ಸಿಬಿಐ ಅಧಿಕಾರಿಗಳು ಮಂಗಳವಾರ ‍ಶೋಧ ನಡೆಸಿದ್ದಾರೆ. ನಾಲ್ವರು ಅಧಿಕಾರಿಗಳ ತಂಡವು ಸುಮಾರು ಎರಡು ತಾಸು ಶೋಧ ನಡೆಸಿದೆ.

ಈ ಸಂದರ್ಭದಲ್ಲಿ, ಸಿಸೋಡಿಯಾ ಮತ್ತು ಅವರ ಹೆಂಡತಿ ಹಾಜರಿದ್ದರು. ಲಾಕರ್‌ನಲ್ಲಿ ₹70,000–₹80,000 ಮೌಲ್ಯದ ಆಭರಣಗಳು ಇದ್ದವು. ಅದು ಬಿಟ್ಟು ಬೇರೇನೂ ಸಿಕ್ಕಿಲ್ಲ ಎಂದು ಸಿಸೋಡಿಯಾ ಹೇಳಿದ್ದಾರೆ.

ದೆಹಲಿಯ ಹೊರವಲಯದ ವಸುಂಧರ ಎಂಬಲ್ಲಿರುವ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಶಾಖೆಯಲ್ಲಿ ಸಿಸೋಡಿಯಾ ಅವರ ಲಾಕರ್‌ ಇದೆ.

ADVERTISEMENT

ಅಬಕಾರಿ ನೀತಿ ಜಾರಿ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದ ಪ್ರಕರಣದಲ್ಲಿ ಸಿಸೋಡಿಯಾ ಸೇರಿ 15 ಮಂದಿಯ ಮೇಲೆ ಸಿಬಿಐ ಎಫ್‌ಐಆರ್ ದಾಖಲಿಸಿಕೊಂಡಿದೆ.

ಸಿಬಿಐ ಒತ್ತಡದಲ್ಲಿದೆ. ಹಾಗಾಗಿ, ಈ ಶೋಧ ನಡೆಯುತ್ತಿದೆ ಎಂದು ಸಿಸೋಡಿಯಾ ಹೇಳಿದ್ದಾರೆ.

‘ನನ್ನ ಮನೆಯ ಹಾಗೆಯೇ ಲಾಕರ್‌ನಲ್ಲಿಯೂ ಏನೂ ಸಿಕ್ಕಿಲ್ಲ. ನನ್ನ ಹೆಂಡತಿ ಮತ್ತು ಮಕ್ಕಳ ₹70 ಸಾವಿರದಿಂದ ₹80 ಸಾವಿರ ಮೌಲ್ಯದ ಆಭರಣಗಳು ಲಾಕರ್‌ನಲ್ಲಿ ಇದ್ದವು. ಇಂದಿನ (ಮಂಗಳವಾರ) ಶೋಧದಲ್ಲಿಯೂ ಸಿಬಿಐ ನನ್ನನ್ನು ನಿರ್ದೋಷಿ ಎಂದು ಘೋಷಿಸಿರುವುದು ಸಂತಸ ತಂದಿದೆ’ ಎಂದು ಸಿಸೋಡಿಯಾ ಹೇಳಿದ್ದಾರೆ.

‘ಪ್ರಧಾನಿಯವರು ನನ್ನ ಲಾಕರ್ ಶೋಧಕ್ಕೆ ಸಿಬಿಐ ತಂಡವನ್ನು ಕಳುಹಿಸಿದ್ದಾರೆ. ಅವರಿಗೆ ಏನೂ ಸಿಕ್ಕಿಲ್ಲ. ನಾನುಮತ್ತು ನನ್ನ ಕುಟುಂಬವು ನಿರ್ದೋಷಿ ಎಂಬುದಕ್ಕೆ ಇದುವೇ ಪುರಾವೆ. ಪ್ರಧಾನಿ ನಡೆಸಿದ ಎಲ್ಲ ತನಿಖೆಗಳಲ್ಲಿಯೂ ನಾನು ನಿರ್ದೋಷಿ ಎಂಬುದು ಸಾಬೀತಾಗಿದೆ. ಪ್ರಶ್ನಾರ್ಹವಾದ ಒಂದು ಪೈಸೆಯೂ ಸಿಕ್ಕಿಲ್ಲ’ ಎಂದು ಅವರು ಹೇಳಿಕೊಂಡಿದ್ದಾರೆ.

‘ನನ್ನ ಜೊತೆ ಮತ್ತು ಕುಟುಂಬದ ಜತೆ ಸಿಬಿಐ ಅಧಿಕಾರಿಗಳು ಸೌಜನ್ಯದಿಂದ ವರ್ತಿಸಿದ್ದಾರೆ’ ಎಂದಿದ್ದಾರೆ.

ಕೇಜ್ರಿವಾಲ್‌ಗೆ ಅಧಿಕಾರದ ಅಮಲು: ಹಜಾರೆ
ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರು ದೆಹಲಿ ಅಬಕಾರಿ ನೀತಿಯನ್ನು ಖಂಡಿಸಿದ್ದಾರೆ. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರಿಗೆ ಪತ್ರ ಬರೆದಿರುವ ಹಜಾರೆ, ಮುಖ್ಯಮಂತ್ರಿಯು ಅಧಿಕಾರದ ಅಮಲಿನಲ್ಲಿ ಮುಳುಗಿದ್ದಾರೆ ಎಂದು ಟೀಕಿಸಿದ್ದಾರೆ. ಹೊಸ ನೀತಿಯು ಮದ್ಯ ಮಾರಾಟ ಮತ್ತು ಕುಡಿತವನ್ನು ಹೆಚ್ಚಿಸಲಿದೆ. ಭ್ರಷ್ಟಾಚಾರಕ್ಕೆ ಉತ್ತೇಜನ ನೀಡಲಿದೆ ಎಂದೂ ಅವರು ಹೇಳಿದ್ದಾರೆ.

ಮಹಾರಾಷ್ಟ್ರದ ಅಹ್ಮದ್‌ನಗರ ಜಿಲ್ಲೆಯ ರಾಳೇಗಣ ಸಿದ್ಧಿಯಲ್ಲಿ ಸಂಪೂರ್ಣ ಮದ್ಯ ನಿಷೇಧ ಇರುವುದನ್ನು ಪತ್ರದಲ್ಲಿ ಹಜಾರೆ ಉಲ್ಲೇಖಿಸಿದ್ದಾರೆ. ಕೇಜ್ರಿವಾಲ್‌ ಅವರು ತಮ್ಮ ಪುಸ್ತಕ ‘ಸ್ವರಾಜ್‌’ನಲ್ಲಿ ಮದ್ಯ ನಿಷೇಧದ ಪರವಾಗಿ ವಾದಿಸಿದ್ದಾರೆ ಎಂಬುದನ್ನು ನೆನಪಿಸಿದ್ದಾರೆ. ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಕೇಜ್ರಿವಾಲ್‌ ಅವರು ಹಜಾರೆ ಅವರ ಜತೆಗಿದ್ದರು.

ಕೇಜ್ರಿವಾಲ್‌ ಮುಖ್ಯಮಂತ್ರಿಯಾದ ಮೇಲೆ ಇದೇ ಮೊದಲಿಗೆ ಅವರಿಗೆ ಬರೆದಿರುವುದಾಗಿ ಹಜಾರೆ ಹೇಳಿದ್ದಾರೆ. ದೆಹಲಿ ಸರ್ಕಾರದ ಅಬಕಾರಿ ನೀತಿಯ ಕುರಿತ ವರದಿಗಳನ್ನು ಓದುವಾಗ ನೋವಾಗುತ್ತದೆ ಎಂದಿದ್ದಾರೆ.

‘ಆದರ್ಶವಾದಿಯಾದ ಹಲವು ವಿಚಾರಗಳನ್ನುನಿಮ್ಮ ಪುಸ್ತಕದಲ್ಲಿ ಬರೆದಿದ್ದೀರಿ. ನಿಮ್ಮ ಬಗ್ಗೆ ಎಲ್ಲರಿಗೂ ಬಹಳ ನಿರೀಕ್ಷೆಗಳಿದ್ದವು. ಆದರೆ, ಮುಖ್ಯಮಂತ್ರಿಯಾದ ಬಳಿಕ ಆ ಆದರ್ಶಗಳನ್ನು ನೀವು ಮರೆತಿದ್ದೀರಿ’ ಎಂದು ಪತ್ರದಲ್ಲಿ ಹಜಾರೆ ಹೇಳಿದ್ದಾರೆ.

ಬಿಜೆಪಿ ಮೇಲೆ ಆಕ್ರೋಶ
ಅರವಿಂದ ಕೇಜ್ರಿವಾಲ್ ಅವರು ಹಜಾರೆ ಅವರ ಪತ್ರದ ಬಳಿಕ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

ಪಂಜಾಬ್‌ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ತಮ್ಮನ್ನು ಭಯೋತ್ಪಾದಕ ಎಂದು ಬಿಜೆಪಿ ಕರೆದಿತ್ತು. ಜನರು ಅದನ್ನು ನಂಬಲಿಲ್ಲ. ಹಾಗಾಗಿ, ಕುಮಾರ್‌ ವಿಶ್ವಾಸ್‌ ಅವರನ್ನು ತಮ್ಮ ವಿರುದ್ಧ ಬಳಸಿಕೊಳ್ಳಲಾಯಿತು. ಈಗ ಅವರು ಎಎಪಿ ಸರ್ಕಾರವನ್ನು ಗುರಿ ಮಾಡಲು ಅಣ್ಣಾ ಹಜಾರೆ ಅವರನ್ನು ಬಳಸಿಕೊಂಡಿದ್ದಾರೆ ಎಂದು ಕೇಜ್ರಿವಾಲ್‌ ಅವರು ಹೇಳಿದ್ದಾರೆ.

*
ನನ್ನನ್ನು ಎರಡು–ಮೂರು ತಿಂಗಳು ಜೈಲಿಗೆ ಕಳುಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಸಿಬಿಐ ಮೇಲೆ ಒತ್ತಡ ಇದೆ. ಸತ್ಯಕ್ಕೆ ಜಯವಾಗಲಿ
–ಮನೀಷ್‌ ಸಿಸೋಡಿಯಾ, ದೆಹಲಿ ಉಪಮುಖ್ಯಮಂತ್ರಿ

*
ಈ ಇಡೀ ಕಾರ್ಯಾಚರಣೆಗೆ ಕಾರಣವೇ ಕೊಳಕು ರಾಜಕಾರಣ. ಇದು ಕೊನೆಯಾಗುತ್ತದೆ, ಕೆಲಸ ಮಾಡಲು ನಮಗೆ ಅವಕಾಶ ದೊರೆಯುತ್ತದೆ ಎಂಬ ಭರವಸೆ ಇದೆ.
–ಅರವಿಂದ ಕೇಜ್ರಿವಾಲ್‌, ದೆಹಲಿ ಮುಖ್ಯಮಂತ್ರಿ

*

ಶರಾಬು, ಶಿಕ್ಷಣ ಹಗರಣಗಳು ಎಎಪಿ ಸರ್ಕಾರವು ನಡೆಸಿದ ‍ಭ್ರಷ್ಟಾಚಾರದ ಅವಳಿ ಗೋಪುರಗಳು. ಜನರು ಪಾಠಶಾಲೆ ಕೇಳಿದರೆ, ಎಎಪಿ ಸರ್ಕಾರವು ಮಧುಶಾಲೆ ಕೊಟ್ಟಿತು
–ಶಹಜಾದ್‌ ಪೂನಾವಾಲಾ, ಬಿಜೆಪಿ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.