ADVERTISEMENT

ಸಿಬಿಐ ಪಂಜರದ ಗಿಳಿಯಲ್ಲ, ಅದು ತನ್ನ ಕರ್ತವ್ಯ ನಿರ್ವಹಿಸುತ್ತಿದೆ: ಕಿರಣ್ ರಿಜಿಜು

ಪಿಟಿಐ
Published 4 ಏಪ್ರಿಲ್ 2022, 7:38 IST
Last Updated 4 ಏಪ್ರಿಲ್ 2022, 7:38 IST
ಕಿರಣ್ ರಿಜಿಜು
ಕಿರಣ್ ರಿಜಿಜು   

ನವದೆಹಲಿ: ಸಿಬಿಐ ಇನ್ನು 'ಪಂಜರದ ಗಿಳಿ' ಅಲ್ಲ. ಆದರೆ, ಭಾರತದ ಅತ್ಯುನ್ನತ ಅಪರಾಧ ತನಿಖಾ ಸಂಸ್ಥೆಯಾಗಿ ತನ್ನ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸುತ್ತಿದೆ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಹೇಳಿದರು.

ಈ ಹಿಂದೆ ಸರ್ಕಾರದಲ್ಲಿದ್ದ ಜನರು ಕೆಲವೊಮ್ಮೆ ತನಿಖೆಯಲ್ಲಿ ತೊಡಕಾಗುತ್ತಿದ್ದರು. ಈ ಹಿಂದೆ ಕೆಲವು ಅಧಿಕಾರಿಗಳು ಎದುರಿಸಿದ್ದ ಸವಾಲುಗಳು ಈಗ ಅಸ್ತಿತ್ವದಲ್ಲಿಲ್ಲ ಎಂದು ಅವರು ಹೇಳಿದರು.

ಈ ಕುರಿತು ಟ್ವೀಟ್ ಮಾಡಿರುವ ಅವರು, ಸಿಬಿಐ ಇನ್ನು ಪಂಜರದ ಗಿಳಿಯಲ್ಲ. ಅದು ಅದರ ಕರ್ತವ್ಯವನ್ನು ನಿಷ್ಠೆಯಿಂದ ನಿಭಾಯಿಸುತ್ತಿದೆ ಎಂದು ಸಿಬಿಐನ ತನಿಖಾ ಅಧಿಕಾರಿಗಳ ಮೊದಲ ಸಮ್ಮೇಳನದಲ್ಲಿ ಶನಿವಾರ ತಮ್ಮ ಭಾಷಣದ ಕಿರು ವಿಡಿಯೊವನ್ನು ಅವರು ಹಂಚಿಕೊಂಡಿದ್ದಾರೆ.

ADVERTISEMENT

ಒಂದು ಕಾಲವಿತ್ತು, ಸರ್ಕಾರದಲ್ಲಿರುವ ಜನರು ಕೆಲವೊಮ್ಮೆ ತನಿಖೆಗೆ ತೊಂದರೆಯಾಗಿ ಪರಿಣಮಿಸುತ್ತಿದ್ದರು. ಅದಿನ್ನು ನನಗೆ ಚೆನ್ನಾಗಿ ನೆನಪಿದೆ. ಆದರೆ ಇಂದು ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಪ್ರಧಾನಿ ಇದ್ದಾರೆ ಎಂದರು.

ಅಧಿಕಾರದಲ್ಲಿರುವ ಜನರು ಭ್ರಷ್ಟಾಚಾರದಲ್ಲಿ ತೊಡಗಿದಾಗ ಉಂಟಾಗುವ ತೊಂದರೆಗಳೇನು ಎಂಬುದು ನನಗೆ ಗೊತ್ತು. ಇದು ಸಿಬಿಐಗೆ ಕೂಡ ಕಷ್ಟ. ಈ ಸಂಬಂಧ ನ್ಯಾಯಾಂಗದಿಂದಲೂ ನಾವು ಹಿಂದೆ ಟೀಕೆಗಳನ್ನು ಎದುರಿಸಿದ್ದೇವೆ. ಇದೀಗ ಈ ಎಲ್ಲ ಅಡೆತಡೆಗಳನ್ನು ದಾಟಿ ನಿಂತಿದ್ದೇವೆ ಎಂದಿದ್ದಾರೆ.

2013ರ ಕಲ್ಲಿದ್ದಲು ಹಂಚಿಕೆ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್, ಸಿಬಿಐ 'ಪಂಜರದ ಗಿಳಿ' ಎಂದು ಹೇಳಿತ್ತು.

ಏಪ್ರಿಲ್ 1 ರಂದು ಸಿಬಿಐನ 19ನೇ ಡಿಪಿ ಕೊಹ್ಲಿ ಸ್ಮಾರಕ ಉಪನ್ಯಾಸವನ್ನು ಉದ್ದೇಶಿಸಿ ಮಾತನಾಡಿದ್ದ ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ, ಕೆಲವು ಸಂದರ್ಭಗಳಲ್ಲಿ ಸಿಬಿಐನ ಕ್ರಮಗಳು ಮತ್ತು ನಿಷ್ಕ್ರಿಯತೆಗಳು ಪ್ರಶ್ನೆಗಳನ್ನು ಹುಟ್ಟುಹಾಕಿರುವುದರಿಂದ ಸಿಬಿಐನ ವಿಶ್ವಾಸಾರ್ಹತೆಯು ಕಾಲಾನಂತರದಲ್ಲಿ ಆಳವಾದ ಸಾರ್ವಜನಿಕ ಪರಿಶೀಲನೆಗೆ ಒಳಗಾಗಿದೆ ಎಂದು ಹೇಳಿದರು.

ವಿವಿಧ ತನಿಖಾ ಸಂಸ್ಥೆಗಳನ್ನು ಒಂದೇ ಸೂರಿನಡಿ ತರಲು 'ಸ್ವತಂತ್ರ ಸಂಸ್ಥೆ' ಯನ್ನು ರಚಿಸುವಂತೆಯೂ ಅವರು ಕರೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.