ADVERTISEMENT

ಕಾನೂನು ಸುವ್ಯವಸ್ಥೆ ಬಗ್ಗೆ ಚರ್ಚೆ: ಕೇಂದ್ರ, ಬಂಗಾಳ ಸರ್ಕಾರದ ಸಭೆ ಸಂಜೆ 5ಕ್ಕೆ

ಏಜೆನ್ಸೀಸ್
Published 18 ಡಿಸೆಂಬರ್ 2020, 10:13 IST
Last Updated 18 ಡಿಸೆಂಬರ್ 2020, 10:13 IST
   

ಕೋಲ್ಕತ್ತ: ರಾಜ್ಯದ ಕಾನೂನು ಸುವ್ಯವಸ್ಥೆ ವಿಚಾರದ ಬಗ್ಗೆ ಚರ್ಚಿಸಲು ಪಶ್ಚಿಮ ಬಂಗಾಳ ಹಾಗೂ ಕೇಂದ್ರ ಸರ್ಕಾರಗಳು ಇಂದು ಸಂಜೆ 5ಕ್ಕೆ ಸಭೆ ನಡೆಸಲಿವೆ.

ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರ ಬೆಂಗಾವಲು ವಾಹನಗಳ ಮೇಲೆ ಬಂಗಾಳದಲ್ಲಿ ಕಳೆದ ವಾರ ಕಲ್ಲು ತೂರಾಟ ನಡೆಸಲಾಗಿತ್ತು. ಈ ಸಂಬಂಧ ಕೇಂದ್ರ ಬಿಜೆಪಿ ಸರ್ಕಾರ ಮತ್ತು ಮಮತಾ ಬ್ಯಾನರ್ಜಿ ನೇತೃತ್ವದ ರಾಜ್ಯ ಸರ್ಕಾರದ ನಡುವೆ ರಾಜಕೀಯ ಮೇಲಾಟಗಳು ನಡೆಯುತ್ತಿವೆಯಾದರೂ, ಸಭೆ ನಿಗದಿಯಾಗಿದೆ.

ನಡ್ಡಾ ಅವರ ಬೆಂಗಾವಲಿಗೆ ನಿಯೋಜನೆಗೊಂಡಿದ್ದ ಮೂವರು ಐಪಿಎಸ್‌ ಅಧಿಕಾರಿಗಳನ್ನು ಕಲ್ಲು ತೂರಾಟ ಪ್ರಕರಣದ ಬಳಿಕ ಕೇಂದ್ರ ಸೇವೆಗೆ ವಾಪಸ್‌ ಆಗುವಂತೆ ಸೂಚಿಸಲಾಗಿತ್ತು. ಇದನ್ನು ವಿರೋಧಿಸಿದ್ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕೇಂದ್ರದ ಈ ಕ್ರಮವು ‘ಅಸಾಂವಿಧಾನಿಕ ಮತ್ತು ಸಮ್ಮತಿಸುವುದಿಲ್ಲ’ ಎಂದು ಕಿಡಿಕಾರಿದ್ದರು.

‘ಇಂತಹ ಪ್ರಯತ್ನಗಳ ಮೂಲಕ ರಾಜ್ಯದ ಆಡಳಿತವನ್ನು ನಿಯಂತ್ರಿಸುವ ಕೇಂದ್ರದ ಪ್ರಯತ್ನವನ್ನು ಅನುಮತಿಸುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಅಧಿಕಾರಿಗಳನ್ನು ವಾಪಸ್‌ ಕರೆಸಿಕೊಳ್ಳುವ ವಿಚಾರವಾಗಿಬಂಗಾಳ ಸರ್ಕಾರಕ್ಕೆ ಗುರುವಾರ ಪತ್ರ ಬರೆದಿದ್ದ ಕೇಂದ್ರವು, ಮೂವರು ಅಧಿಕಾರಿಗಳನ್ನು ತಕ್ಷಣವೇ ರಾಜ್ಯ ಸೇವೆಯಿಂದ ಮುಕ್ತಗೊಳಿಸಬೇಕು ಎಂದು ತಿಳಿಸಿತ್ತು. ಬ್ಯಾನರ್ಜಿ ಇದರಿಂದ ಮತ್ತಷ್ಟು ಕೆರಳಿದ್ದಾರೆ.

ಡೈಮಂಡ್ ಹಾರ್ಬರ್‌ನ ಪೊಲೀಸ್ ವರಿಷ್ಠಾಧಿಕಾರಿ ಬೋಲನಾಥ್ ಪಾಂಡೆ, ದಕ್ಷಿಣ ಬಂಗಾಳದ ಎಡಿಜಿಪಿ ರಾಜೀವ್ ಮಿಶ್ರಾ ಮತ್ತು ಪ್ರೆಸಿಡೆನ್ಸಿ ರೇಂಜ್‌ನ ಡಿಐಜಿ ಪ್ರವೀಣ್ ತ್ರಿಪಾಠಿ ಅವರನ್ನ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಭದ್ರತೆಗೆ ನಿಯೋಜಿಸಲಾಗಿತ್ತು. ಆದರೂ, ಡೈಮಂಡ್ ಹಾರ್ಬರ್‌ನ ಶಿರೋಕಲ್‌ನಲ್ಲಿ ನಡ್ಡಾ ಅವರ ವಾಹನಗಳ ಮೇಲೆ ಕಲ್ಲು ತೂರಾಟ ನಡೆದಿತ್ತು.

ಆ ಘಟನೆಯ ಬಳಿಕ ಮೂವರೂ ಐಪಿಎಸ್‌ ಅಧಿಕಾರಿಗಳನ್ನು ಕೇಂದ್ರ ಸೇವೆಗೆವಾಪಸ್ ಕರೆಸಿಕೊಳ್ಳಲಾಗಿದೆ. ಇಂದು ಸಂಜೆ 5ರ ಒಳಗೆ ಕೇಂದ್ರ ಸೇವೆಗೆ ವರದಿ ಮಾಡಿಕೊಳ್ಳುವಂತೆ ಐಪಿಎಸ್‌ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.