ADVERTISEMENT

2022ರ ವೇಳೆಗೆ ಪ್ರತಿ ಮಗುವಿಗೆ ಸಮರ್ಪಕ ಆರೋಗ್ಯ, ಶಿಕ್ಷಣ: ಹರ್ಷ ವರ್ಧನ್

ಏಜೆನ್ಸೀಸ್
Published 31 ಜನವರಿ 2021, 4:48 IST
Last Updated 31 ಜನವರಿ 2021, 4:48 IST
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹರ್ಷವರ್ಧನ್
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹರ್ಷವರ್ಧನ್   

ನವದೆಹಲಿ: 2022ರ ವೇಳೆಗೆ ದೇಶದ ಪ್ರತಿ ಮಗುವಿಗೆ ಸಮರ್ಪಕ ಆರೋಗ್ಯ, ಶಿಕ್ಷಣ ಮತ್ತು ಪೌಷ್ಟಿಕಾಂಶದ ಸೌಲಭ್ಯ ಹಾಗೂ ದೇಶದ ಮಹಿಳೆಯರಿಗೆ ಸುರಕ್ಷತೆಯನ್ನು ಒದಗಿಸುವುದು ಪ್ರಧಾನಿ ನರೇಂದ್ರ ಮೋದಿಯವರ ಧ್ಯೇಯವಾಕ್ಯವಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹರ್ಷವರ್ಧನ್ ತಿಳಿಸಿದ್ದಾರೆ.

ಬ್ರಿಟಿಷ್ ಅಸೋಸಿಯೇಷನ್ ಆಫ್ ಫಿಜಿಶಿಯನ್ಸ್ ಆಫ್ ಇಂಡಿಯನ್ ಓರಿಜಿನ್‌ನ (ವೇಲ್ಸ್) ವಾರ್ಷಿಕ ಸಮ್ಮೇಳನದ ಅಧ್ಯಕ್ಷತೆ ವಹಿಸಿದ ನಂತರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಅವರು, 75ನೇ ಸ್ವಾತಂತ್ರ್ಯ ದಿನಾಚರಣೆ ವರ್ಷದ ವೇಳೆಗೆ ಹೊಸ ಭಾರತದಲ್ಲಿ ರಾಷ್ಟ್ರೀಯತೆ ಮತ್ತು ಮಾನವತಾವಾದ ಮಾತ್ರ ಮೇಲುಗೈ ಸಾಧಿಸಲಿದೆ ಎಂದರು.

'2022ಕ್ಕೆ ಭಾರತ 75ನೇ ಸ್ವಾಂತಂತ್ರ್ಯ ಪಡೆದ ವರ್ಷಕ್ಕೆ ಪ್ರವೇಶಿಸಿದಾಗ, ನಾವು ಭಾರತಕ್ಕೆ ಖಂಡಿತವಾಗಿಯೂ ಹೊಸ ರೂಪವನ್ನು ನೀಡುತ್ತಿದ್ದೇವೆ. ಅಲ್ಲಿ ನಾವು ಪ್ರತಿ ಮಗುವಿಗೆ ಸಮರ್ಪಕ ಆರೋಗ್ಯ, ಶಿಕ್ಷಣ, ಪೌಷ್ಟಿಕಾಂಶದ ಸೌಲಭ್ಯ ಹಾಗೂ ಮಹಿಳೆಯರಿಗೆ ಸುರಕ್ಷತೆಯನ್ನು ಹೊಂದಿರುತ್ತೇವೆ. ಆಗ ಭಾರತದಲ್ಲಿ ರಾಷ್ಟ್ರೀಯತೆ ಮತ್ತು ಮಾನವತಾವಾದ ಮಾತ್ರವೇ ಮೇಲುಗೈ ಸಾಧಿಸಲಿದೆ. ಇದುವೇ ಪ್ರಧಾನಿ ಮೋದಿಯವರ ಧ್ಯೇಯವಾಕ್ಯ' ಎಂದು ತಿಳಿಸಿದರು.

ADVERTISEMENT

ಸಮ್ಮೇಳನದಲ್ಲಿ ಕೋವಿಡ್-19ರ ಪರಿಣಾಮ ತಗ್ಗಿಸುವಲ್ಲಿ ಭಾರತ ಸಾಧಿಸಿರುವ ಯಶಸ್ಸನ್ನು ಎತ್ತಿ ತೋರಿಸಿದರು. ಇದು ಆರೋಗ್ಯ ಸಚಿವಾಲಯದ ಪೂರ್ವಭಾವಿ ವಿಧಾನ, ನಿಖರವಾದ ಕಣ್ಗಾವಲು ಮತ್ತು ಸಂಪರ್ಕ ಪತ್ತೆಹಚ್ಚುವಿಕೆಯು ಭಾರತಕ್ಕೆ ಅಪಾರ ಸಹಾಯ ಮಾಡಿದೆ ಎಂದು ಹೇಳಿದರು.

'ಸಾಂಕ್ರಾಮಿಕ ರೋಗವು ಹರಡುತ್ತಿರುವ ಕಾಲಘಟ್ಟದಲ್ಲಿ ಹಲವಾರು ತಜ್ಞರು ಭಾರತಕ್ಕೆ ಹೆಚ್ಚಿನ ಸೋಂಕು ತಗುಲುವ ಮತ್ತು ಅಪಾಯವಿದೆ ಎಂದು ಮುನ್ನೆಚ್ಚರಿಕೆ ನೀಡಿದ್ದರು. ಆದರೆ ನಮ್ಮ ನಿರಂತರ ಪ್ರಯತ್ನಗಳ ಪರಿಣಾಮವಾಗಿ ನಾವು ವಿಶ್ವದ ಅತಿ ಹೆಚ್ಚು ಚೇತರಿಕೆ ದರ ಮತ್ತು ಕಡಿಮೆ ಸಾವಿನ ಪ್ರಮಾಣವನ್ನು ಹೊಂದಿರುವ ರಾಷ್ಟ್ರವಾಗಿ ಹೊರಹೊಮ್ಮಿದ್ದೇವೆ' ಎಂದು ತಿಳಿಸಿದರು.

'ಸಾಂಕ್ರಾಮಿಕ ರೋಗದ ಸಮಯದಲ್ಲಿ ಶೀಘ್ರವಾಗಿ ದೇಶದ ಆರೋಗ್ಯ ಮೂಲಸೌಕರ್ಯವನ್ನು ಹೆಚ್ಚಿಸಲಾಯಿತು. ವೈರಸ್ ಅನ್ನು ಪ್ರತ್ಯೇಕಿಸಿದ ವಿಶ್ವದ ಮೊದಲ ಕೆಲವು ದೇಶಗಳಲ್ಲಿ ಭಾರತವೂ ಸೇರಿತ್ತು. ಸಾಂಕ್ರಾಮಿಕ ಸಮಯದಲ್ಲಿ ನಮ್ಮ ದೇಶವು 150ಕ್ಕೂ ಹೆಚ್ಚಿನ ದೇಶಗಳಿಗೆ ಔಷಧಿಗಳನ್ನು ನೀಡಿತು ಮತ್ತು ಇತರೆ ಸಹಾಯವನ್ನು ಮಾಡಿತು' ಎಂದರು.

ಲಸಿಕೆಗಳನ್ನು ತಯಾರಿಸುವಲ್ಲಿ ದೇಶದ ವಿಜ್ಞಾನಿಗಳ ಪ್ರಯತ್ನ ಮತ್ತು ಕೊಡುಗೆಯನ್ನು ಮತ್ತಷ್ಟು ಶ್ಲಾಘಿಸಿದ ಅವರು, 'ನಮ್ಮ ವಿಜ್ಞಾನಿಗಳು ಅತೀ ಕಡಿಮೆ ಸಮಯದಲ್ಲಿ ಸ್ಥಳೀಯವಾಗಿ ತಯಾರಿಸಿದ 2 ಲಸಿಕೆಗಳನ್ನು ನೀಡುವಲ್ಲಿ ಗಮನಾರ್ಹವಾದ ಕೆಲಸವನ್ನು ಮಾಡಿದ್ದಾರೆ. ದೇಶದಲ್ಲಿ ನಡೆಯುತ್ತಿರುವ ವಿಶ್ವದ ಅತಿದೊಡ್ಡ ಲಸಿಕಾ ಅಭಿಯಾನದ ಮೊದಲ 15 ದಿನಗಳಲ್ಲಿ 37 ಲಕ್ಷಕ್ಕೂ ಹೆಚ್ಚಿನ ಫಲಾನುಭವಿಗಳಿಗೆ ಲಸಿಕೆ ನೀಡಲಾಗಿದೆ' ಎಂದು ಹೇಳಿದರು.

ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ದಿನದಲ್ಲಿ ಶನಿವಾರ ಸಂಜೆ 7 ಗಂಟೆಯವರೆಗೆ 2,06,130 ಫಲಾನುಭವಿಗಳಿಗೆ ಲಸಿಕೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.