ADVERTISEMENT

ಮಹಾರಾಷ್ಟ್ರ: ಶರದ್ ಪವಾರ್ ‘ಒಬಿಸಿ’ ಪ್ರಮಾಣ ಪತ್ರ ಸಂಚಲನ!

ಸಾಮಾಜಿಕ ಜಾಲತಾಣದಲ್ಲಿನ ಜಾತಿಪತ್ರ ನಕಲಿ: ಎನ್‌ಸಿಪಿ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2023, 13:24 IST
Last Updated 13 ನವೆಂಬರ್ 2023, 13:24 IST
ಶರದ್ ಪವಾರ್ 
ಶರದ್ ಪವಾರ್    

ಮುಂಬೈ: ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಇತರೆ ಹಿಂದುಳಿದ ವರ್ಗಗಳಿಗೆ (ಒಬಿಸಿ) ಸೇರಿದವರು ಎಂಬಂತೆ ಬಿಂಬಿಸುವ ಪ್ರಮಾಣಪತ್ರವು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಆದರೆ, ಈ ಪ್ರಮಾಣಪತ್ರದ ಪ್ರತಿಯು ನಕಲಿ ಎಂದಿರುವ ಎನ್‌ಸಿಪಿ, ಈ ಕೃತ್ಯವು ಬಾಲಿಶವಾದದ್ದು ಎಂದು ಟೀಕಿಸಿದೆ. 

ಎನ್‌ಸಿಪಿ ಕಾರ್ಯಾಧ್ಯಕ್ಷೆಯೂ ಆಗಿರುವ ಸಂಸದೆ ಸುಪ್ರಿಯಾ ಸುಳೆ ಮತ್ತು ಶಾಸಕ ರೋಹಿತ್ ಪವಾರ್ ಅವರು, ಈ ಕೃತ್ಯದ ಹಿಂದಿರುವ ವ್ಯಕ್ತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

‘ನಕಲಿ ಪ್ರಮಾಣ ಪತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಡುವುದು ಬಾಲಿಶತನವಲ್ಲದೇ ಮತ್ತೇನೂ ಅಲ್ಲ. ಇತ್ತೀಚಿನ ದಿನಗಳಲ್ಲಿ ನಕಲಿ ಪ್ರಮಾಣಪತ್ರಗಳನ್ನು ಸೃಷ್ಟಿಸಿ, ಹರಿಬಿಡುವುದು ದೊಡ್ಡ ವಿಚಾರವಾಗಿದೆ. ಈ ಪ್ರಮಾಣ ಪತ್ರವು ಇಂಗ್ಲಿಷ್‌ನಲ್ಲಿದೆ. ಪವಾರ್ ಸಾಹೇಬರು 10ನೇ ತರಗತಿಯಲ್ಲಿ ಓದುವಾಗ ಇಂಗ್ಲಿಷ್ ಮಾಧ್ಯಮ ಶಾಲೆಗಳು ಎಲ್ಲಿದ್ದವು’ ಎಂದು ಸುಪ್ರಿಯಾ ಸುಳೆ ಅವರು ಪ್ರಶ್ನಿಸಿದ್ದಾರೆ. 

ADVERTISEMENT

‘ಈ ನಕಲಿ ದಾಖಲೆಗಳ ಹಂಚಿಕೆಯ ಹಿಂದೆ ಬಿಜೆಪಿಯ ಕೈವಾಡವಿದೆ. ಇದು ಬಿಜೆಪಿಯ ಸಂಸ್ಕೃತಿಯಾಗಿದೆ. ಅವರಿಗೆ ಸತ್ಯ ಗೊತ್ತಿಲ್ಲ. ಅವರು ಹಂಚುವುದೆಲ್ಲವೂ ಸುಳ್ಳಿನ ವಿಚಾರಗಳೇ. ಇದರ ಹಿಂದೆ ಬಿಜೆಪಿಯ ಟ್ರೊಲ್ ಆರ್ಮಿ ಮತ್ತು ಸಾಮಾಜಿಕ ಮಾಧ್ಯಮದ ಕೆಲವು ಮಂದಿ ಇದ್ದಾರೆ’ ಎಂದು ರೋಹಿತ್ ಪವಾರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.