ಚಾಟ್‌ಜಿಪಿಟಿ
ರಾಯಿಟರ್ಸ್ ಚಿತ್ರ
ನವದೆಹಲಿ: ಕೃತಕ ಬುದ್ಧಿಮತ್ತೆ ಆಧಾರಿತ ವಿವಾದಗಳನ್ನು ಎದುರಿಸಲು ಸದ್ಯ ಇರುವ ಹಕ್ಕುಸ್ವಾಮ್ಯ ಕಾನೂನು ಸಾಕೇ ಎಂದು ಪರಿಶೀಲಿಸಲು ಕೇಂದ್ರ ಸರ್ಕಾರ ಸಮಿತಿಯೊಂದನ್ನು ರಚಿಸಿದೆ. ಚಾಟ್‌ಜಿಪಿಟಿ ಅಭಿವೃದ್ಧಿಪಡಿಸಿರುವ ಅಮೆರಿಕದ ಓಪನ್‌ಎಐ ವಿರುದ್ಧದ ಹಕ್ಕುಸ್ವಾಮ್ಯ ಉಲ್ಲಂಘನೆ ಆರೋಪದಿಂದ ಎದುರಾಗಿರುವ ಕಾನೂನು ಸವಾಲುಗಳನ್ನು ಪರಿಶೀಲಿಸಲಾಗುವುದು ಎಂದು ಸರ್ಕಾರ ತನ್ನ ಆದೇಶದಲ್ಲಿ ಹೇಳಿದೆ.
ಚಾಟ್‌ಜಿಪಿಟಿಯನ್ನು ತರಬೇತುಗೊಳಿಸಲು ಹಕ್ಕುಸ್ವಾಮ್ಯ ಹೊಂದಿರುವ ವಿಷಯ ಹಾಗೂ ಚಿತ್ರಗಳನ್ನು ಅನುಮತಿ ಇಲ್ಲದೆ ಬಳಸಿಕೊಳ್ಳಲಾಗುತ್ತಿದೆ ಎಂದು ಭಾರತದ ಮುಂಚೂಣಿಯ ಪತ್ರಿಕೆಗಳು ಮತ್ತು ಪ್ರಕಾಶಕರು ದೆಹಲಿ ಹೈಕೋರ್ಟ್‌ನಲ್ಲಿ ಹೂಡಿರುವ ದಾವೆ ಆಧರಿಸಿ ಸರ್ಕಾರ ಈ ಆದೇಶ ಮಾಡಿದೆ. ಆದರೆ ಈ ಆರೋಪಗಳನ್ನು ಓಪನ್‌ಎಐ ತಳ್ಳಿಹಾಕಿದೆ.
ಭಾರತದ ಹಕ್ಕುಸ್ವಾಮ್ಯ ಕಾನೂನು ಮತ್ತು ಕೃತಕ ಬುದ್ಧಿಮತ್ತೆ ಕಾಲದಲ್ಲಿ ಅವುಗಳ ಪರಿಣಾಮ ಕುರಿತು ಅಧ್ಯಯನ ನಡೆಸಲು ಎಂಟು ತಜ್ಞರ ಸಮಿತಿಯನ್ನು ರಚಿಸಲಾಗಿದೆ. ಆದರೆ ಈ ಆದೇಶವನ್ನು ಬಹಿರಂಗಗೊಳಿಸಲಾಗಿಲ್ಲ ಎಂದು ವಾಣಿಜ್ಯ ಸಚಿವಾಲಯ ಹೇಳಿದೆ ಎಂದು ವರದಿಯಾಗಿದೆ.
‘ಹಕ್ಕುಸ್ವಾಮ್ಯ ಇರುವ ಸಂದರ್ಭದಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆಯಿಂದ ಎದುರಾಗಬಹುದಾದ ಕಾನೂನಾತ್ಮಕ ಮತ್ತು ನೀತಿಯ ಪರಿಣಾಮಗಳನ್ನು ಗುರುತಿಸಿ ಅದನ್ನು ವಿಶ್ಲೇಷಿಸುವ ಜವಾಬ್ದಾರಿಯನ್ನು ಈ ಸಮಿತಿಗೆ ನೀಡಲಾಗಿದೆ’ ಎಂದು ಸಚಿವಾಲಯ ಹೇಳಿದೆ.
ಈ ಸಮಿತಿಯಲ್ಲಿ ಭೌತಿಕ ಹಕ್ಕುಗಳ ವಕೀಲರು, ಸರ್ಕಾರಿ ಅಧಿಕಾರಿಗಳು ಮತ್ತು ಉದ್ಯಮದ ಪ್ರತಿನಿಧಿಗಳು ಇದ್ದಾರೆ. ಹಕ್ಕುಸ್ವಾಮ್ಯ ಕಾಯ್ದೆ 1957ರ ಅಡಿಯಲ್ಲಿ ಎದುರಾಗುವ ಕಾನೂನು ಸವಾಲುಗಳನ್ನು ಪರಿಹರಿಸುವ ಮತ್ತು ಸರ್ಕಾರಕ್ಕೆ ಸೂಕ್ತ ಶಿಫಾರಸುಗಳನ್ನು ಮಾಡುವ ಅಧಿಕಾರವನ್ನು ನೀಡಲಾಗಿದೆ.
ತನ್ನ ಕೃತಕ ಬುದ್ಧಿಮತ್ತೆಯ ಕಲಿಕೆಗೆ ನೆರವಾಗುವ ದೃಷ್ಟಿಯಿಂದ ಹಕ್ಕುಸ್ವಾಮ್ಯ ಇರುವ ವಿಷಯ ವಸ್ತುಗಳನ್ನು ಅನುಮತಿ ಇಲ್ಲದೆ ಬಳಸಲಾಗುತ್ತಿದೆ ಎಂದು ಓಪನ್ಎಐ ವಿರುದ್ಧ ಎನ್‌ಡಿಟಿವಿ, ಇಂಡಿಯನ್ ಎಕ್ಸ್‌ಪ್ರೆಸ್ ಹಾಗೂ ಹಿಂದುಸ್ಥಾನ್ ಟೈಮ್ಸ್ ಮತ್ತು ಡಿಜಿಟಲ್ ಸುದ್ದಿ ಪಬ್ಲಿಷರ್ ಸಂಘದವರು ಪ್ರಕರಣ ದಾಖಲಿಸಿದ್ದರು.
‘ತನ್ನ ಚಾಟ್‌ಬಾಟ್ ಅನ್ನು ತರಬೇತುಗೊಳಿಸಲು ಮುಕ್ತವಾಗಿ ಲಭ್ಯವಿರುವ ಸಾರ್ವಜನಿಕ ಮಾಹಿತಿಯನ್ನಷ್ಟೇ ಬಳಸಿಕೊಳ್ಳಲಾಗುತ್ತಿದೆ. ಭಾರತೀಯ ಹಕ್ಕುಸ್ವಾಮ್ಯ ಕಾನೂನಿನ್ವಯ ಇದು ಉಲ್ಲಂಘನೆಯಲ್ಲ. ಜತೆಗೆ ತಮ್ಮ ಮಾಹಿತಿಯನ್ನು ಬಳಸಲಿಚ್ಛಿಸದ ಅಂತರ್ಜಾಲತಾಣಗಳಿಗೆ ಇದರಿಂದ ಹೊರಗುಳಿಯುವ ಅವಕಾಶ ನೀಡಲಾಗಿದೆ’ ಎಂದು ಓಪನ್ಎಐ ಹೇಳಿದೆ.
ಜಾಗತಿಕ ಮಟ್ಟದಲ್ಲಿ ಬಹಳಷ್ಟು ಬರಹಗಾರರು, ಸುದ್ದಿ ಸಂಸ್ಥೆಗಳು ಮತ್ತು ಸಂಗೀತಗಾರರು ನ್ಯಾಯಾಲಯದ ಮೊರೆ ಹೋಗಿದ್ದು, ಕೃತಕಬುದ್ಧಿಮತ್ತೆ ತರಬೇತಿಗೆ ಹಕ್ಕುಸ್ವಾಮ್ಯ ಇರುವ ತಮ್ಮ ವಿಷಯವಸ್ತುಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಯಾವುದೇ ಪಾವತಿಯನ್ನಾಗಲಿ ಅಥವಾ ಅನುಮತಿಯನ್ನಾಗಲಿ ನೀಡಿಲ್ಲ ದೂರಿರುವುದು ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.