ನಾರಾಯಣಪುರ: ಐವರು ಮಹಿಳೆಯರು ಸೇರಿ ಹನ್ನೆರಡು ನಕ್ಸಲರು ಪೊಲೀಸರು ಮತ್ತು ಇಂಡೋ ಟಿಬೆಟಿಯನ್ ಗಡಿ (ಐಟಿಬಿಪಿ) ಪೊಲೀಸ್ ಅಧಿಕಾರಿಗಳ ಮುಂದೆ ಶರಣಾಗಿದ್ದಾರೆ.
ಶರಣಾದವರ ಪೈಕಿ ಹೆಚ್ಚಿನವರು ಮಾವೋವಾದಿಗಳ ಪ್ರದೇಶ ಸಮಿತಿ ಸದಸ್ಯರಾಗಿದ್ದು, ಇವರ ತಲೆಗೆ ಒಟ್ಟು ₹18 ಲಕ್ಷ ಇನಾಮು ಘೋಷಿಸಲಾಗಿತ್ತು.
ಟೊಳ್ಳು ಮತ್ತು ಅಮಾನವೀಯ ಮಾವೋವಾದಿ ಸಿದ್ಧಾಂತ ಮತ್ತು ಸ್ಥಳೀಯ ಬುಡಕಟ್ಟು ಜನಾಂಗದವರ ಮೇಲೆ ನಡೆಸಿದ ದೌರ್ಜನ್ಯಗಳಿಂದ ನಿರಾಶೆಗೊಂಡ ಕೆಲ ನಕ್ಸಲರು ಹಿರಿಯ ಪೊಲೀಸ್ ಮತ್ತು ಐಟಿಬಿಪಿ ಅಧಿಕಾರಿಗಳ ಮುಂದೆ ಶರಣಾದರು ಎಂದು ನಾರಾಯಣಪುರ ಪೊಲೀಸ್ ವರಿಷ್ಠಾಧಿಕಾರಿ ರಾಬಿನ್ಸನ್ ಗುರಿಯಾ ಹೇಳಿದ್ದಾರೆ.
'ಉನ್ನತ ಮಾವೋವಾದಿ ನಾಯಕರು ಬುಡಕಟ್ಟು ಜನಾಂಗದವರ ನಿಜವಾದ ಶತ್ರುಗಳು. ನೀರು, ಅರಣ್ಯ ಮತ್ತು ಭೂಮಿಯನ್ನು ಸೇರಿದಂತೆ ಸಮಾನತೆ ಮತ್ತು ನ್ಯಾಯವನ್ನು ರಕ್ಷಿಸುವ ಸುಳ್ಳು ಭರವಸೆಗಳೊಂದಿಗೆ ಸ್ಥಳೀಯರನ್ನು ದಾರಿ ತಪ್ಪಿಸುತ್ತಿದ್ದಾರೆ. ಸ್ಥಳೀಯರನ್ನು ಶೋಷಣೆಗೆ ಗುರಿ ಪಡಿಸಿದ್ದು, ಗುಲಾಮರನ್ನಾಗಿ ಮಾಡಿಕೊಂಡಿದ್ದಾರೆ' ಎಂದು ಶರಣಾದ ನಕ್ಸಲರು ಪೊಲೀಸರಿಗೆ ತಿಳಿಸಿದ್ದಾರೆ.
ಶರಣಾದ ಎಲ್ಲಾ ನಕ್ಸಲರಿಗೆ ತಲಾ ₹50,000 ಸಹಾಯಧನ ನೀಡಲಾಗಿದ್ದು, ಸರ್ಕಾರದ ಯೋಜನೆಗಳ ಪ್ರಕಾರ ಅವರಿಗೆ ಮತ್ತಷ್ಟು ಪುನರ್ವಸತಿ ಕಲ್ಪಿಸಲಾಗುವುದು ಎಂದು ರಾಬಿನ್ಸನ್ ಹೇಳಿದ್ದಾರೆ.
ಇದರೊಂದಿಗೆ ಈ ವರ್ಷ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 177 ನಕ್ಸಲರು ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.